Advertisement

ಹಾಲೆಪ್‌ ಹಾರಾಟ; ವೋಜ್ನಿಯಾಕಿ ಸೋಲಿನಾಟ

06:00 AM Jun 05, 2018 | |

ಪ್ಯಾರಿಸ್‌: ವಿಶ್ವದ ನಂಬರ್‌ ವನ್‌ ಆಟಗಾರ್ತಿ ರೊಮೇನಿಯಾದ ಸಿಮೋನಾ ಹಾಲೆಪ್‌ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 14ನೇ ಶ್ರೇಯಾಂಕದ ರಶ್ಯನ್‌ ಆಟಗಾರ್ತಿ ದರಿಯಾ ಕಸತ್ಕಿನಾ ಕೂಡ ಅಂತಿಮ ಎಂಟರ ಸುತ್ತಿಗೆ ಲಗ್ಗೆ ಇರಿಸಿದ್ದಾರೆ. ಎರಡು ಸಲ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಎಡವಿದ ಸಿಮೋನಾ ಹಾಲೆಪ್‌ ಬೆಲ್ಜಿಯಂನ ಎಲಿಸ್‌ ಮಾರ್ಟೆನ್ಸ್‌ ವಿರುದ್ಧ 6-2, 6-1 ಅಂತರದಿಂದ ಗೆದ್ದು ಬಂದರು. ಇನ್ನೊಂದು ಮುಖಾಮುಖೀಯಲ್ಲಿ ದರಿಯಾ ಕಸತ್ಕಿನಾ 7-6 (7-5), 6-3 ಅಂತರದಿಂದ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌, ಡೆನ್ಮಾರ್ಕ್‌ನ ಕ್ಯಾರೋಲಿನ್‌ ವೋಜ್ನಿಯಾಕಿ ಆಟಕ್ಕೆ ತೆರೆ ಎಳೆದರು.

Advertisement

ಏಕಪಕ್ಷೀಯ ಪಂದ್ಯ
ಮಾರ್ಟೆನ್ಸ್‌ ವಿರುದ್ಧ ನಿಧಾನ ಗತಿಯಿಂದ ಆಟ ಆರಂಭಿಸಿದ ಹಾಲೆಪ್‌, ಹಿಡಿತ ಸಿಕ್ಕಿದ ಬಳಿಕ ಒಮ್ಮೆಲೇ ಆಕ್ರಮಣಕ್ಕಿಳಿದರು. ಪಂದ್ಯ ಏಕಪಕ್ಷೀಯವಾಗಿಯೇ ಮುಂದುವರಿಯಿತು. ತಿರುಗಿ ಬೀಳಲು ಮಾರ್ಟೆನ್ಸ್‌ಗೆ ಯಾವ ಹಾದಿಯೂ ಉಳಿದಿರಲಿಲ್ಲ. ಕಳೆದ ವರ್ಷದ ರನ್ನರ್ ಅಪ್‌ ಆಗಿರುವ ಹಾಲೆಪ್‌ ಇನ್ನು ಜರ್ಮನಿಯ ಆ್ಯಂಜೆಲಿಕ್‌ ಕೆರ್ಬರ್‌ ಅಥವಾ ಲೋಕಲ್‌ ಫೇವರಿಟ್‌ ಕ್ಯಾರೋಲಿನ್‌ ಗಾರ್ಸಿಯಾ ವಿರುದ್ಧ ಆಡಲಿದ್ದಾರೆ.  ದ್ವಿತೀಯ ಸೆಟ್‌ನಲ್ಲಂತೂ ಹಾಲೆಪ್‌ ಅಮೋಘ ಆಟದ ಮೂಲಕ ಮಾರ್ಟೆನ್ಸ್‌ ಮೇಲೆರಗಿ ಹೋದರು. ಒಂದು ಹಂತದಲ್ಲಿ 5-0 ಮುನ್ನಡೆ ಸಾಧಿಸಿದರು. ಬಳಿಕ 6-1 ಅಂತರದಿಂದ ಸುಲಭದಲ್ಲಿ ಗೆದ್ದು ಬಂದರು.

ಕಸತ್ಕಿನಾ ಗೆಲುವಿನ ಯಾನ
14ನೇ ಶ್ರೇಯಾಂಕದ ದರಿಯಾ ಕಸತ್ಕಿನಾಗೆ ಮೊದಲ ಸೆಟ್‌ನಲ್ಲಿ ಕ್ಯಾರೋಲಿನ್‌ ವೋಜ್ನಿಯಾಕಿ ಭಾರೀ ಪೈಪೋಟಿಯೊಡ್ಡಿದರು. ಇದನ್ನು ಟೈ ಬ್ರೇಕರ್‌ನಲ್ಲಿ ವಶಪಡಿಸಿಕೊಂಡ ಬಳಿಕ ಕಸತ್ಕಿನಾ ಲಯ ಕಂಡುಕೊಂಡರು. ಗೆಲುವಿನ ಅಂತರ 7-6 (7-5),  6-3. ಮೊದಲ ಸಲ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿರುವ ಕಸತ್ಕಿನಾ ಅವರಿನ್ನು ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ಸವಾಲಿಗೆ ಸಜ್ಜಾಗಬೇಕಿದೆ. ವೋಜ್ನಿಯಾಕಿ ಈವರೆಗೆ 2 ಸಲವಷ್ಟೇ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರಿಂದ ಇವರ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು.

ಜೊಕೋ: ಆವೆಯಂಗಳದಲ್ಲಿ 200 ಜಯ
2016ರ ಚಾಂಪಿಯನ್‌ ನೊವಾಕ್‌ ಜೊಕೋವಿಕ್‌ ಆವೆಯಂಗಳದಲ್ಲಿ 200ನೇ ಜಯ ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ರವಿವಾರ ರಾತ್ರಿಯ ಸ್ಪರ್ಧೆಯಲ್ಲಿ ಅವರು ಸ್ಪೇನಿನ ಫೆರ್ನಾಂಡೊ ವೆರ್ದಸ್ಕೊ ಸವಾಲನ್ನು 6-3, 6-4, 6-2 ಅಂತರದಿಂದ ಹತ್ತಿಕ್ಕಿದರು. ವೆರ್ದಸ್ಕೊ ಹಿಂದಿನ ಪಂದ್ಯದಲ್ಲಿ ಅಪಾಯಕಾರಿ ಟೆನಿಸಿಗ ಗ್ರಿಗರ್‌ ಡಿಮಿಟ್ರೋವ್‌ ಅವರನ್ನು ಹಿಮ್ಮೆಟ್ಟಿಸಿದ್ದರಿಂದ ಅಪಾಯಕಾರಿಯಾಗಿ ಗೋಚರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಅವರು ನೇರ ಸೆಟ್‌ಗಳ ಆಘಾತಕ್ಕೆ ಸಿಲುಕಿದರು. ಇದು ಫ್ರೆಂಚ್‌ ಓಪನ್‌ನಲ್ಲಿ ಸರ್ಬಿಯನ್‌ ಟೆನಿಸಿಗನ 12ನೇ ಕ್ವಾರ್ಟರ್‌ ಫೈನಲ್‌ ಆಗಿದೆ.

12 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಒಡೆಯನಾಗಿರುವ 31ರ ಹರೆಯದ ಜೊಕೋವಿಕ್‌ ಅವರಿಗೆ ಮುಂದಿನ ಸುತ್ತಿನಲ್ಲಿ ಸುಲಭ ಸವಾಲು ಎದುರಾಗಿದೆ. ಇಲ್ಲಿ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ 72ನೇ ಸ್ಥಾನದಲ್ಲಿರುವ ಇಟೆಲಿಯ ಮಾರ್ಕೊ ಸೆಶಿನಾಟೊ ವಿರುದ್ಧ ಸೆಣಸಲಿದ್ದಾರೆ.

Advertisement

ಏಶ್ಯಾಡ್‌ಗೆ ಯೂಕಿ ಭಾಂಬ್ರಿ ಇಲ್ಲ
ಹೊಸದಿಲ್ಲಿ: ಆಗಸ್ಟ್‌ನಲ್ಲಿ ಜಕಾರ್ತಾದಲ್ಲಿ ನಡೆಯುವ ಏಶ್ಯನ್‌ ಗೇಮ್ಸ್‌ಗೆ ಭಾರತದ ಟೆನಿಸ್‌ ತಂಡ ಪ್ರಕಟವಾಗಿದೆ. 44 ವರ್ಷದ ಲಿಯಾಂಡರ್‌ ಪೇಸ್‌ ಮರಳಿರುವುದು ಈ ತಂಡದ ಅಚ್ಚರಿ. ಆದರೆ ದೇಶದ ನಂ.1 ಸಿಂಗಲ್ಸ್‌ ಆಟಗಾರ ಯೂಕಿ ಭಾಂಬ್ರಿ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಭಾಂಬ್ರಿ ಯುಎಸ್‌ ಓಪನ್‌ ಟೆನಿಸ್‌ಗೆ ಹೆಚ್ಚಿನ ಆದ್ಯತೆ ಕೊಡಲು ಬಯಸಿದ್ದೇ ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ.

ವಿಶ್ವದ 4 ಪ್ರಮುಖ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಒಂದಾಗಿರುವ ಯುಎಸ್‌ ಓಪನ್‌ ಆ. 27ಕ್ಕೆ ಆರಂಭವಾಗುತ್ತದೆ. ಆ. 19ರಿಂದ 25ರ ವರೆಗೆ ಇದರ ಅರ್ಹತಾ ಕೂಟ ನಡೆಯುತ್ತದೆ. ಆ. 18ರಿಂದ ಏಶ್ಯನ್‌ ಗೇಮ್ಸ್‌ ಆರಂಭವಾಗುತ್ತದೆ. ಒಂದು ವೇಳೆ ಏಶ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಿದರೆ ಯೂಕಿ ಭಾಂಬ್ರಿಯ ಯುಎಸ್‌ ಓಪನ್‌ ಅವಕಾಶ ತಪ್ಪಿಹೋಗಲಿದೆ. ಇದನ್ನು ಯೂಕಿ ಭಾರತ ಟೆನಿಸ್‌ ಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಹೇಳಲಾಗಿದೆ.

ಭಾರತ ಪುರುಷರ ತಂಡ: ರಾಮ್‌ಕುಮಾರ್‌ ರಾಮನಾಥನ್‌, ಪ್ರಜ್ಞೆಶ್‌ ಗುಣೇಶ್ವರನ್‌, ಸುಮಿತ್‌ ನಗಲ್‌, ಲಿಯಾಂಡರ್‌ ಪೇಸ್‌, ರೋಹನ್‌ ಬೋಪಣ್ಣ. ದಿವಿಜ್‌ ಶರಣ್‌.

ಭಾರತ ವನಿತಾ ತಂಡ: ಅಂಕಿತಾ ರೈನಾ, ಕರ್ಮಾನ್‌ ಕೌರ್‌ ಥಾಂಡಿ, ಋತುಜಾ ಭೋಸ್ಲೆ, ಪ್ರಾಂಜಲಾ ಯಡ್ಲಪಳ್ಳಿ, ರಿಯಾ ಭಾಟಿಯಾ, ಪ್ರಾರ್ಥನಾ ತೋಂಬ್ರೆ.

ಹಿಂದೆ ಸರಿದ ಸೆರೆನಾ!
ಸೋಮವಾರ ಸೆರೆನಾ ವಿಲಿಯಮ್ಸ್‌- ಮರಿಯಾ ಶರಪೋವಾ ನಡುವಿನ 4ನೇ ಸುತ್ತಿನ ಪಂದ್ಯವನ್ನು ವೀಕ್ಷಿಸಲು ಕಾತರ ದಿಂದಿದ್ದ ಟೆನಿಸ್‌ ಅಭಿಮಾನಿಗಳಿಗೆ ತೀವ್ರ ನಿರಾಸೆಯಾಗಿದೆ. ಇನ್ನೇನು ಪಂದ್ಯ ಆರಂಭವಾಗಲು ಕೆಲವೇ ನಿಮಿಷಗಳಿರುವಾಗ ಎದೆಯ ಭಾಗದ ಮಾಂಸ ಖಂಡದ ಸೆಳೆತದಿಂದ ಸೆರೆನಾ ಸ್ಪರ್ಧೆಯಿಂದ ಹಿಂದೆ ಸರಿದರು. ಶರಪೋವಾ ಆಡದೆಯೇ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ನಡಾಲ್‌ ನಾಗಾಲೋಟ
ಹಾಲಿ ಚಾಂಪಿಯನ್‌ ರಫೆಲ್‌ ನಡಾಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 4ನೇ ಸುತ್ತಿನ ಪಂದ್ಯದಲ್ಲಿ ಅವರು ಜರ್ಮನಿಯ ಮ್ಯಾಕ್ಸಿ ಮಿಲಿಯನ್‌ ಮಾರ್ಟರರ್‌ ವಿರುದ್ಧ 6-3, 6-2, 7-6 (7-4) ಅಂತರದ ಜಯ ಸಾಧಿಸಿದರು. ಇದು ಗ್ರ್ಯಾನ್‌ಸ್ಲಾಮ್‌ನಲ್ಲಿ ನಡಾಲ್‌ ಸಾಧಿಸಿದ 234ನೇ ಗೆಲುವು. ಈ ಸಾಧಕರ ಯಾದಿಯಲ್ಲಿ ಅವರೀಗ  3ನೇ ಸ್ಥಾನದಲ್ಲಿ ಕಾಣಿಸಿ ಕೊಂಡರು. 

ಶಾರ್ಟ್ಸ್ಮನ್‌ ಜಯ: ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ ದಕ್ಷಿಣ ಆಫ್ರಿಕಾದ ಕೆವಿನ್‌ ಆ್ಯಂಡರ್ಸನ್‌ ಅವರನ್ನು 1-6, 2-6, 7-5, 7-6 (7-0), 6-2 ಅಂತರದಿಂದ ಸೋಲಿಸಿ ಕ್ವಾರ್ಟರ್‌ ಫೈನಲ್‌ ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next