Advertisement

First cry, ಕೇಕ್ ಮರ್ಡರ್ ಎನ್ನುವ ‘ಬಯೋ’ಗಳೇ ಸಿಮ್ ಕಾರ್ಡ್ ಸ್ಕ್ಯಾಮ್ ಗೆ ರಹದಾರಿ !

12:20 PM Apr 14, 2021 | ಮಿಥುನ್ ಪಿಜಿ |

ದ ಸಬ್ ಸ್ಕ್ರೈಬರ್ ಐಡೆಂಟಿಟಿ ಮೋಡ್ಯೂಲ್ ಅಥವಾ ಸ್ಮಾರ್ಟ್ ಫೋನ್ ಗಳ ಮೆದುಳು  ಎಂದು ಕರೆಯಲ್ಪಡುವ ಸಿಮ್ ಕಾರ್ಡ್ ಗಳ ಮಹತ್ವವನ್ನು  ಪ್ರತಿಯೊಬ್ಬರೂ ಅರಿತುಕೊಳ್ಳಬೇಕಾದ ಅಗತ್ಯವಿದೆ. ಇಂದು ಯಾವುದಾದರೂ ಹೊಸ ಸ್ಮಾರ್ಟ್ ಫೋನ್ ಕೊಂಡಾಗ ಹಳೆ ಡಿವೈಸ್ ನಲ್ಲಿದ್ದ ಸಿಮ್ ಅನ್ನು ಹೊಸ ಫೋನ್ ಗೆ ಬದಲಾಯಿಸುವಾಗಲಷ್ಟೇ ಅದರತ್ತ ಹೆಚ್ಚಿನ ಗಮನ ಕೊಡುತ್ತೇವೆ.

Advertisement

ಆದರೇ ಸಿಮ್ ಕಾರ್ಡ್ ಎಂಬುದು ಟೆಲಿಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದೊಂದು ಸರಳ ಪ್ಲಾಸ್ಟಿಕ್ ಭಾಗಗಳ ರೂಪದಲ್ಲಿದ್ದು ಚಿಪ್ ಅನ್ನು ಒಳಗೊಂಡಿರುತ್ತದೆ. ಆರಂಭದ ದಿನಗಳಲ್ಲಿ ಸಿಮ್ ಕಾರ್ಡ್ ಗಳು,  ಕ್ರೆಡಿಟ್ ಕಾರ್ಡ್ ನಷ್ಟೆ ಗಾತ್ರ -ಅಗಲವನ್ನು ಹೊಂದಿತ್ತು. 1991 ರ ನಂತರ ಸಿಮ್ ಗಳ ಗಾತ್ರದಲ್ಲಿ ಬದಲಾವಣೆಯಾಗಿ ಇಂದು ನ್ಯಾನೋ ಕಾರ್ಡ್ ಗಳ ಹಂತಕ್ಕೆ ಬಂದು ನಿಂತಿದೆ. ಇದು ಕೋಡ್ ಗಳ ಮೂಲಕ ಮಾಹಿತಿ ಸಂಗ್ರಹಿಸುತ್ತದೆ. ಇದರ ಗಾತ್ರ 16 ರಿಂದ 256 ಕೆ.ಬಿ ಗಳಷ್ಟು…

ಇಂದು ಟೆಲಿಕಮ್ಯೂನಿಕೇಷನ್ ಕ್ಷೇತ್ರದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಶಬ್ಧ ಎಂದರೇ ಸಿಮ್ ಸ್ವ್ಯಾಪಿಂಗ್… ಏನಿದು ? ಸಿಮ್ ಸ್ವ್ಯಾಪಿಂಗ್ ಅನ್ನು ಸಿಮ್ ಹೈಜಾಕಿಂಗ್, ಪೋರ್ಟ್ ಔಟ್ ಸ್ಕ್ಯಾಮಿಂಗ್ ಎಂದೂ ಕೂಡ ಕರೆಯುತ್ತಾರೆ. ಕಳೆದ ಕೆಲವು ವರ್ಷಗಳಿಂದ ಈ ಪದ ಸಾಮಾನ್ಯವೆಂಬಂತಾಗಿದೆ. ಮೊದಲು ಹ್ಯಾಕರ್ಸ್ ಅಥವಾ ದುಷ್ಕರ್ಮಿಗಳು ತಾನು ಕಳವು ಮಾಡಬೇಕೆಂದು ಉದ್ದೇಶಿಸಿರುವ ನಿಗದಿತ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಿ ಅವರು ಬಳಸುತ್ತಿರುವ ಸಿಮ್ ನ ಸೇವಾದಾರರಿಗೆ (ಸರ್ವೀಸ್ ಪ್ರವೈಡರ್) ಕರೆ ಮಾಡುತ್ತಾರೆ. ಬಳಿಕ ಮೊದಲೇ ಯೋಜಿಸಿದಂತೆ ಸಿಮ್ ಕಾಣೆಯಾಗಿದೆ ಅಥವಾ ಕಾರ್ಡ್ ಗೆ ಹಾನಿಯಾಗಿದೆ. ಹೀಗಾಗಿ ಬಳಕೆಯಲ್ಲಿರುವ ಸಿಮ್ ಕಾರ್ಡ್ ನಂಬರ್  ಅನ್ನು ಹೊಸದಾಗಿ ಖರೀದಿಸಿರುವ ಸಿಮ್ ಗೆ ಬದಲಾಯಿಸಬೇಕೆಂದು ಕೋರಿಕೊಳ್ಳುತ್ತಾನೆ.

ಇಲ್ಲಿ ಸರ್ವೀಸ್ ಪ್ರವೈಡರ್ ಗಳು ಎಂದಿನಂತೆ ದಾಖಲೆಗಳನ್ನೂ ಕೇಳುತ್ತಾರೆ. ಆದರೆ ಹ್ಯಾಕಿಂಗ್ ಮೂಲಕ ದುಷ್ಕರ್ಮಿ ಮೊದಲೇ ಮಾಹಿತಿ ಕಲೆಹಾಕಿರುವುದರಿಂದ ಯಥಾವತ್ತಾಗಿ ಅದನ್ನೇ ಹೇಳಿ ಸೇವಾದಾರರನ್ನು ನಂಬಿಸುತ್ತಾನೆ. ಪರಿಣಾಮ ವ್ಯಕ್ತಿಯೊಬ್ಬನ ಸಿಮ್ ಕಾರ್ಡ್ ಡೇಟಾ ಸಂಪೂರ್ಣವಾಗಿ ಹ್ಯಾಕರ್ ಪಾಲಾಗುತ್ತದೆ.

Advertisement

ಇಂದು ವರ್ಚುವಲ್ ಮುಖಾಂತರವೇ ಅನೇಕರು ಹಣದ ವಹಿವಾಟು ನಡೆಸುತ್ತಾರೆ. ಹೀಗಾಗಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಸಿಮ್ ನಂಬರ್ ಲಿಂಕ್ ಆಗಿರುತ್ತದೆ. ಮತ್ತೊಂದು ಗಮನಾರ್ಹ ಅಂಶವೆಂದರೇ ಹಲವರು ಸಾಮಾಜಿಕ ಜಾಲಾತಾಣಗಳಲ್ಲೂ ಸಕ್ರಿಯರಾಗಿರುತ್ತಾರೆ. ಆ ಮೂಲಕ ತಮ್ಮ ಪ್ರೋಫೈಲ್ ನಲ್ಲಿ ಜನ್ಮದಿನಾಂಕದಿಂದ ಹಿಡಿದು ಸಂಫೂರ್ಣ ಜಾತಕವನ್ನು ನಮೂದಿಸಿರುತ್ತಾರೆ. ಸಿಮ್ ಕಾರ್ಡ್ ಕೊಳ್ಳುವಾಗ ನೀವು ನೀಡಿರುವುದು ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಇನ್ನೀತರ ದಾಖಲೆಗಳನ್ನು ಮಾತ್ರ. ಇದರಲ್ಲೂ ನಿಮ್ಮ ಹೆಸರು, ತಂದೆತಾಯಿಯ ಹೆಸರು, ಹಾಗೂ ವಿಳಾಸ ನಮೂದಿಸಲ್ಪಟ್ಟಿರುತ್ತದೆ. (ನೆನಪಿರಲಿ ಸರ್ವೀಸ್ ಪ್ರವೈಡರ್ ಗಳು ಕೇಳುವುದು ಇದೇ ಮಾಹಿತಿ)

ಹ್ಯಾಕರ್ ಗಳಿಗೆ ಮಾಹಿತಿ ಕದಿಯಲು ಸಾಮಾಜಿಕ ಜಾಲತಾಣಗಳು ರಹದಾರಿ ಎಂಬುದು ನೆನಪಿರಲಿ. ಇದರ ಜೊತೆಗೆ ಫಿಶಿಂಗ್ ಇಮೇಲ್ಸ್, ಮಾಲ್ವೇರ್ ಹಾಗೂ ಡಾರ್ಕ್ ವೆಬ್ ಗಳು ಹ್ಯಾಕರ್ ಗಳಿಗೆ ಮಾಹಿತಿ ಸಂಗ್ರಹಿಸುವ ತಾಣವಾಗಿರುತ್ತದೆ.

ಒಮ್ಮೆ ಒಂದು ಸಿಮ್ ಹ್ಯಾಕ್ ಆದರೆ ಗ್ರಾಹಕರ ಮೊಬೈಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾವುದೇ ಕರೆಗಳನ್ನು ಮಾಡಲಾಗುವುದಿಲ್ಲ. ಮಾತ್ರವಲ್ಲದೆ ಸ್ವೀಕರಿಸಲಾಗುವುದಿಲ್ಲ. ಎಸ್ ಎಂ ಎಸ್ ಅಥವಾ ಇತರ ಸಂದೇಶಗಳಂತೂ ಬರುವುದು ಮರಿಚಿಕೆಯೇ ! ಆ ಮೂಲಕ ಬ್ಯಾಂಕಿಂಗ್ ಗೌಪ್ಯತಾ ಕೋಡ್ ಗಳು ಸೇರಿದಂತೆ ಎಲ್ಲವನ್ನೂ ಹ್ಯಾಕರ್ ನಿಯಂತ್ರಿಸಲು ಆರಂಭಿಸುತ್ತಾನೆ.

ಇಲ್ಲಿ ಗ್ರಾಹಕರಿಗೆ ಅನುಮಾನ ಬರುವವರೆಗೂ  ಹ್ಯಾಕರ್ ಗೆ ಸಮಯಾವಕಾಶ ಇರುತ್ತದೆ. ಇಂದು ಹಲವಾರು ಗ್ರಾಹಕ ಸೇವೆಗಳು ಮತ್ತು ವೆಬ್ ಸೈಟ್ ಗಳು ದೃಢೀಕರಣಕ್ಕಾಗಿ ಫೋನ್ ಕರೆಗಳನ್ನು ಮತ್ತು ಟೆಕ್ಸ್ಟ್ ಮೆಸೇಜ್ ಗಳನ್ನು ಮಾನದಂಡವಾಗಿಸಿದೆ. ನಂತರದಲ್ಲಿ ಹ್ಯಾಕರ್ ಗಳು ‘ಟು ಫ್ಯಾಕ್ಟರ್ ಅಥೆಂಟಿಫಿಕೇಶನ್’ ನಲ್ಲೂ ಬದಲಾವಣೆ ಮಾಡಿ ಮೊದಲಿಗೆ ಬ್ಯಾಂಕಿಗ್ ಖಾತೆಗೆ ಕನ್ನ ಹಾಕುತ್ತಾರೆ. ಆ ಮೂಲಕ ಹಣವನ್ನು ಸತತವಾಗಿ ಎಗರಿಸಲಾರಂಭಿಸುತ್ತಾರೆ. ಇದರ ಜೊತೆಗೆ ಸಾಮಾಜಿಕ ಜಾಲತಾಣ, ಇ-ಮೇಲ್ ಅಕೌಂಟ್ ಗಳ ಬಳಕೆಯನ್ನೂ ಮಾಡಲಾರಂಭಿಸುತ್ತಾರೆ.  ಮುಂದಿನ ಪರಿಣಾಮ…..

ಪ್ರಮುಖ ಘಟನೆಗಳು: 1) ಇತ್ತೀಚಿಗಷ್ಟೇ ರಾಜಸ್ಥಾನದಲ್ಲಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದರು, ಮಾತ್ರವಲ್ಲದೆ 500 ಸಿಮ್ ಕಾರ್ಡ್ ಗಳನ್ನು ಇವರಿಂದ ವಶಪಡಿಸಿಕೊಂಡಿದ್ದರು. ಸಿಮ್ ಸ್ಕ್ಯಾಮ್ ಮೂಲಕ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸುಮಾರು 7.5 ಲಕ್ಷದವರೆಗೂ ಹಣವನ್ನು ಎಗರಿಸಿದ್ದ ಈ ಖದೀಮರು ಇನ್ನೂ ಹಲವಾರು ಮಂದಿಯ ಅಕೌಂಟ್ ಗೂ ಕನ್ನ ಹಾಕಿದ್ದರು ಎಂದು ತಿಳಿದುಬಂದಿದೆ.

2) ಮತ್ತೊಂದು ಘಟನೆಯಲ್ಲಿ ದುಷ್ಕರ್ಮಿಯೋರ್ವ ನೇರವಾಗಿ ಮಹಿಳೆಯೊಬ್ಬಳ ಬಳಿಗೆ ತೆರಳಿ ತುರ್ತಾಗಿ ಫೋನ್ ಕರೆಯೊಂದನ್ನು ಮಾಡಬೇಕೆಂದು ವಿನಂತಿಸಿ ಸ್ಮಾರ್ಟ್ ಫೋನ್ ಪಡೆಯುತ್ತಾನೆ. ಕೆಲಸಮಯ ನಂಬರ್ ಟೈಪ್ ಮಾಡಿ ಮಾತನಾಡುತ್ತಿರುವಂತೆ ನಟಿಸಿದ್ದಾನೆ. ಆದೇ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ವ್ಯಕ್ತಿ, ಸ್ಮಾರ್ಟ್ ಫೋನ್ ನೀಡಿದ ಮಹಿಳೆಯ ಬಳಿ ವಿಳಾಸವೊಂದರ ಕುರಿತು ವಿಚಾರಿಸಿದ್ದಾನೆ. ಈ ಸಮಯವನ್ನು ಬಳಸಿಕೊಂಡ ದುಷ್ಕರ್ಮಿ ಸಿಮ್ ಎಗರಿಸಿ, ಮತ್ತೊಂದು ಸಿಮ್  ಅನ್ನು ಅಲ್ಲಿರಿಸುತ್ತಾನೆ. ಮುಂದೆ ಆಕೆಯ ಬ್ಯಾಂಕ್ ಖಾತೆಯಲ್ಲಿದ್ದ ಹಣ ಬರಿದಾಗುತ್ತಾ ಬರುತ್ತದೆ.

ಸಿಮ್ ಹ್ಯಾಕ್ ಆಗಿದೆ ಎಂದು ಹೇಗೆ ತಿಳಿಯುವುದು ?: ಹ್ಯಾಕ್ ಆದ ತಕ್ಷಣ ನಮಗೆ ಯಾವುದೇ ಕರೆಗಳು, ಸಂದೇಶಗಳು ಬರುವುದಿಲ್ಲ. ಹ್ಯಾಕರ್ ಸಿಮ್ ಕಾರ್ಡ್ ಅನ್ನು ಆ ಸಂದರ್ಭದಲ್ಲಿ ನಿಷ್ಕ್ರೀಯಗೊಳಿಸಿರುತ್ತಾನೆ. ಮತ್ತೊಂದು ಅಂಶವೆಂದರೇ ನಮ್ಮ Activity Status ಮತ್ತೊಂದು ಡಿವೈಸ್ ನಲ್ಲಿ ಕಾಣಸಿಗುತ್ತದೆ. ಇದರ ಜೊತೆಗೆ ಯಾವುದೇ ಅಕೌಂಟ್ ಗಳಿಗೆ ಅಂದರೇ ಸಾಮಾಜಿಕ  ಜಾಲತಾಣ, ಬ್ಯಾಂಕಿಂಗ್ ಅಪ್ಲಿಕೇಶನ್ ಗಳಿಗೆ ಲಾಗಿನ್ ಆಗುವುದು ಸಾಧ್ಯವಾಗುವುದಿಲ್ಲ.

ಈ ಸ್ಕ್ಯಾಮ್ ನಿಂದ ಪಾರಾಗುವುದು ಹೇಗೆ ?: ಮೊದಲಿಗೆ ಸ್ಮಾರ್ಟ್ ಫೋನ್ ಭದ್ರತೆಯನ್ನು ಹೆಚ್ಚಿಸುವುದು ತೀರಾ ಅಗತ್ಯ. ಕಠಿಣ ಪಾಸ್ ವರ್ಡ್, ಪ್ರಶ್ನೋತ್ತರ ಮಾದರಿಯಲ್ಲಿರುವ ಪಾಸ್ ವರ್ಡ್ ಗಳನ್ನು ಇರಿಸುವುದು ಅತ್ಯಗತ್ಯ. ಇದರ ಜೊತೆಗೆ ಹೆಚ್ಚುವರಿ ಪಿನ್ ಹಾಗೂ ಪಾಸ್ ಕೋಡ್ ಗಳನ್ನು ಬಳಸುವುದು ಉತ್ತಮ. ಸಂದೇಶದ ಮೂಲಕ ಬರುವ ಓಟಿಪಿ ಮಾದರಿಯನ್ನು ತ್ಯಜಿಸಿ, ಇಮೇಲ್ ಮುಖಾಂತರದ ಓಟಿಪಿಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಗೂಗಲ್ ಅಥಂಟಿಕೇಟರ್ ಮಾದರಿಯ ‘ಟು ಫ್ಯಾಕ್ಟರ್ ಅಥೆಂಟಿಫಿಕೇಶನ್’ App ಗಳನ್ನು ಬಳಸಿ. ಇದರಲ್ಲಿ ಫೋನ್ ನಂಬರಿನ ಬದಲು ಡಿವೈಸ್ ನಂಬರ್ ಗಳನ್ನು ಬಳಸಲು ಸಾಧ್ಯವಾಗುತ್ತದೆ. ಇದರ ಹೊರತಾಗಿ ಕೆಲವೊಂದು ಸಂಸ್ಥೆಗಳು ತಮ್ಮ ಗ್ರಾಹಕರ ದೃಢೀಕರಣಕ್ಕೆ ಎರಡು ಬಾರಿ ಕರೆ ಮಾಡುತ್ತವೆ. ಇದರ ಸದುಪಯೋಗಪಡಿಸಿಕೊಳ್ಳುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next