ಕಾಪು: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 1999 ರಲ್ಲಿ ದಿ. ಡಾ| ಪ್ರಭಾಕರ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಕಾಪು ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಯಲ್ಲಿ ಆರಂಭಗೊಂಡಿರುವ ದಂಡತೀರ್ಥ ಪದವಿ ಪೂರ್ವ ಕಾಲೇಜು ಪ್ರಸ್ತುತ ವರ್ಷ ರಜತ ವರ್ಷಾಚರಣೆಯ ಸಂಭ್ರಮದಲ್ಲಿದ್ದು ನ. 8ರಂದು ರಜತ ಮಹೋತ್ಸವ ಸಮಾರಂಭ ನಡೆಯಲಿದೆ ಎಂದು ಶಿಕ್ಷಣ ಸಂಸ್ಥೆಗಳ ಸಂಚಾಲಕ ಡಾ| ಕೆ. ಪ್ರಶಾಂತ್ ಶೆಟ್ಟಿ ಹೇಳಿದರು.
ನ.5ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಜತ ವರ್ಷಾಚರಣೆ ಪ್ರಯುಕ್ತ ಉಡುಪಿ ವಲಯ ಮಟ್ಟದ ಬಾಲಕ – ಬಾಲಕಿಯರ ಕರಾಟೆ ಪಂದ್ಯಾಟ, ಮುದ್ದು ಕೃಷ್ಣ ವೇಷ ಸ್ಪರ್ಧೆ, ಕಾಲೇಜು ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ, ವಿಜ್ಞಾನ ಮತ್ತು ಕಲಾ ಮಾದರಿಗಳ ಪ್ರದರ್ಶನ ಹಾಗೂ ಆಹಾರ ಮೇಳ ಸಹಿತ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ನ. 7 ರಂದು ವಾರ್ಷಿಕೋತ್ಸವ ಮತ್ತು ಬಹುಮಾನ ವಿತರಣೆ ನಡೆಯಲಿದೆ ಎಂದರು.
ಸ್ಥಾಪಕರ ಪುತ್ಥಳಿ ಅನಾವರಣ: ನ. 8ರಂದು ಸಂಜೆ 5.30ಕ್ಕೆ ರಜತ ಮಹೋತ್ಸವ ಸಮಾರಂಭ ನಡೆಯಲಿದ್ದು ಎಂಆರ್‌ಜಿ ಗ್ರೂಫ್‌ನ ಚೇರ್‌ಮೆನ್ ಕೆ. ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ನಿಟ್ಟೆ ವಿಶ್ವ ವಿದ್ಯಾನಿಲಯದ ಸಹ ಕುಲಾಧಿಪತಿ ಡಾ| ಎಂ. ಶಾಂತಾರಾಮ ಶೆಟ್ಟಿ ಮತ್ತು ಮಣಿಪಾಲ ವಿಶ್ವ ವಿದ್ಯಾನಿಲಯ ಸಹ ಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್ ಅವರು ಸ್ಥಾಪಕ ದಿ. ಡಾ. ಕೆ. ಪ್ರಭಾಕರ ಶೆಟ್ಟಿ ಅವರ ಪುತ್ಥಳಿ ಅನಾವರಣಗೊಳಿಸಿ, ಮಸ್ಕತ್ ಮಲ್ಟಿಟೆಕ್ ಗ್ರೂಫ್ ಸ್ಥಾಪಕ ದಿವಾಕರ ಶೆಟ್ಟಿ ಮಲ್ಲಾರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉದ್ಯಮಿ ಮೊಹಮ್ಮದ್ ಅಸ್ಲಾಂ ಖಾಝಿ, ಡಾ| ಚಂದ್ರಶೇಖರ ಶೆಟ್ಟಿ, ಡಾ| ಅಶೋಕ್ ಹೆಗ್ಡೆ, ವಿದ್ಯಾಂಗ ಉಪ ನಿರ್ದೇಶಕ ಮಾರುತಿ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಕೆ. ವಾಸುದೇವ ಶೆಟ್ಟಿ, ಮಹೋಹರ ಎಸ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಒಂದು ಕೋಟಿ ವಿದ್ಯಾ ನಿಧಿ ಸ್ಥಾಪನೆಯ ಗುರಿ: ಪ.ಪೂ. ವಿಭಾಗದ ವಿದ್ಯಾರ್ಥಿಗಳಿಗೆ 7 ಲಕ್ಷ ರೂ. ವರೆಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಮುಂದೆ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನೊಂದಿಗೆ ಒಂದು ಕೋಟಿ ರೂಪಾಯಿ ವಿದ್ಯಾನಿಧಿಯನ್ನು ಸ್ಥಾಪಿಸಿ, ಪ್ರತೀ ವರ್ಷ ಕಾಲೇಜಿನಲ್ಲಿ ವ್ಯಾಸಂಗ ಮಾಡುವ ಬಡ ವರ್ಗದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ಸಹಿತ ನೆರವು ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಅತ್ಯುತ್ತಮ ಸಾಧನೆ: ಅತ್ಯುತ್ತಮ ಶಾಲಾ ಕಟ್ಟಡ ಹಾಗೂ ಮೈದಾನ, ಕಂಪ್ಯೂಟರ್ ಸಹಿತ ವಿಜ್ಞಾನ ವಿಭಾಗದಲ್ಲಿ ಲ್ಯಾಬೋರೇಟರಿ, ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಸುಮಾರು 1200 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದು ನೂರು ಮಂದಿ ಶಿಕ್ಷಕ – ಶಿಕ್ಷಕೇತರ ಸಿಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ವಿಭಾಗದಲ್ಲಿ ಶೇ. 95ಕ್ಕೂ ಹೆಚ್ಚಿನ ಫಲಿತಾಂಶದೊಂದಿಗೆ ಕ್ರೀಡಾ ಚಟುವಟಿಕೆಗಳಲ್ಲಿ ರಾಜ್ಯ – ರಾಷ್ಟ್ರ ಮಟ್ಟದ ಸಾಧನೆಗೈದಿದ್ದಾರೆ.
ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತಾಧಿಕಾರಿ ಆಲ್ಬನ್ ರೋಡ್ರಿಗಸ್, ಪ್ರಾಂಶುಪಾಲ ಎಂ. ನೀಲಾನಂದ ನಾಯ್ಕ್, ಶಿಕ್ಷಣ ಸಂಯೋಜಕ ಶಿವಣ್ಣ ಬಾಯಾರ್, ಪ್ರಾಥಮಿಕ ವಿಭಾಗ ಮುಖ್ಯೋಪಾಧ್ಯಾಯ ಗ್ಯಾಬ್ರಿಯಲ್ ಮಸ್ಕರೇನಸ್ ಉಪಸ್ಥಿತರಿದ್ದರು.
ದಂಡತೀರ್ಥ ಸಮೂಹ ವಿದ್ಯಾ ಸಂಸ್ಥೆ ನಡೆದು ಬಂದ ಹಾದಿ
1917ರಲ್ಲಿ ಉಳಿಯಾರಗೋಳಿ ದಿ| ಮುದ್ದಣ್ಣ ಶೆಟ್ಟಿ ಅವರಿಂದ ಆರಂಭಗೊಂಡ ದಂಡತೀರ್ಥ ಹಿ. ಪ್ರಾ. ಶಾಲೆಯು 1951ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಗೊಂಡಿತು. 1956ರಲ್ಲಿ ಮುದ್ದಣ್ಣ ಶೆಟ್ಟಿ ಅವರ ಕಾಲಾನಂತರ ಅವರ ಪತ್ನಿ ಗಿರಿಜಾ ಶೆಟ್ಟಿ ಶಾಲೆಯನ್ನು ಮುನ್ನಡೆಸಿದ್ದು, 1980-81ರಲ್ಲಿ ಗೋವಿಂದ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿದರು. ಮುಂದೆ ವಸಂತಿ ಶೆಟ್ಟಿ ಸಂಚಾಲಕತ್ವದಲ್ಲಿ 1989-90ರಲ್ಲಿ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿತು. 1998ರಿಂದ ಗೋವಿಂದ ಶೆಟ್ಟಿ ಅವರ ಅಳಿಯ ಡಾ| ಕೆ. ಪ್ರಭಾಕರ ಶೆಟ್ಟಿ ಅವರ ಸಂಚಾಲಕರಾಗಿ, 1999 ರಲ್ಲಿ ವಿಜ್ಞಾನ ವಿಭಾಗದ ಮೂಲಕ ಪದವಿ ಪೂರ್ವ ಕಾಲೇಜು, 2000ದಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗವನ್ನು ಆರಂಭಿಸಿದರು. 2010ರಲ್ಲಿ ಡಾ| ಕೆ. ಪ್ರಶಾಂತ್ ಶೆಟ್ಟಿ ಪ್ಯಾರಾ ಮೆಡಿಕಲ್ ಕಾಲೇಜು ಸ್ಥಾಪಿಸಿದರು. ಪ್ರಸ್ತುತ ಡಾ| ಕೆ. ಪ್ರಭಾಕರ ಶೆಟ್ಟಿ ಅವರ ಪತ್ನಿ ಶೋಭಾ ಪಿ. ಶೆಟ್ಟಿ ಅಧ್ಯಕ್ಷರಾಗಿ, ಮಗ ಡಾ| ಕೆ. ಪ್ರಶಾಂತ್ ಶೆಟ್ಟಿ ಸಂಚಾಲಕರಾಗಿ, ಸೊಸೆ ಡಾ| ಪನ್ನಾ ಪಿ. ಶೆಟ್ಟಿ, ಮೊಮ್ಮಗಳು ಡಾ| ಪ್ರಿಶಾ ಪಿ. ಶೆಟ್ಟಿ ಟ್ರಸ್ಟಿಗಳಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.