Advertisement

ಉಡುಪಿ, ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಿಂದ ಕ್ರಿಸ್ಮಸ್‌ ಸಂದೇಶ

02:00 AM Dec 21, 2021 | Team Udayavani |

ಉಡುಪಿ: ಕ್ರೈಸ್ತ ಜಯಂತಿಯ ಶುಭಾಶಯಗಳು. ಜಗತ್ತಿನಾದ್ಯಂತ ಜಾತಿ, ಮತ, ಧರ್ಮ, ಭೇದಭಾವವಿಲ್ಲದೆ ಸರ್ವರೂ ಸಂತೋಷದಿಂದ ಆಚರಿಸುವ ಹಬ್ಬ ಕ್ರಿಸ್ಮಸ್‌. ಪ್ರಭು ಏಸು ಮಾನವರಾಗಿ ಒಂದು ಗೋದಲಿಯಲ್ಲಿ ಜನಿಸಿದರು. ದೀನರಾಗಿ ನಮ್ಮ ಮಧ್ಯೆ ವಾಸ ಮಾಡಿದರು. ಇದರ ವಿಶೇಷತೆ ದೀನತೆಯಾಗಿದೆ. ಪ್ರಭು ಏಸು ಶಾಂತಿಯ ದೂತರಾಗಿ ಬಂದರು. ಅವರು ಜನಿಸಿದಾಗ ದೇವದೂತರು ಆಡಿದ ಗೀತೆ, ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ. ಈ ಶಾಂತಿ, ಸಮಾಧಾನ ಸದಾ ನಮ್ಮೊಡನೆ ಇರಲಿ ಎಂದು ಪ್ರಾರ್ಥಿಸುತ್ತೇನೆ.

Advertisement

ಡಿ. 25ರಂದು ಜಗತ್ತಿನಾದ್ಯಂತ ಕ್ರಿಸ್ಮಸ್‌ ಹಬ್ಬ ಆಚರಿಸಲಾಗುತ್ತದೆ. ಕೋವಿಡ್‌ 3ನೇ ಅಲೆ ಅಪ್ಪಳಿಸುತ್ತಿದೆ. ಆದ ಕಾರಣ ನಮ್ಮ ಧರ್ಮಪ್ರಾಂತದಲ್ಲಿ ಈ ವರ್ಷ ಪೂಜೆಗೆ ಮಾತ್ರ ಆದ್ಯತೆ ನೀಡುತ್ತೇವೆ. ಜನದಟ್ಟನೆ ಕಡಿಮೆ ಮಾಡಲು ಪೂಜೆಯ ಸಂಖ್ಯೆ ಹೆಚ್ಚಿಸಲಿದ್ದೇವೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ, ಜನಸೇರಲು ಅವಕಾಶವಿಲ್ಲ. ಪೂಜೆಗೆ ಆಗಮಿಸುವಾಗ ಕೋವಿಡ್‌ ನಿಯಮಾವಳಿ ಪಾಲಿಸಲು ಸೂಚನೆ ನೀಡಲಾಗಿದೆ. ಸರಳ ಹಾಗೂ ಭಕ್ತಿ ಪೂರ್ವಕವಾಗಿ ಹಬ್ಬವನ್ನು ಆಚರಿಸಲಿದ್ದೇವೆ.

ಧರ್ಮಪ್ರಾಂತದಲ್ಲಿ ವಿಶೇಷವಾಗಿ ಲಸಿಕೆ ಕಾರ್ಯಕ್ರಮವನ್ನು ಧರ್ಮಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಉಡುಪಿ ಧರ್ಮ ಪ್ರಾಂತದಲ್ಲಿ ಶೇ. 95ಕ್ಕಿಂತ ಹೆಚ್ಚಿನವರು ಲಸಿಕೆ ಪಡೆದುಕೊಂಡಿದ್ದಾರೆ.
-ಡಾ| ಜೆರಾಲ್ಡ್  ಐಸಾಕ್‌ ಲೋಬೋ,
ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು

ಜಗಕ್ಕೆಲ್ಲ ಪರಮಾನಂದ ತರುವ ಹಬ್ಬ
ಬೆಳ್ತಂಗಡಿ: ನಾಡಿನ ಸಮಸ್ತ ಜನರಿಗೆ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳನ್ನು ಪ್ರೀತಿಯಿಂದ ಕೋರುತ್ತೇನೆ. ಜಗಕ್ಕೆಲ್ಲ ಪರಮಾನಂದವನ್ನು ತರುವ ಕ್ರಿಸ್ಮಸ್‌ ಹಬ್ಬದಂದು ದೇವರ ಪುತ್ರರಾದ ಶ್ರೀ ಯೇಸುಕ್ರಿಸ್ತರು ನಮ್ಮ ನಾಡನ್ನು ಆಶೀರ್ವದಿಸಲೆಂದು ಪ್ರಾರ್ಥಿಸುತ್ತೇನೆ.

ಅಸತ್ಯ, ಅಜ್ಞಾನ ಮತ್ತು ಮರಣದಲ್ಲಿ ಮುಳುಗಿ ದಾರಿ ಕಾಣದೆ ಕತ್ತಲಲ್ಲಿ ವಾಸಿಸುತ್ತಿದ್ದ ಜನರಿಗೆ ಸತ್ಯವನ್ನೂ ಬೆಳಕನ್ನೂ ನಿತ್ಯಜೀವವನ್ನೂ ನೀಡಲೆಂದು ಬಂದವರೇ ಯೇಸುಕ್ರಿಸ್ತರು. ಅವರಲ್ಲಿ ನಂಬಿಕೆಯಿಟ್ಟು ಅವರನ್ನು ತಮ್ಮ ಹೃದಯಕ್ಕೆ ಬರಮಾಡಿಕೊಳ್ಳುವವರಿಗೆ ದೇವರ ಮಕ್ಕಳಾಗಲು ಶಕ್ತಿಯನ್ನು ಅವರು ನೀಡುವರು.
ಪರಿಶುದ್ಧ ಹೃದಯದಲ್ಲಿ ಮಾತ್ರ ದೇವರು ವಾಸವಿರುತ್ತಾರೆ. ಆದ್ದರಿಂದ ನಮ್ಮ ಹೃದಯಗಳಿಂದ ಎಲ್ಲ ಕೆಡುಕುಗಳನ್ನು ನೀಗಿಸಿ ಶುದ್ಧವಾದ ನಮ್ಮ ಹೃದಯಕ್ಕೆ ಯೇಸುವನ್ನು ಬರಮಾಡಿಕೊಳ್ಳೋಣ. ಆಗ ಮಾನವರಾದ ನಮಗೆ ಮುಕ್ತಿ ಲಭಿಸುತ್ತದೆ.

Advertisement

ಸಮಾಜದಲ್ಲಿ ನೆಮ್ಮದಿ, ಏಕತೆ ಮತ್ತು ನೈಜವಾದ ಸಮೃದ್ಧಿ ನೆಲೆಯಾಗಬೇಕಾದರೆ ಪ್ರತಿಯೊಬ್ಬರ ಹೃದಯದಲ್ಲಿಯೂ ದೇವರಿಗೆ ವಾಸಿಸಲು ಅವಕಾಶ ನೀಡಬೇಕು. ನಾಡಿನ ಸಮಸ್ತ ಬಾಂಧವರಿಗೆ ಕ್ರಿಸ್ಮಸ್‌ ಹಬ್ಬದ ಶುಭಾಶಯಗಳನ್ನು ಕೋರುವಾಗ ಸುಖ, ಶಾಂತಿ ಮತ್ತು ನೆಮ್ಮದಿ ನಮ್ಮದಾಗಲೆಂದು ಪ್ರಾರ್ಥಿಸುತ್ತೇನೆ.
-ರೈ| ರೆ| ಡಾ| ಲಾರನ್ಸ್‌ ಮುಕ್ಕುಯಿ
ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next