ಅವನ ಹೆಸರು ರಮಣ ಅಂತಿಟ್ಕೊಳ್ಳಿ. ಮದುವೆ ವಯಸ್ಸು. ಅಪ್ಪ ಅಮ್ಮ ನೋಡಿದ, ತಾನೂ ಮೆಚ್ಚಿದ ಚೆಂದುಳ್ಳಿ ಚೆಲುವೆ ರಾಧಾಳನ್ನು ಒಪ್ಪಿ ಮದುವೆಯಾದ. ಒಂದು ತಿಂಗಳು ಭುವಿಯೇ ಸ್ವರ್ಗದಂತಿತ್ತು. ಇವರ ಕರ್ಮ, ಮುಂದಿನ ತಿಂಗಳೇ ಆಷಾಢಮಾಸ. ಒಂದು ತಿಂಗಳು ಅತ್ತೆ ಸೊಸೆ ಒಂದೇ ಕಡೆ ಇರುವಂತಿಲ್ಲ. ಹಾಗೆಂದು ಅಮ್ಮನನ್ನು ಹೊರ ಕಳಿಸಲಾದೀತೇ? ಶಾಸ್ತ್ರ ಶಾಸ್ತ್ರವೇ. ರಮಣ ಹ್ಯಾಪು ಮೋರೆ ಹಾಕಿಕೊಂಡು ಪತ್ನಿಯನ್ನು ತವರು ಮನೆಗೆ ಬಿಟ್ಟುಬಂದ.
ಹಗಲೆಲ್ಲ ಆಫೀಸು, ಗೆಳೆಯರು, ಸುತ್ತಾಟ ಹೇಗೋ ನಡೆಯುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ರಾಧಾ ಕಣ್ಣ ಮುಂದೆ ಕಿಂಕಿಣಿ ನಾದಗೈಯುತ್ತಿದ್ದಳು. ರುಚಿ ಕಂಡ ಬೆಕ್ಕು, ಮನಸೆಂಬ ಮರ್ಕಟ ಸಿಗ್ನಲ್ ಜಂಪ್ ಮಾಡಿದ ಬ್ರೇಕ್‌ಫೇಲ್ ಗಾಡಿಯಂತಾಗಿತ್ತು. ಈಗಿನಂತೆ ಆಗ ಟಿ.ವಿ., ಮೊಬೈಲ್, ಇಂಟರ್‌ನೆಟ್ ಯಾವುದೂ ಇರಲಿಲ್ಲ. ರೇಡಿಯೋ, ಪತ್ರಿಕೆ, ನಾಟಕ, ಸಿನಿಮಾ ಅಷ್ಟೆ.
ಅಂಚೆಯಣ್ಣನೇ ಗತಿಯೆಂದು ರಮಣ, ಪತ್ನಿಗೆ ಕೇವಲ 8 ಪುಟಗಳಷ್ಟು ದೀರ್ಘವಾದ ಪತ್ರ ಬರೆದ. ಅದರಲ್ಲಿ ತನ್ನ ವಿರಹೋತ್ಕಂಠಿತ ಪರಿಸ್ಥಿತಿ, ಅಬ್ಬೇಪಾರಿತನ ಎಲ್ಲವನ್ನೂ ವರ್ಣಿಸಿದ. ಕೊನೆಗೊಂದು ಗ್ಲಾಮರ್ ಟಚ್ ಕೊಟ್ಟರೆ ಹೇಗೆ ಎಂದು ಮನ ಮಂಥಿಸಿದ.
ಆಗೆಲ್ಲ ವಾರಪತ್ರಿಕೆಗಳಲ್ಲಿ ಲಿಪ್‌ಸ್ಟಿಕ್ ಕಂಪನಿಯೊಂದು ತನ್ನ ಜಾಹೀರಾತಿನಲ್ಲಿ ಜವ್ವನೆಯ ಸುಂದರ ತುಟಿಗಳನ್ನು ಮಾತ್ರ ದೊಡ್ಡದಾಗಿ ಪ್ರಕಟಿಸಿ ತನ್ನ ಲಿಪ್‌ಸ್ಟಿಕ್ ಬಗ್ಗೆ ಹೇಳಿಕೊಳ್ಳುತ್ತಿತ್ತು. ರಮಣ, ಆ ತುಟಿಗಳನ್ನು ಮಾತ್ರವೇ ಕತ್ತರಿಸಿ ಪತ್ರದ ಕೊನೆಯಲ್ಲಿ ಅಂಟಿಸಿ ಹೀಗೆಂದು ಬರೆದ -
“ನನ್ನ ಚಿಣಿಮಿಣಿ, ನೀನು ಇಲ್ಲಿಗೆ ಬರುವವರೆಗೂ ಈ ತುಟಿಗಳು ನನ್ನವೇ ಎಂದು ಭಾವಿಸಿ ದಿನಕ್ಕೆ ನೂರು ಬಾರಿ ಚುಂಬಿಸುತ್ತಿರು. ಅಂಥದ್ದೇ ಇನ್ನೊಂದು ಸೆಟ್ ನನ್ನ ಬಳಿಯಿದೆ. ನಾನೂ ನಿತ್ಯ ನೂರು ಪಪ್ಪಿ ಕೊಡುತ್ತೇನೆ. ಬೇಗ ಪತ್ರ ಬರೆ…’ಈ ಪತ್ರವನ್ನು ಅಂಟಿಸಿ ಡಬ್ಬಿಗೆ ಹಾಕಿದ. ವಾರವಾದರೂ ಪತ್ನಿಯಿಂದ ಉತ್ತರವೇ ಬರಲಿಲ್ಲ. ಇವನಿಗೋ ವಿರಹಾ ನೂರು ನೂರು ತರಹಾ. ಕಡೆಗೆ ವೇದನೆ ತಡೆಯಲಾರದೇ ಅತ್ತೆ ಮನೆಗೆ ಓಡಿದ. ಪತ್ನಿ ಸಿಕ್ಕಳು, ಪತ್ರದ ಸುಳಿವಿಲ್ಲ. ಕೇಳಿದರೆ ಅವಳಿಗೂ ಏನೂ ಗೊತ್ತಿಲ್ಲ. ಅರೆ! ಯಾರ ಕೈ ಸೇರಿತಪ್ಪಾ ಆ ಪ್ರಣಯ ಪತ್ರ ಅಂತ ಪೀಕಲಾಟ ಶುರುವಾಯಿತು ರಮಣನಿಗೆ. 3 ದಿನಗಳ ನಂತರ ತವರಿನಿಂದ ಬಂದ ರಾಧಾಳ ತಮ್ಮ ರಾಜೇಶ, ರಮಣನ ಕೈಗೆ ಪತ್ರ ಕೊಟ್ಟು ನಗುತ್ತಾ ಹೇಳಿದ. “ಭಾವ, ತುಟಿಗಳು ತುಂಬಾ ಚೆನ್ನಾಗಿವೆ, ನಿಮ್ಮ ತುಟಿಗಳನ್ನು ನಿಮಗೇ ಒಪ್ಪಿಸುತ್ತಿದ್ದೇನೆ ತಗೊಳ್ಳಿ’.
ಆ ಪತ್ರ ಹೋಗಬೇಕಿದ್ದುದು Harapanahalliಗೆ, ಅಂಚೆ ಮಹನೀಯರು ಮಧ್ಯದ pa ನೋಡದೇ ಹಾರನಹಳ್ಳಿಗೆ ಕಳಿಸಿದ್ದರು. ಬೇಲೂರು, ಹಾಸನ, ಶ್ರವಣಬೆಳಗೊಳಗಳನ್ನೆಲ್ಲ ಸಂದರ್ಶಿಸಿ ಹರಿದು ಎಲ್ಲಾ ಬಟ್ಟಂಬಯಲಾದ ಪತ್ರವನ್ನು ಬಹುಷಃ ಜಿಲ್ಲೆಯ ಇಡೀ ಅಂಚೆ ಇಲಾಖೆಯೇ ಓದಿತ್ತೋ ಏನೋ! ಕೊನೆಗೂ ರಮಣನ ತುಟಿಗಳು ಅವನ ಕೈ ಸೇರಿದ್ದವು!.
– ಕೆ. ಶ್ರೀನಿವಾಸರಾವ್