Advertisement

ದಸರಾ ಸರಳ ಆಚರಣೆ-ಎಲ್ಲೆಡೆ ಪೂಜೆ

03:30 PM Oct 27, 2020 | Suhan S |

ಬೀದರ: ಅಪ್ಪಟ ದೇಶಿ ಹಬ್ಬ ವಿಜಯ ದಶಮಿ (ದಸರಾ)ಯನ್ನು ರವಿವಾರ ಮತ್ತು ಸೋಮವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಹೆಮ್ಮಾರಿ ಕೋವಿಡ್ ಆತಂಕ ಮತ್ತು ನೆರೆ ಪರಿಸ್ಥಿತಿ ನಡುವೆಯೂ ಹಬ್ಬವನ್ನು ಸಡಗರದಿಂದ ನೆರವೇರಿತು.

Advertisement

ನಗರ ಹಾಗೂ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚಿತ್ತು. ಕೆಲವು ಭಾಗದಲ್ಲಿ ರವಿವಾರ ಮತ್ತು ಉಳಿದೆಡೆ ಸೋಮವಾರ ಹಬ್ಬ ಆಚರಿಸಲಾಯಿತು. ವಯಸ್ಕರು ಸೇರಿದಂತೆ ಮಕ್ಕಳು ಹೊಸ ಬಟ್ಟೆಗಳನ್ನು ತೊಟ್ಟು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನವರಾತ್ರಿಯ ಒಂಬತ್ತು ಮತ್ತು ಐದು ದಿನಗಳವರೆಗೆ ದೇವಸ್ಥಾನ, ಮನೆ ಮನೆಯಲ್ಲಿ ದೇವಿ ಪೂಜೆ, ಆಯುಧ ಪೂಜೆ ನಡೆಸಲಾಯಿತು. ನಗರದ ಹಳ್ಳದಕೇರಿ, ದೇವಿ ಕಾಲೋನಿ, ಮಂಗಲಪೇಟ, ದರ್ಜಿಗಲ್ಲಿ, ಬ್ರಹ್ಮನವಾಡಿಯ ಭವಾನಿ ಮಂದಿರಗಳಲ್ಲಿ ಒಂಬತ್ತು ದಿನಗಳ ಕಾಲ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು.

ಬನ್ನಿ ಕೊಟ್ಟು ಶುಭ ಕೋರಿದರು: ಹಬ್ಬದ ನಿಮಿತ್ತ ವಿಶೇಷವಾಗಿ ಹೋಳಿಗೆ, ಪಾಯಸಾ ಸೇರಿದಂತೆ ಸಿಹಿ ಪದಾರ್ಥಗಳನ್ನು ಸಿದ್ಧಪಡಿಸಿ ಕುಟುಂಬ ವರ್ಗ, ಆಪ್ತರೊಂದಿಗೆ ಸವಿಯುವುದು. ನಂತರ ಸಾಯಂಕಾಲ ಮಕ್ಕಳು, ಹಿರಿಯರು ಸೇರಿ ಬನ್ನಿ ಮರದ ಪೂಜೆ ಮಾಡಿ ಬನ್ನಿ ಹಂಚಿಕೊಳ್ಳುವ ಶುಭ ಕೋರಿದರು. ಇನ್ನೂ ಗ್ರಾಮೀಣ ಭಾಗದಲ್ಲಿ ಇದರ ಸಂಭ್ರಮ ಹೆಚ್ಚಾಗಿ ಕಂಡುಬಂದಿತು.

ಇಲ್ಲಿನ ಜನವಾಡಾ ರಸ್ತೆಯ ಹನುಮಾನ ಮಂದಿರದ ಬಳಿ ಸೋಮವಾರ ಸಂಜೆ ಹೊತ್ತಿಗೆ ಸಾರ್ವಜನಿಕರು ಜಮಾಯಿಸಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ನಂತರ ಬನ್ನಿಯನ್ನು ಖರೀದಿ ಮಾಡಿ ಸಂಬಂ ಕರು, ಗೆಳೆಯವರಿಗೆ ನೀಡಿ ಹಬ್ಬದ ಶುಭಾಷಯ ಹೇಳುವುದು ಕಂಡು ಬಂತು. ದೇವಸ್ಥಾನದ ಪ್ರದೇಶದಲ್ಲಿ ಜಾತ್ರೆಯ ವಾತಾವರಣವೇ ಸೃಷ್ಟಿಯಾಗಿತ್ತು. ಲಾಡಗೇರಿಯಭವಾನಿ ಮಾತಾ ಮಂದಿರದಿಂದ ನಗರದಲ್ಲಿ ಮೆರವಣಿಗೆ ನಡೆಸಲಾಯಿತು.

ಕೋವಿಡ್ ಸೋಂಕು ಜತೆಗೆ ಭಾರಿ ಮಳೆಯಿಂದ ರೈತ ಬಾಂಧವರು ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿದ್ದರು. ಆದರೂ ಹಬ್ಬದ ಸಡಗರ ಏನೂಕಡಿಮೆ ಆಗಿರಲಿಲ್ಲ. ಮಕ್ಕಳು, ವಯಸ್ಕರು ಹೊಸ ಬಟ್ಟೆ ತೊಟ್ಟು, ಹೊಲಕ್ಕೆ ತೆರಳಿ ಬನ್ನಿ ತೆಗೆದುಕೊಂಡು, ಮೊದಲು ದೇವರಿಗೆ ಸಮರ್ಪಿಸಿದರು. ಬಳಿಕ ಸಂಬಂಧಿಕರು, ಸ್ನೇಹಿತರಿಗೆ ಬನ್ನಿ ಕೊಟ್ಟು ಹಬ್ಬದ ಸಂಭ್ರಮದ ಹಂಚಿಕೊಂಡರು.

Advertisement

ಹಿರೇಮಠ ಸಂಸ್ಥಾನದಿಂದ ಕಲ್ಯಾಣ ಕ್ರಾಂತಿ ವಿಜಯೋತ್ಸವ :

ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದ ವತಿಯಿಂದ ಸೋಮವಾರ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ತ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ದಿವ್ಯ ನೇತೃತ್ವದಲ್ಲಿ ನಡೆದ ಮೆರವಣಿಗೆಯು ಹಳೆ ಪಟ್ಟಣದ ಹಿರೇಮಠ ಸಂಸ್ಥಾನದಿಂದ ಚಾವಡಿಗಲ್ಲಿ, ತೀನದುಕಾನಗಲ್ಲಿ, ಗಂಜ ಏರಿಯಾದ ಬಸ್‌ ನಿಲ್ದಾಣ, ಡಾ| ಬಾಬಾ ಸಾಹೇಬ ಅಂಬೇಡ್ಕರ್‌ವೃತ್ತದ ಮೂಲಕ ಹಾದು ಚನ್ನಬಸವಾಶ್ರಮದಲ್ಲಿ ಸಮಾವೇಶಗೊಂಡಿತು.

ಮಹಾಲಿಂಗ ಸ್ವಾಮಿಗಳು, ಜಯದೇವ ಸ್ವಾಮಿಗಳು, ಡಿ.ಕೆ. ಸಿದ್ರಾಮ, ಸಿದ್ರಾಮಪ್ಪ ವಂಕೆ, ರಾಚಪ್ಪ ಗೋರ್ಟೆ, ರಾಜಶೇಖರ ಅಸ್ಟೂರೆ, ರಾಜು ಜುಬರೆ, ಮೋಹನ ರೆಡ್ಡಿ, ಸುರೇಶ ಬಿರಾದಾರ, ಪ್ರಕಾಶ ಮಾಶೆಟ್ಟೆ, ಹೊಸಾಳೆ, ಶಿಖರೇಶ್ವರ ಶೆಟಕಾರ ಸೇರಿದಂತೆ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next