Advertisement

ಕರಾವಳಿಯಲ್ಲಿ ಗೂಡು ಕಟ್ಟದ ರೇಷ್ಮೆ

10:41 PM Jan 25, 2021 | Team Udayavani |

ಬೆಳ್ತಂಗಡಿ: ರಾಜ್ಯ ಸರಕಾರವು ರೇಷ್ಮೆ ಇಲಾಖೆಯಡಿ ಸಬ್ಸಿಡಿ ರೂಪದಲ್ಲಿ ಬೆಳೆಗಾರರಿಗೆ ಅನೇಕ ಯೋಜನೆಗಳನ್ನು ಪರಿಚಯಿಸಿದ್ದರೂ ಕರಾವಳಿಯಾದ್ಯಂತ ರೇಷ್ಮೆ ವಸ್ತ್ರೋದ್ಯಮ ಖರೀದಿಗಿರುವ ಬೇಡಿಕೆ ರೇಷ್ಮೆ ಉತ್ಪಾದನೆಗಿಲ್ಲ. ಇದರಿಂದಾಗಿ ಕರಾವಳಿಯ ಏಕಮಾತ್ರ ರೇಷ್ಮೆ ಬಿತ್ತನೆ ಗೂಡು ತಯಾರಿಕ ಕೇಂದ್ರವೂ ಅವಸಾನದಂಚಿಗೆ ಸಾಗಿದೆ.

Advertisement

ರಾಜ್ಯದಲ್ಲಿ ಒಟ್ಟಾರೆ 25 ಬಿತ್ತನೆ ಗೂಡು ತಯಾರಿಕ ಕೇಂದ್ರಗಳಿವೆ. ಕರಾವಳಿಯ ಏಕಮಾತ್ರ ರೇಷ್ಮೆ ಫಾರ್ಮ್ ಬೆಳ್ತಂಗಡಿ ತಾಲೂಕಿನ ಓಡಿಲಾ°ಳ ಗ್ರಾಮದಲ್ಲಿದೆ. 1978ರಲ್ಲಿ 20.43 ಎಕರೆ ಸ್ಥಳ ಕಾಯ್ದಿರಿಸಲಾಗಿದೆ. ದ್ವಿತಳಿ ರೇಷ್ಮೆ ಬಿತ್ತನೆ ಗೂಡು ತಯಾರಿ ಏಕಮಾತ್ರ ಕೇಂದ್ರ ಇಲ್ಲಿದ್ದು, ಸಿಬಂದಿ ಕೊರತೆಯ ನಡುವೆ ಸರಕಾರದಿಂದ ಉತ್ತೇಜನ ಸಿಗದೆ ಬೆಳ್ತಂಗಡಿ ರೇಷ್ಮೆ ಫಾರ್ಮ್ ಅವಸಾನದಂಚಿಗೆ ತಲುಪಿದೆ. ಈ ಹಿಂದೆ ಕಡಬ ತಾಲೂಕಿನ ಕೊಯ್ಲದಲ್ಲಿ 1978ರಲ್ಲಿ ಆರಂಭವಾಗಿದ್ದ ಫಾರ್ಮ್ ಕಳೆದ ನಾಲ್ಕು ವರ್ಷಗಳ ಹಿಂದೆ ಮುಚ್ಚಲ್ಪಟ್ಟಿದೆ.

ಆರಂಭದಲ್ಲಿ 2 ಲಕ್ಷ ಗೂಡು ಬೆಳೆಯುವ ಗುರಿ ಹೊಂದಿದ್ದಾಗ, 8 ಜನ ಕೆಲಸಗಾರರು, 7 ಜನ ಇಲಾಖೆ ಸಿಬಂದಿ, ಓರ್ವ ಮೇಲಾಧಿಕಾರಿ ನೇಮಿಸಲಾಗಿತ್ತು. ಪ್ರಸಕ್ತ ರೇಷ್ಮೆ ಪ್ರದರ್ಶಕರ ಹುದ್ದೆಯೊಂದಿದ್ದು, ಅವರ ನಿವೃತ್ತಿ ಅವಧಿಯೂ ಸಮೀಪಿಸುತ್ತಿರುವುದರಿಂದ ಇದರ ಉತ್ತೇಜನಕ್ಕೆ ಸರಕಾರ ಮುಂದಾಗಬೇಕಿದೆ.

ಜಿಲ್ಲೆಯಲ್ಲಿ 30 ಪೈಕಿ 5 ಹುದ್ದೆ ಭರ್ತಿ :

ಪ್ರಸಕ್ತ ಬೆಳ್ತಂಗಡಿ ರೇಷ್ಮೆ ಫಾರ್ಮ್ನಲ್ಲಿ ರೇಷ್ಮೆ ಪ್ರದರ್ಶಕರು ಹಾಗೂ ಗ್ರೂಪ್‌ ಡಿ ಸಿಬಂದಿ ಇದ್ದು, ಉಳಿದಂತೆ ವಿಸ್ತಾರಣಾಧಿಕಾರಿ-1, ರೇಷ್ಮೆ ನಿರೀಕ್ಷಕರು -1, ರೇಷ್ಮೆ ಪ್ರವರ್ತಕರು-2 ಸಿಬಂದಿಯನ್ನು ಇತರ ಇಲಾಖೆಗೆ ವರ್ಗಾಯಿಸಲಾಗಿದೆ. ದ.ಕ.ಜಿಲ್ಲೆಯಲ್ಲಿ ಸಹಾಯಕ ನಿರ್ದೇಶಕರ ಹುದ್ದೆಯೇ ಖಾಲಿ ಬಿದ್ದಿದೆ. ಪ್ರಸಕ್ತ ಜಿಲ್ಲೆಯಲ್ಲಿ ರೇಷ್ಮೆ ಫಾರ್ಮ್ ಅಲ್ಲದೆ ಇಲಾಖೆಯಡಿ 30 ಹುದ್ದೆಗಳು ಖಾಲಿ ಬಿದ್ದಿದ್ದು, 5 ಹುದ್ದೆಗಳಷ್ಟೇ ಭರ್ತಿಯಾಗಿದೆ.

Advertisement

ಸೀಮಿತ ಬೆಳೆಗಾರರು :

ಉಭಯ ಜಿಲ್ಲೆಯ ಕಾರ್ಕಳದಲ್ಲಿ-38, ಕುಂದಾಪುರ-6, ಉಡುಪಿ-4, ಬಂಟ್ವಾಳ-7, ಬೆಳ್ತಂಗಡಿ-6, ಮೂಡುಬಿದಿರೆಯಲ್ಲಿ ಒಬ್ಬ ರೈತ ರೇಷ್ಮೆ ಬೆಳೆಯುತ್ತಿದ್ದಾರೆ. ಒಟ್ಟು 85ಎಕ್ರೆ ಹಿಪ್ಪು ನೇರಳೆ ತೋಟ ಬೆಳೆಯಲಾಗುತ್ತಿದೆ. ರೇಷ್ಮೆ ಬೆಳೆ ಕೆ.ಜಿ.ಗೆ 350ರಿಂದ 400 ರೂ. ಇದ್ದು, ಹಿಪ್ಪುನೇರಳೆ ಗೊಬ್ಬರ ಉತ್ಕೃಷ್ಟ ಗುಣಮಟ್ಟದ್ದಾಗಿದೆ.

ಒಬ್ಬರಿಂದಲೇ ಎಲ್ಲ ಆರೈಕೆ :

ಹುಳುಗಳ ಆರೈಕೆಗಾಗಿ 21ರಿಂದ 25 ದಿನಗಳ ಒಳಗಾಗಿ ಹಿಪ್ಪುನೇರಳೆ ತೋಟ ಆರೈಕೆ ಮಾಡಿ, ಹುಳ ಸಾಕಿ, ಗೂಡು ಮಾಡುವ ಎಲ್ಲ ಕೆಲಸ ಒಬ್ಬರೇ ನಿರ್ವಹಿಸುತ್ತಿರುವುದು ವಿಪರ್ಯಾಸ. ರೇಷ್ಮೆ ಗೂಡು ತಯಾರಿಕೆಗೆ 27ರಿಂದ 28 ಡಿಗ್ರಿ ಉಷ್ಣಾಂಶ ಬೇಕಾಗಿದ್ದು, ಇಲ್ಲಿನ ಉಷ್ಣತೆ, ಕಳೆಗಿಡ ಬಾಧೆ, ಇತ್ಯಾದಿ ಸವಾಲುಗಳ ಮಧ್ಯೆಯೂ ರೇಷ್ಮೆ ಪ್ರದರ್ಶಕರಾದ ವಿಜಯಲಕ್ಷ್ಮೀ ಅವರ ಶ್ರಮದಿಂದ ಗುಣಮಟ್ಟದ ಗೂಡು ತಯಾರಿಕೆಗಾಗಿ ಬೆಳ್ತಂಗಡಿ ಫಾರ್ಮ್ ಹೆಸರುವಾಸಿಯಾಗಿರುವುದು ಗಮನಾರ್ಹವಾಗಿದೆ.

ಕರಾವಳಿಯಲ್ಲಿ ರೇಷ್ಮೆ ಬೆಳೆ ಬೆಳೆಯಲು ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ರೈತರು ಆಸಕ್ತಿ ತೋರಿದಲ್ಲಿ ಇಲಾಖೆ 3 ಲಕ್ಷ ರೂ. ವರೆಗೆ ಸಬ್ಸಿಡಿ ನೀಡುತ್ತಿದೆ. ಬೆಳ್ತಂಗಡಿಯಲ್ಲಿರುವ ರೇಷ್ಮೆ ಫಾರ್ಮ್ ಪಿ2 ಗ್ರೇಡ್‌ ಹೊಂದಿದ್ದು, ಇದರ ಸಂರಕ್ಷಣೆ ಹಾಗೂ ಹೆಚ್ಚಿನ ಸವಲತ್ತು ಒದಗಿಸಲು ಸರಕಾರಕ್ಕೆ ಬರೆಯಲಾಗಿದೆ.-ಪದ್ಮನಾಭ ಭಟ್‌, ಪ್ರಭಾರ ಸಹಾಯಕ ನಿರ್ದೇಶಕರು, ದ.ಕ. ಜಿಲ್ಲೆ.

 

 

ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next