Advertisement

ಉಡುಪಿ ಜಿಲ್ಲೆಗೆ ರಜತೋತ್ಸವ ಸಂಭ್ರಮ; ಆಡಳಿತ ಚುಕ್ಕಾಣಿ ಹಿಡಿದ ಮೊದಲ ಮಹಿಳಾ ಸಾರಥಿಗಳು

01:28 PM Aug 23, 2022 | Team Udayavani |

ಉಡುಪಿ: ಉಡುಪಿಯಲ್ಲಿ 25 ವರ್ಷಗಳ ಹಿಂದೆ 1997ರ ಆಗಸ್ಟ್‌ ತಿಂಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಎಂದಿನಂತೆ ಸಾಮಾನ್ಯವಾಗಿರಲಿಲ್ಲ ಅದು ಪ್ರತ್ಯೇಕ ಉಡುಪಿ ಜಿಲ್ಲೆಯಾಗಿ ರೂಪುಗೊಂಡ ಸಮಯ. ಸಂಭ್ರಮದ ಜತೆಗೆ ಆಡಳಿತ ವ್ಯವಸ್ಥೆಗೆ ಹಲವು ಸವಾಲುಗಳೇ ಎದುರಿದ್ದವು.

Advertisement

ಹೊಸ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದದ್ದು ಮಹಿಳಾ ಸಾರಥಿಗಳು ಎಂದರೆ ಅದೊಂದು ವಿಶೇಷವೇ ಸರಿ. ಹೊಸ ಜಿಲ್ಲೆ ರೂಪುಗೊಂಡು ಅದನ್ನು ಮುನ್ನಡೆಸುವುದು ಸಾಮಾನ್ಯ ವಿಷಯವಲ್ಲ. ಅಂಥ ಸಮಯದಲ್ಲಿ ಆಡಳಿತಾತ್ಮಕ ಮತ್ತು ಕಾನೂನು ಸುವ್ಯವಸ್ಥೆಯ ಸವಾಲನ್ನು ಸಮರ್ಥವಾಗಿ ಮುನ್ನಡೆಸಿದವರು ಅಂದಿನ ಜಿಲ್ಲಾಧಿಕಾರಿಯಗಿದ್ದ ಡಾ| ಕಲ್ಪನಾ ಗೋಪಾಲನ್‌ ಮತ್ತು ಸವಿತಾ ಹಂಡೆ.

ಮೂಲ ಸೌಕರ್ಯ, ಕಂದಾಯ ಸಮಸ್ಯೆ ಪರಿಹಾರಕ್ಕೆ ಡಿಸಿ ಶ್ರಮ

ಬೆಂಗಳೂರಿನ ಡಾ| ಕಲ್ಪನಾ ಗೋಪಾಲನ್‌ 1987ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ನೂತನ ಜಿಲ್ಲೆ ಆರಂಭಗೊಂಡ ಬಳಿಕ ಸ್ವಲ್ಪ ಕಾಲ ಜಿಲ್ಲಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸಿದ್ದರೂ ಜಿಲ್ಲೆಯ ಮೂಲ ಸೌಕರ್ಯ ಮತ್ತು ಕಂದಾಯ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಿದವರು. ಪ್ರತ್ಯೇಕ ಜಿಲ್ಲೆಯಾದ ಬಳಿಕ ಸ್ಪಷ್ಟ ಅಭಿವೃದ್ಧಿ ದೂರದೃಷ್ಟಿಯನ್ನು ಹೊಂದಿದ್ದ ಅವರು, ಎಲ್ಲ ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸಲು ಪ್ರಯತ್ನಿಸಿದವರು. ವಿವಿಧ ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿ, ವಿವಿಧ ಇಲಾಖೆಗಳ ಉನ್ನತ ಅಧಿಕಾರಿಯಾಗಿ ಇದೀಗ ನಿವೃತ್ತರಾಗಿದ್ದಾರೆ. ಭಾರತೀಯ ಆಡಳಿತ ಸೇವೆಯಲ್ಲಿ 35 ವರ್ಷಗಳ ಕೆಲಸದ ಅಪಾರ ಅನುಭವ ಪಡೆದಿರುವ ಇವರು ಭೂ ಆಡಳಿತ, ನಗರ ನಿರ್ವಹಣೆ, ಗ್ರಾಮೀಣಾಭಿವೃದ್ಧಿ, ಕ್ರೀಡೆ, ಕಾರ್ಮಿಕ, ಪಶುಸಂಗೋಪನೆ, ಮೀನುಗಾರಿಕೆ, ಸಾರ್ವಜನಿಕ ಕುಂದುಕೊರತೆಗಳು, ಶಿಕ್ಷಣ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಹಲವಾರು ಲೇಖನ, ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

Advertisement

ದಂಧೆಕೋರರಿಗೆ ಬಿಸಿಮುಟ್ಟಿಸಿದ್ದ ಎಸ್‌ಪಿ

1990ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಸವಿತಾ ಹಂಡೆ ಅವರು ಮಹಾರಾಷ್ಟ್ರ ಮೂಲದವರು. ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದರು. ಉಡುಪಿ ಜಿಲೆಯಲ್ಲಿ ಅವರು ಎಸ್‌ಪಿ ಆದ ಮೇಲೆ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸಲು ಶ್ರಮಿಸಿದರು. ಜಿಲ್ಲೆಯಲ್ಲಿ ಕ್ರೈಂ ರೇಟ್‌ ಕಡಿಮೆ ಇದ್ದರೂ ಜೂಜಾಟ, ಮಟ್ಕಾ ಸಹಿತ ಕೆಲವು ಅಕ್ರಮ ಚಟುವಟಿಕೆಗಳು ಹೆಚ್ಚಿದ್ದವು. ಮುಂಬಯಿ ಭೂಗತ ಜಗತ್ತು ಮತ್ತು ಉಡುಪಿ ಸಂಪರ್ಕವಿರುವ ಹಲವು ಅಕ್ರಮ ಚಟುವಟಿಕೆಗಳ ವಿರುದ್ದ ಕಠಿನ ಕ್ರಮ ತೆಗೆದುಕೊಂಡಿದ್ದರು. ಜಿಲ್ಲೆಯ ಕುಖ್ಯಾತ ಭೂಗತ ಪಾತಕಿಯನ್ನು ಮನೆಗೆ ನುಗ್ಗಿ ಅರೆಸ್ಟ್‌ ಮಾಡಿದ್ದ ಅವರ ಧೈರ್ಯಕ್ಕೆ ಜನತೆ ಬೆರಗಾಗಿದ್ದರು. ಮಟ್ಕಾ ದಂಧೆ ಹಾವಳಿಗೆ ವಿಶೇಷ ಕಾರ್ಯಾಚರಣೆ ಮೂಲಕ ಬಿಸಿ ಮುಟ್ಟಿಸಿದ್ದ ಅವರು ಅಕ್ರಮ ದಂಧೆಕೋರರಿಗೆ ಸಿಂಹಿಣಿಯಾಗಿದ್ದರು. ಅನಂತರ ಜಿಲ್ಲೆಯಿಂದ ವರ್ಗಾವಣೆಗೊಂಡ ಅವರು ಕಾಡುಗಳ್ಳ ವೀರಪ್ಪನ್‌ ಸೆರೆ ಹಿಡಿ ಯುವ ಮಹತ್ವದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. 2000 ಇಸವಿಯಲ್ಲಿ ಕೇಂದ್ರ ಸೇವೆಗೆ ನಿಯೋಜನೆಗೊಂಡು ಪ್ರಸ್ತುತ ಪಾಕಿಸ್ಥಾನದ ಕಾಬುಲ್‌ನಲ್ಲಿ ವಿಶ್ವಸಂಸ್ಥೆ ಭದ್ರತಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next