ಮೇಲುಕೋಟೆ: ನ.24ರಂದು ನಡೆಯ ಬೇಕಾಗಿದ್ದ ಮೇಲುಕೋಟೆ ಶ್ರೀ ಚೆಲುವ ನಾರಾಯಣ ಸ್ವಾಮಿ ಅಷ್ಟ ತೀರ್ಥೋತ್ಸವ ಮತ್ತು ತೊಟ್ಟಿಲಮಡು ಜಾತ್ರಾ ಮಹೋತ್ಸ ವವನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ನಿರ್ಬಂಧಿಸಿ ಆದೇಶಿಸಿದ್ದಾರೆ.
ನ.22ರಂದು ರಾತ್ರಿ ನಡೆಯುವ ರಾಜಮುಡಿ ಕಿರೀಟ ಧಾರಣ ಮಹೋತ್ಸವ ಹಾಗೂ 10 ದಿನಗಳ ಬ್ರಹ್ಮೋತ್ಸವ ಕಾರ್ಯಕ್ರಮಗಳನ್ನು ದೇವಾಲಯದಒಳ ಪ್ರಾಕಾರದಲ್ಲಿ ನಡೆಸಲು ಸೂಚನೆ ನೀಡಿದ್ದಾರೆ. ದೇವಾಲಯದ ಸಿಇಒ ಸಲ್ಲಿಸಿದ ವರದಿಯಾಧರಿಸಿ ಕೊರೊನಾ ಹಿನ್ನೆಲೆಯಲ್ಲಿ ಅಷ್ಟ ತೀರ್ಥೋತ್ಸವವನ್ನು ನಿರ್ಬಂಧಿಸಿ ಆದೇಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಕ್ತರು ಸಹಕಾರ ನೀಡಿ: ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ರಾಜಮುಡಿ ಬ್ರಹ್ಮೋತ್ಸವ 27ರವರೆಗೆ ನಡೆಯಲಿದ್ದು, ಡೀಸಿ ಆದೇಶದಂತೆ ಎಲ್ಲ ಉತ್ಸವಗಳನ್ನೂ ದೇವಾಲಯದ ಒಳಪ್ರಕಾರದಲ್ಲಿ ನಡೆಸಲಾಗುತ್ತದೆ. ರಾಜಮುಡಿ ಕಿರೀಟವನ್ನು 22ರಂದು ಜಿಲ್ಲಾ ಖಜಾನೆಯಿಂದ ಪೊಲೀಸ್ ಭದ್ರತೆಯಲ್ಲಿ ತಂದು ಬ್ರಹ್ಮೋತ್ಸವ ಮುಗಿದ ನಂತರ 28ರಂದು ಜಿಲ್ಲಾ ಖಜಾನೆಗೆ ಮರಳಿಸಲಾಗುತ್ತದೆ. ರಾಜಮುಡಿ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತದೆ. ಭಕ್ತರು ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.
ರಾಜಮುಡಿ ಕಾರ್ಯಕ್ರಮಗಳು: ನ.18ರಂದು ರಕ್ಷಾ ಬಂಧನ ಧ್ವಜಪ್ರತಿಷ್ಠೆ, 19ರಂದು 1ನೇ ತಿರುನಾಳ್ ಧ್ವಜಾ ರೋಹಣ, ತಿರುಪ್ಪರೈ, 20ರಂದು 2ನೇತಿರುನಾಳ್ ಶೇಷವಾಹನ,21ರಂದು3ನೇ ತಿರುನಾಳ್ ಚಂದ್ರ ಮಂಡಲ ವಾಹನ, 22 ರಂದು ರಾಜಮುಡಿ ಉತ್ಸವ, 23ರಂದು 5ನೇ ತಿರುನಾಳ್ ಗರುಡವಾಹನ, 24 ರಂದು ಆನೆ ವಸಂತ, 25ರಂದು 7ನೇ ತಿರುನಾಳ್ ಸಾಂಕೇತಿಕ ರಥೋತ್ಸವ, 26 ರಂದು ಸಂಧಾನ ಸೇವೆ, 27ರಂದು 9ನೇ ತಿರುನಾಳ್ ಉತ್ಥಾನದ್ವಾದಶಿ ಪುಷ್ಪ ಬೃಂದಾವನೋತ್ಸವ, 28 ಪುಷ್ಪಯಾಗ ಹನುಮಂತವಾಹನ ನಡೆಯಲಿದೆ. ಎಲ್ಲ ಉತ್ಸವಗಳೂ ದೇವಾಲಯದ ಒಳಪ್ರಾಕಾರದಲ್ಲೇ ನಡೆಯಲಿದೆ ಎಂದು ದೇವಾಲಯದ ಅಧಿಕಾರಿ ಮಂಗಳಮ್ಮ ತಿಳಿಸಿದ್ದಾರೆ.