Advertisement

ಮರಳುಗಾರಿಕೆಗೆ ಸರಳ ಸೂತ್ರ: ರಘುಪತಿ ಭಟ್‌

09:25 AM May 22, 2018 | Harsha Rao |

ಉಡುಪಿ: ಉಡುಪಿಯ ಮರಳುಗಾರಿಕೆ ಸಮಸ್ಯೆ ಬಗ್ಗೆ ಆಳವಾದ ಅರಿವು ಇದೆ. ಈ ಬಗ್ಗೆ ಸರಳ ಸೂತ್ರವನ್ನು ತರಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್‌ ಅವರು ಹೇಳಿದರು.

Advertisement

ಶಾಸಕರಾದ ಬಳಿಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪ್ರಥಮ ಪತ್ರಿಕಾಗೋಷ್ಠಿ ನಡೆಸಿ ಅವರು ಈ ವಿಷಯ ತಿಳಿಸಿದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ತಿಂಗಳೊಳಗೆ ಮರಳಿನ ಸಮಸ್ಯೆ ಬಗೆಹರಿ ಸುವ ಆಶ್ವಾಸನೆ ಕೊಟ್ಟಿದ್ದೆ. ನಮ್ಮ ಸರಕಾರ ಬಂದಿಲ್ಲ. ಆದರೂ ಶಾಸಕನಾಗಿ ನನ್ನ ಇತಿಮಿತಿಯೊಳಗೆ ಸಾಧ್ಯವಿರುವ ಕೆಲಸ ಮಾಡುತ್ತೇನೆ. ಸದ್ಯ ವಿಧಾನಪರಿಷತ್‌ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಇನ್ನೊಂದು ತಿಂಗಳು ಅಧಿಕಾರಿಗಳ ಸಭೆ ನಡೆಸಲು ಆಗುವುದಿಲ್ಲ. ಆ. 1ರಿಂದ ಹೊಸ ಲೀಸ್‌ನಲ್ಲಿ ಪ್ರಾರಂಭಗೊಳ್ಳಲಿರುವ ಮರಳುಗಾರಿಕೆ ಸಂದರ್ಭ ಸರಳತೆಯನ್ನು ತರಲಾಗುವುದು. ದೋಣಿಗಳಿಗೆ ಜಿಪಿಎಸ್‌ ಅವೈಜ್ಞಾನಿಕವಾಗಿದೆ. ಜಿಲ್ಲಾಡಳಿತದ ಕೆಲವು ತಪ್ಪು ನಿರ್ಧಾರಗಳನ್ನು ಸರಿಪಡಿಸಲಾಗುವುದು. ನಮ್ಮ ಸರಕಾರವಿಲ್ಲದಿದ್ದರೂ, ಜಿಲ್ಲೆಯ ಐವರು ಶಾಸಕರು ನಮ್ಮವರು. ಸಮಸ್ಯೆ ಬಗೆಹರಿಯದಿದ್ದಲ್ಲಿ ಸದನದಲ್ಲಿ ನಮ್ಮ ದನಿ ಗಟ್ಟಿಯಾಗಿರುತ್ತದೆ ಎಂದರು.

ಆಸ್ಪತ್ರೆ ಒಡಂಬಡಿಕೆ ತಿದ್ದುಪಡಿ-ಆಗ್ರಹ
ಉಡುಪಿ ನಗರದಲ್ಲಿ ಖಾಸಗಿಯವರು ಮುನ್ನಡೆ ಸುತ್ತಿರುವ 200 ಬೆಡ್‌ನ‌ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರಕಾರಕ್ಕೆ ಹಸ್ತಾಂತರ ಮಾಡಬೇಕು. ಜಿಲ್ಲಾ ಸರ್ಜನ್‌ ಸುಪರ್ದಿಯಲ್ಲಿ ಆಸ್ಪತ್ರೆ ಕಾರ್ಯಾಚರಿಸಬೇಕು. ಖಾಸಗಿಯವರೇ ನಡೆಸಲು ನನ್ನ ಒಪ್ಪಿಗೆ ಇಲ್ಲ. ಇನ್ನೊಂದು 400 ಬೆಡ್‌ಗಳ ಆಸ್ಪತ್ರೆಗೆ ನನ್ನ ತಕರಾರಿಲ್ಲ. ಆಸ್ಪತ್ರೆಯವರು ಸರಕಾರದೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪತ್ರ ತಿದ್ದುಪಡಿ ಮಾಡಲು ಸರಕಾರಕ್ಕೆ ಆಗ್ರಹಿಸುತ್ತೇನೆ. ಆಸ್ಪತ್ರೆ ನಿರ್ವಹಣ ಸಮಿತಿಯಲ್ಲಿ ಜನಪ್ರತಿನಿಧಿಗಳಿರಬೇಕು. ಸರಕಾರಿ ವೈದ್ಯರೂ ಈ ಆಸ್ಪತ್ರೆಯಲ್ಲಿರಬೇಕು. ಖಾಸಗಿ ಯವರು ವೈದ್ಯರು, ನರ್ಸ್‌, ತಂತ್ರಜ್ಞರನ್ನು ನೇಮಿಸಿಕೊಳ್ಳಲಿ, ಸಲಕರಣೆ ಮೊದಲಾದ ಸೌಲಭ್ಯಗಳನ್ನು ಒದಗಿಸಲಿ. ಇದಕ್ಕೆ ಖಾಸಗಿ ಸಂಸ್ಥೆಯ ಮುಖ್ಯಸ್ಥರು ಒಪ್ಪಿಗೆ ಸೂಚಿಸುವ ಭರವಸೆ ನನಗಿದೆ ಎಂದರು.

ವಾರಾಹಿ: ಟೆಂಡರ್‌ ಬದಲು
ವಾರಾಹಿ ಯೋಜನೆ ಮುಂದುವರಿಸುತ್ತೇನೆ. ಆದರೆ ಹಿಂದಿನ ಯೋಜನಾ ವರದಿ ಸರಿ ಇಲ್ಲ. ಈಗಿರುವ ಟೆಂಡರ್‌ನಲ್ಲಿ ಕಾರ್ಯ ಆಗದು. ತಾಂತ್ರಿಕ ಸಮಸ್ಯೆ ಸರಿಪಡಿಸಿ ಟೆಂಡರ್‌ ಕರೆದು ನೀರು ತರುವ ಯೋಜನೆ ಅನುಷ್ಠಾನಿಸಲಾಗುವುದು ಎಂದರು.

ಮೇ 26: ವಿಜಯೋತ್ಸವ
ಕಾರ್ಯಕರ್ತರ ಆಗ್ರಹದಂತೆ ಮೇ 26ರಂದು ವಿಜಯೋತ್ಸವ ಮೆರವಣಿಗೆ ನಡೆಯಲಿದ್ದು, ಸುಮಾರು 50 ಕಿ.ಮೀ. ವಿಜಯೋತ್ಸವ ಸಾಗಲಿದೆ. ಉಡುಪಿ ಚಿತ್ತರಂಜನ್‌ ಸರ್ಕಲ್‌ನಲ್ಲಿ ರಾತ್ರಿ 7 ಗಂಟೆಗೆ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದರು.

Advertisement

ಹಿಂದಿನ ಶಾಸಕರ 2,026 ಕೋ.ರೂ. ಸುಳ್ಳು ಅಭಿವೃದ್ಧಿಗೆ ಜನ ಮರುಳಾಗಿಲ್ಲ. ಅವರ ಸುಳ್ಳುಗಳೇ ನನ್ನ ಗೆಲುವಿನ ಸಹಕಾರಿಯಾದವು. ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡುತ್ತಿದ್ದಾರೆ ಎಂದು ಆರೋಪಿ ಸಲಾಗಿದೆ. ನಮ್ಮವರು ಎಲ್ಲಿಯೂ ಹಲ್ಲೆ ಮಾಡಿಲ್ಲ, ಅದಕ್ಕೆ ಅವಕಾಶ ನಾವು ಕೊಟ್ಟಿಲ್ಲ ಎಂದರು.

ನೀರು ಹರಿಯುವ ತೋಡುಗಳಲ್ಲಿ ಹೂಳೆತ್ತುವ ಕಾರ್ಯವಾಗಿಲ್ಲ. ನೀತಿ ಸಂಹಿತೆ ಇರುವ ಕಾರಣ ಕೆಲಸ ಮಾಡಲು ಫೋನ್‌ನಲ್ಲಿ ಸೂಚಿಸಿದ್ದೇನೆ ಎಂದರು.

ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ದಿನಕರ ಬಾಬು, ಉಪೇಂದ್ರ ನಾಯಕ್‌, ಕೆ. ರಾಘವೇಂದ್ರ ಕಿಣಿ, ಉಮೇಶ್‌ ಪೂಜಾರಿ, ದಾವೂದ್‌ ಅಬೂಬಕ್ಕರ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಫ್ಲೆಕ್ಸ್‌ ಅಳವಡಿಕೆ, ಸಮ್ಮಾನ ಬೇಡ
ಜನತೆ ನನ್ನನ್ನು ಶಾಸಕನನ್ನಾಗಿ ಆರಿಸಿದ್ದಾರೆ. ಈ ಜಯವೇ ಸಾರ್ವಜನಿಕರ ಸಮ್ಮಾನ. ಪ್ರತ್ಯೇಕ ಸಮ್ಮಾನವನ್ನು ಯಾರೂ ಮಾಡಬಾರದು. ಶಾಸಕತ್ವ ಪದವಿಯಲ್ಲ, ಜವಾಬ್ದಾರಿ. ಹಾಗಾಗಿ ಯಾವುದೇ ಕಾರ್ಯಕ್ರಮದಲ್ಲಿ ಸಮ್ಮಾನಕ್ಕಾಗಿ ಆಹ್ವಾನಿಸಬಾರದು ಎಂದು ವಿನಂತಿಸಿಕೊಂಡ ರಘುಪತಿ ಭಟ್‌, ಫ್ಲೆಕ್ಸ್‌ ಹಾಕಿ ಶುಭ ಕೋರುವುದೂ ಬೇಡ ಎಂದು ಕೋರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next