ಸಾಯಿಕುಮಾರ್ ಅಂದಾಕ್ಷಣ, ಅವರ ಪವರ್‌ಫುಲ್ ಡೈಲಾಗ್ಸ್‌ಗಳು ನೆನಪಿಗೆ ಬರುತ್ತವೆ. ಅದರಲ್ಲೂ ಪೊಲೀಸ್ ಖಾಕಿಯ ಖದರ್ ಹಾಗೊಮ್ಮೆ ಕಣ್ಮುಂದೆ ಬಂದು ಹೋಗುತ್ತೆ. ಪೊಲೀಸ್ ಪಾತ್ರದಲ್ಲಿ ಎಲ್ಲರಿಗೂ ಅಚ್ಚುಮೆಚ್ಚು ಎನಿಸಿಕೊಂಡಿರುವ ಸಾಯಿಕುಮಾರ್ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ? ವಿಷಯ ಇರೋದೇ ಇಲ್ಲಿ. ಸಾಯಿಕುಮಾರ್ ಇದೀಗ ಎಂದಿಗಿಂತ ಖುಷಿಯ ಮೂಡ್‌ನಲ್ಲಿದ್ದಾರೆ.
ಅವರ ಅತೀವ ಸಂತಸಕ್ಕೆ ಕಾರಣ, ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 25 ವರ್ಷಗಳು ತುಂಬಿರುವುದು. ಅದೇ ಈ ಹೊತ್ತಿನ ವಿಶೇಷ. ಹೌದು, ಸಾಯಿಕುಮಾರ್ ಕಳೆದ ಎರಡುವರೆ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಂಡೇ, ಇತರೆ ಭಾಷೆಯ ಚಿತ್ರರಂಗದಲ್ಲೂ ಕಲಾಸೇವೆ ನಿರಂತರವಾಗಿರಿಸಿಕೊಂಡು ಸೈ ಎನಿಸಿಕೊಂಡಿರುವ ನಟ.
ಈವರೆಗೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸಾಯಿಕುಮಾರ್, ಕನ್ನಡ ಚಿತ್ರರಂಗವನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಂತೂ ಸುಳ್ಳಲ್ಲ. 1993ರಲ್ಲಿ “ಕುಂಕುಮ ಭಾಗ್ಯ’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಸಾಯಿಕುಮಾರ್, ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. “ಪೊಲೀಸ್ ಸ್ಟೋರಿ’ ಮೂಲಕ ಪಕ್ಕಾ ಡೈಲಾಗ್ ಕಿಂಗ್ ಎನಿಸಿಕೊಂಡ ಅವರನ್ನು ಹೆಚ್ಚು ಹುಡುಕಿ ಬಂದ ಪಾತ್ರಗಳೆಲ್ಲವೂ ಪೊಲೀಸ್ ಅಧಿಕಾರಿ ಪಾತ್ರಗಳೇ.
ಆ ಚಿತ್ರದ ಬಳಿಕ ಪರ್ಮನೆಂಟ್ ಯೂನಿಫಾರಂ ಹಾಕುವಂತಾಯಿತು. “ರಂಗಿತರಂಗ’ ಚಿತ್ರದ ಬಳಿಕ ವಿಭಿನ್ನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವ ಅವರಿಗೆ ಕನ್ನಡ ಚಿತ್ರರಂಗದ ಮೇಲೆ ಹೆಮ್ಮೆ ಇದೆ. ಇದುವರೆಗೆ ಇಲ್ಲಿ ಮಾಡಿದ ಕೆಲಸ ತೃಪ್ತಿ ಕೊಟ್ಟಿದೆ. ಕನ್ನಡ ಚಿತ್ರರಂಗ ಎಲ್ಲವನ್ನೂ ಕೊಡುವ ಮೂಲಕ ಇಂದಿಗೂ ಅದೇ ಪ್ರೀತಿಯನ್ನು ತೋರುತ್ತಿರುವುದಕ್ಕೆ ಅವರು ಖುಷಿಯಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ತುಂಬಿರುವ ಖುಷಿಯಲ್ಲಿ ಮಾತನಾಡುವ ಸಾಯಿಕುಮಾರ್, “ಕನ್ನಡ ಚಿತ್ರರಂಗ ಈಗ ಸಾಕಷ್ಟು ಬೆಳೆದಿದೆ.
ಇತರೆ ಚಿತ್ರರಂಗದವರು ಕೂಡ ದಿನ ಬೆಳಗಾದರೆ, ಕನ್ನಡ ಚಿತ್ರರಂಗ ಕುರಿತು ಮಾತಾಡುವಂತಾಗಿದೆ. ಅದಕ್ಕೆ ಕಾರಣ, ಹೊಸಬಗೆಯ ಚಿತ್ರಗಳು ಇಲ್ಲಿ ಸೆಟ್ಟೇರುತ್ತಿರುವುದು. ಆ ಮೂಲಕ ಗೆಲುವು ಕಾಣುತ್ತಿರುವುದು. ಕನ್ನಡ ಚಿತ್ರರಂಗ ನಮ್ಮ ಕುಟುಂಬವನ್ನು ಕೈ ಬಿಡಲಿಲ್ಲ. ನನ್ನ ಸಹೋದರರಿಗೂ ಇಲ್ಲಿ ಪ್ರೀತಿ ತೋರಿ, ನೆಲೆಕಂಡುಕೊಳ್ಳುವಂತೆ ಮಾಡಿದೆ. ಇಷ್ಟು ವರ್ಷ ಕನ್ನಡಿಗರು ತೋರಿರುವ ಪ್ರೀತಿ ಮುಂದೆಯೂ ಇರುತ್ತೆ ಎಂಬ ವಿಶ್ವಾಸ ನಮ್ಮದು’ ಎನ್ನುತ್ತಾರೆ ಸಾಯಿಕುಮಾರ್.