ಇತ್ತೀಚೆಗಷ್ಟೇ ಕಾವೇರಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ತಮಿಳು ನಟ ಸಿಂಬು ಅವರು ಕನ್ನಡಿಗರು ನಮ್ಮ ಅಣ್ಣತಮ್ಮಂದಿರು ಇದ್ದಂಗೆ. ನಾವು ಕೇಳಿದರೆ “ಒಂದು ಲೋಟ ನೀರು’ ಕೊಡುವುದಿಲ್ಲವೇ? ನಮ್ಮ ನಮ್ಮಲ್ಲಿ ಯಾಕೆ ಕಿತ್ತಾಟ, ನೀವು ಒಂದೇ ಒಂದು ಗ್ಲಾಸ್ ನೀಡು ಕೊಟ್ಟರೂ ಸಾಕು’ ಎಂದು ಹೇಳಿಕೆ ನೀಡುವುದರ ಮೂಲಕ ಭಾರೀ ಸುದ್ದಿಯಾಗಿದ್ದರು. ಈಗ ಅದೇ ಸಿಂಬು ಮತ್ತೂಮ್ಮೆ ಸುದ್ದಿಯಾಗಿದ್ದಾರೆ.
ಹಾಗಂತ, ಇನ್ಯಾವುದೋ ಹೇಳಿಕೆ ನೀಡಿ ಸುದ್ದಿಯಾಗಿಲ್ಲ. ಈ ಬಾರಿ ಅವರು ಮೊದಲ ಬಾರಿಗೆ ಕನ್ನಡ ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು, “ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡಿಗೆ ಸಿಂಬು ಧ್ವನಿಯಾಗಿದ್ದಾರೆ. ಇತ್ತೀಚೆಗೆ ನಿರ್ದೇಶಕ ಕಾಂತರಾಜ್ ಕನ್ನಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್ ಅವರೊಂದಿಗೆ ಚೆನ್ನೈಗೆ ತೆರಳಿ, ಚಿತ್ರಕ್ಕಾಗಿ ಒಂದು ಹಾಡನ್ನು ಹಾಡಿಸಿಕೊಂಡು ಬಂದಿದ್ದಾರೆ.
ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದ “ಊರ ಸುದ್ದಿ ಕೇಳ್ತಾ ಇರುವೆ, ಎಲ್ಲರಿಗೂ ಹೇಳ್ತಾ ಇರುವೆ, ನಿಂದು ಸ್ವಲ್ಪ ಸೇರ್ಸುತ್ತಿರುವೆ, ಯಾಕೆ ಬಿಟ್ಟುಕೊಳ್ತೀ ಇರುವೆ…’ ಎಂಬ ಹಾಡಿಗೆ ಸಿಂಬು ಧ್ವನಿಯಾಗಿದ್ದಾರೆ. ಈ ಹಾಡು ತುಂಬಾ ಸ್ಪೀಡ್ ಇದ್ದುದರಿಂದ, ಮೊದಲು ಹಾಡನ್ನು ಅಭ್ಯಾಸ ಮಾಡಿಕೊಂಡು ಆ ಬಳಿಕ ಸ್ಪಷ್ಟ ಕನ್ನಡದಲ್ಲಿ ಹಾಡಿದ್ದಾರೆ ಎಂಬುದು ನಿರ್ದೇಶಕರ ಮಾತು.
ಈ ಹಿಂದೆ ತೆಲುಗು, ತಮಿಳು ಚಿತ್ರಗಳಿಗೆ ಹಾಡಿರುವ ಸಿಂಬು, ಇದೇ ಮೊದಲ ಸಲ ಕನ್ನಡದ ಚಿತ್ರಕ್ಕೆ ಹಾಡಿದ್ದಾರೆ. ಹಾಡಿದ ನಂತರ, ಏನಾದರೂ ಕನ್ನಡ ಪದ ತಪ್ಪಿದ್ದರೆ ದಯವಿಟ್ಟು ತಿಳಿಸಿ, ಪುನಃ ಸ್ಪಷ್ಟವಾಗಿ ಹಾಡುವೆ ಎಂದು ಹೇಳುವ ಮೂಲಕ ಕನ್ನಡ ಭಾಷೆ ಕುರಿತು ಪ್ರೀತಿ ತೋರಿದ್ದಾಗಿ ಹೇಳುತ್ತಾರೆ ನಿರ್ದೇಶಕರು.
ಈ ಸಂದರ್ಭದಲ್ಲಿ ಶ್ರೀಧರ್ ವಿ.ಸಂಭ್ರಮ್ ಇತರರು ಹಾಜರಿದ್ದರು. ಈ ಚಿತ್ರಕ್ಕೆ ದೇವರಾಜ್ ದಾವಣಗೆರೆ ನಿರ್ಮಾಪಕರು. ಕೆ.ಎಂ.ಪ್ರಕಾಶ್ ಸಂಕಲನವಿದೆ. ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. ಹಾಡು ಹಾಡಿರುವ ಸಿಂಬು, ಆಡಿಯೋ ಬಿಡುಗಡೆ ಸಮಾರಂಭಕ್ಕೂ ಬರುವುದಾಗಿ ಹೇಳಿದ್ದಾರೆಂಬುದು ತಂಡದ ಮಾತು.