ಪ್ಯಾರಿಸ್: 2016ರ ಚಾಂಪಿಯನ್ ಸ್ಪೇನಿನ ಗಾರ್ಬಿನ್ ಮುಗುರುಜಾ, ಆಸ್ಟ್ರೇಲಿಯದ ಸಮಂತಾ ಸ್ಟೋಸರ್, ಡರಿಯಾ ಗವ್ರಿಲೋವಾ, ಸ್ಲೊವಾಕಿಯಾದ ಮ್ಯಾಗ್ಡಲಿನಾ ರಿಬರಿಕೋವಾ ಮೊದಲಾದವರೆಲ್ಲ ಗುರುವಾರದ ವನಿತಾ ಸಿಂಗಲ್ಸ್ ಪಂದ್ಯ ಗೆದ್ದು 3ನೇ ಸುತ್ತಿಗೆ ಮುನ್ನುಗ್ಗಿದ್ದಾರೆ. ಗಾರ್ಬಿನ್ ಮುಗುರುಜಾ ಆತಿಥೇಯ ನಾಡಿನ ವೈಲ್ಡ್ ಕಾರ್ಡ್ ಆಟಗಾರ್ತಿ ಫಿಯೋನಾ ಫೆರೊ ಅವರನ್ನು 6-4, 6-3 ಅಂತರದಿಂದ ಮಣಿಸಿದರು. ಇದು 21ರ ಹರೆಯದ ಫೆರೊ ವಿರುದ್ಧ ಮುಗುರುಜಾ ಆಡಿದ ಮೊದಲ ಪಂದ್ಯವಾಗಿತ್ತು.
“ಫೆರೊ ಯುವ ಹಾಗೂ ಪ್ರತಿಭಾನ್ವಿತ ಆಟಗಾರ್ತಿ. ಸಹಜವಾಗಿಯೇ ಇವರ ವಿರುದ್ಧ ಆಡುವುದು ದೊಡ್ಡ ಸವಾಲು’ ಎಂಬುದಾಗಿ ಮುಗುರುಜಾ ಹೇಳಿದರು. ಅವರಿನ್ನು ಆಸ್ಟ್ರೇಲಿಯದ ಸಮಂತಾ ಸ್ಟೋಸರ್ ವಿರುದ್ಧ ಸೆಣಸಲಿದ್ದಾರೆ. ದಿನದ ಇನ್ನೊಂದು ಪಂದ್ಯದಲ್ಲಿ ಸ್ಟೋಸರ್ 6-2, 7-6 (7-1) ಅಂತರದಿಂದ ರಶ್ಯದ ಅನಾಸ್ತಾಸಿಯಾ ಪಾವುಚೆಂಕೋವಾಗೆ ಸೋಲುಣಿಸಿದರು.
ಆಸ್ಟ್ರೇಲಿಯದ ಮತ್ತೋರ್ವ ಆಟಗಾರ್ತಿ, 24ನೇ ಶ್ರೇಯಾಂಕದ ಡರಿಯಾ ಗವ್ರಿಲೋವಾ ಕೂಡ ಗೆಲುವಿನ ಓಟ ಮುಂದುವರಿಸಿದ್ದಾರೆ. ಅವರು ಅಮೆರಿಕದ ಬರ್ನಾರ್ಡ್ ಪೆರಾ ವಿರುದ್ಧ 5-7, 7-5, 6-3ರಿಂದ ಹಿಮ್ಮೆಟ್ಟಿಸಿದರು. 19ನೇ ಶ್ರೇಯಾಂಕದ ಮ್ಯಾಗ್ಡಲಿನಾ ರಿಬರಿಕೋವಾ ಸ್ವಿಟ್ಸರ್‌ಲ್ಯಾಂಡಿನ ಬೆಲಿಂಡಾ ಬೆನ್ಸಿಕ್ ಅವರನ್ನು 6-2, 6-4 ಅಂತರದಿಂದ ಪರಾಭವಗೊಳಿಸಿದರು. 16ನೇ ಶ್ರೇಯಾಂಕದ ಬೆಲ್ಜಿಯಂ ಆಟಗಾರ್ತಿ ಎಲಿಸ್ ಮಾರ್ಟೆನ್ಸ್ ಕೂಡ ಮುನ್ನಡೆ ಸಾಧಿಸಿದ್ದು, ಅಮೆರಿಕದ ಹೀತರ್ ವಾಟ್ಸನ್‌ಗೆ 6-3, 6-4 ಅಂತರದ ಸೋಲುಣಿಸಿದರು.
5 ಸೆಟ್‌ಗಳ ಕಾದಾಟ
ದ್ವಿತೀಯ ಶ್ರೇಯಾಂಕದ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಕೂಡ ದ್ವಿತೀಯ ಸುತ್ತಿನಲ್ಲಿ 5 ಸೆಟ್‌ಗಳ ಕಠಿನ ಹೋರಾಟದ ಬಳಿಕ ಜಯ ಕಾಣುವಲ್ಲಿ ಯಶಸ್ವಿಯಾದರು. ಸರ್ಬಿಯಾದ ದುಸಾನ್ ಲಾಜೋವಿಕ್ ವಿರುದ್ಧ 2-6, 7-5, 6-4, 6-1, 6-2 ಅಂತರದಿಂದ ಗೆದ್ದು ಮೂರನೇ ಸುತ್ತಿಗೆ ಏರಿದರು.
32ನೇ ಶ್ರೇಯಾಂಕದ ಗೇಲ್ ಮಾನ್‌ಫಿಲ್ಸ್ 2ನೇ ಸುತ್ತಿನಲ್ಲಿ ಸ್ಲೊವಾಕಿಯಾದ ಮಾರ್ಟಿನ್ ಕ್ಲಿಝಾನ್‌ರನ್ನು 6-2, 6-4, 6-4ರಿಂದ ಮಣಿಸಿ ತವರಿನ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದರು. ಫ್ರಾನ್ಸ್‌ನ ಮತ್ತೂಬ್ಬ ಆಟಗಾರ ಗಿಲ್ಲೆಸ್ ಸಿಮೋನ್ ಅಮೆರಿಕದ 12ನೇ ಶ್ರೇಯಾಂಕಿತ ಸ್ಯಾಮ್ ಕ್ವೆರ್ರಿ ವಿರುದ್ಧ 1-6, 7-6 (7-3), 6-4, 6-1ರಿಂದ ಮಣಿಸಿದರು. ಬುಧವಾರ ರಾತ್ರಿ 5 ಸೆಟ್‌ಗಳ ಹೋರಾಟದಲ್ಲಿ ಜಯ ಸಾಧಿಸಿದ ಮತ್ತೂಬ್ಬ ಟೆನಿಸಿಗ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್. ಅವರು 6-7 (2-7), 6-4, 4-6, 6-4, 10-8 ಅಂತರದಿಂದ ಅಮೆರಿಕದ ಜೇರ್ಡ್ ಡೊನಾಲ್ಡ್‌ಸನ್‌ಗೆ ಸೋಲುಣಿಸಿದರು. ಬೋಸ್ನಿಯಾದ ದಮಿರ್ ಜುಮುರ್ ಕೂಡ ಗೆಲುವಿಗಾಗಿ 5 ಸೆಟ್‌ಗಳ ಕಠಿನ ಕಾಳಗ ನಡೆಸಬೇಕಾಯಿತು. ಭಾರೀ ಪ್ರತಿರೋಧ ಒಡ್ಡಿದ ಮಾಲ್ಡೋವಾದ ರಾಡು ಅಲ್ಬೋಟ್ ಅವರನ್ನು 6-3, 6-3, 5-7, 1-6, 7-5ರಿಂದ ಮಣಿಸಿ ನಿಟ್ಟುಸಿರೆಳೆದರು. ಸ್ಪೇನಿನ ಫೆರ್ನಾಂಡೊ ವೆರ್ದೆಸ್ಕೊ 6-3, 6-2, 6-2 ಅಂತರದಿಂದ ಆರ್ಜೆಂಟೀನಾದ ಗಿಡೊ ಆ್ಯಂಡ್ರೋಝಿ ಅವರನ್ನು ಪರಾಭವಗೊಳಿಸಿದರು.
ಕೀ ನಿಶಿಕೊರಿಗೆ ಮತ್ತೂಂದು ಫ್ರೆಂಚ್ ಟೆಸ್ಟ್
ಜಪಾನಿನ ಕೀ ನಿಶಿಕೊರಿ ಅವರಿಗೆ ಮತ್ತೂಂದು “ಫ್ರೆಂಚ್ ಟೆಸ್ಟ್’ ಎದುರಾಗಿದೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್‌ನ ಬೆನೊಯಿಟ್ ಪೇರ್ ವಿರುದ್ಧ 5 ಸೆಟ್‌ಗಳ ಕಾದಾಟದ ಬಳಿಕ ಗೆದ್ದು ಬಂದ ನಿಶಿಕೊರಿ, ಮುಂದಿನ ಸುತ್ತಿನಲ್ಲಿ ಆತಿಥೇಯ ನಾಡಿನ ಮತ್ತೋರ್ವ ಆಟಗಾರ ಗಿಲ್ಲೆಸ್ ಸಿಮೋನ್ ಸವಾಲನ್ನು ಎದುರಿಸಲಿದ್ದಾರೆ. ಇದರೊಂದಿಗೆ ಮೊದಲ 3 ಸುತ್ತಿನ ಪಂದ್ಯಗಳಲ್ಲಿ ಫ್ರಾನ್ಸ್ ಟೆನಿಸಿಗರೇ ನಿಶಿಕೊರಿಗೆ ಎದುರಾದಂತಾಯಿತು. ಮೊದಲ ಸುತ್ತಿನಲ್ಲಿ ಅವರು ಫ್ರಾನ್ಸ್ ನ ಮ್ಯಾಕ್ಸಿಮ್ ಜನ್ವೀರ್ ವಿರುದ್ಧ ಆಡಿದ್ದರು. ಬೆನೊಯಿಟ್ ಪೇರ್ ವಿರುದ್ಧ ನಿಶಿಕೊರಿ 6-3, 2-6, 4-6, 6-2, 6-3 ಅಂತರದ ಜಯ ಸಾಧಿಸಿದರು.
ಶರಪೋವಾ, ಹಾಲೆಪ್ ಜಯ
ದ್ವಿತೀಯ ಸುತ್ತಿನ ಪಂದ್ಯದಲ್ಲಿ ಮರಿಯಾ ಶರಪೋವಾ, ಸಿಮೋನಾ ಹಾಲೆಪ್ ಜಯ ಸಾಧಿಸಿದ್ದಾರೆ. ಶರಪೋವಾ ಕ್ರೊವೇಶಿಯಾದ ಡೋನಾ ವೆಕಿಕ್ ಅವರನ್ನು 7-5, 6-4ರಿಂದ, ಹಾಲೆಪ್ ಅಮೆರಿಕದ ಟಯ್ಲರ್ ಟೌನ್‌ಸೆಂಡ್ ಅವರನ್ನು 6-3, 6-1ರಿಂದ ಮಣಿಸಿದರು.