ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೈನೋದ್ಯಮದ ಬಳಿಕ ರೈತರು ಹೆಚ್ಚು ಅವಲಂಬಿಸಿರುವ ರೇಷ್ಮೆ ಕೃಷಿಯಲ್ಲಿ ಈಗ ನುಸಿ ರೋಗದ ಕಂಟಕ ರೈತರಿಗೆ ಎದುರಾಗಿದೆ. ಈಗಾಗಲೇ ರೇಷ್ಮೆಗೂಡಿನ ಬೆಲೆ ಪಾತಾಳಕ್ಕೆ ಕುಸಿದು ರೈತರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿರುವಾಗಲೇ ಜಿಲ್ಲೆಯಲ್ಲಿ ರೇಷ್ಮೆಗೂಡಿಗೆ ಬಳಸುವ ಹಿಪ್ಪು ನೇರಳೆಗೆ ನುಸಿರೋಗ ಬಾಧಿಸುತ್ತಿದೆ.
ಜಿಲ್ಲೆಯಲ್ಲಿ ಹಲವು ದಿನ ಗಳಿಂದ ಮೋಡ ಕವಿದ ವಾತಾ ವರಣ ಇದ್ದು, ನಿರಂತರವಾಗಿ ಜಡಿ ಮಳೆ ಸುರಿಯುತ್ತಿರುವ ಪರಿಣಾಮ ಹವಾಮಾನದಲ್ಲಿ ಉಂಟಾಗಿರುವ ಏರುಪೇರು ನಿಂದ ಹಿಪ್ಪುನೇರಳೆ ಸೊಪ್ಪಿಗೆ ಈಗ ನುಸಿರೋಗ ವ್ಯಾಪಕವಾಗಿ ಹರಡುವ ಮೂಲಕ ಬೆಳೆಗಾರರನ್ನು ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿಸಿದೆ.
ಏ
ನಿದು ನುಸಿರೋಗ?: ಥ್ರಿಪ್ಸ್ ಹಾಗೂ ಮೈಟ್ಸ್ ನುಸಿ ಕೀಟಗಳು ಹಿಪ್ಪುನೇರಳೆ ಬೆಳೆಯ ರಸಹೀರುವ ಕೀಟಗಳಾಗಿದ್ದು, ಇವು ಕಲೋಚಿತ ಪೀಡೆಗಳಾಗಿವೆ. ಮೇ, ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಹಿಪ್ಪುನೇರಳೆಯಲ್ಲಿ ಥ್ರಿಪ್ಸ್ ಹಾಗೂ ಮೈಟ್ಸ್ ನುಸಿ ಕೀಟಗಳ ಬಾಧೆ ಹೆಚ್ಚಾಗುತ್ತಿರುವುದರಿಂದ ಥ್ರಿಪ್ಸ್ ನುಸಿಗಳು ಎಲೆಯ ತಳಭಾಗದಲ್ಲಿ ಕೆರೆದು ಆ ಗಾಯದಿಂದ ಹೊರಬರುವ ಗಿಡದ ರಸವನ್ನು ಹೀರುತ್ತವೆ. ಹೀಗೆ ಗಾಯ ಮಾಡಿದ ಜಾಗದಲ್ಲಿ ಮೊದಲಿಗೆ ಬಿಳಿಯ ಸಣ್ಣ ಗೆರೆಗಳು ಕಾಣಿಸಿಕೊಂಡು ಆ ನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇವುಗಳು ಎಲೆಯ ತುದಿಗಳಲ್ಲಿ ಹೆಚ್ಚು ಹಾನಿ ಮಾಡುತ್ತವೆ. ಇದಲ್ಲದೆ ಮೊಟ್ಟೆಯಿಡುವ ಕ್ರಿಯೆಯಿಂದಾಗಿ ಅವು ಎಲೆಯ ಮೇಲೆ ಸಣ್ಣ ಗಾಯಗಳನ್ನು ಮಾಡುವುದರಿಂದ ಆ ಜಾಗದಲ್ಲಿ ಎಲೆಗಳು ಕಂದು ಬಣ್ಣಕ್ಕೆ ತಿರುಗುತ್ತದೆ. ಇಂತಹ ಹಾನಿಯಿಂದ ಎಲೆಯ ಗುಣಮಟ್ಟವು ಕುಗ್ಗಿ ಗೂಡಿನ ಇಳುವರಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಥ್ರಿಪ್ಸ್ ಮತ್ತು ಅವುಗಳ ಅಪ್ಸರೆಗಳು ಎಲೆಗಳ ನರಗಳ ಅಕ್ಕಪಕ್ಕ ಹರಡಿ ಕೊಂಡಿರುತ್ತವೆ. ಈ ಎಲೆಯ ತಳಭಾಗದಲ್ಲಿ ಉಜ್ಜಿ ಹೊರಸೂಸುವ ರಸವನ್ನು ಹೀರುತ್ತವೆ. ಈ ರೀತಿಯ ಹಾನಿಯಿಂದ ಎಲೆಗಳ ಮೇಲ್ಭಾಗದಲ್ಲಿ ಬಿಳಿ ಮಚ್ಚೆಗಳುಂಟಾಗುವುದಲ್ಲದೆ, ಎಲೆ ಅಂಚುಗಳು ಮೇಲಕ್ಕೆ ಭಾಗುತ್ತವೆ. ಹಾನಿಗೀಡಾದ ಎಲೆಗಳು ರೇಷ್ಮೆಹುಳುಗಳ ಆಹಾರಕ್ಕೆ ಯೋಗ್ಯವಲ್ಲ ಎಂಬುದು ಕೃಷಿ ವಿಜ್ಞಾನಿಗಳ ಮಾತು.
ರೈತರ ಪರದಾಟ: ಒಂದು ಕಡೆ ರೇಷ್ಮೆಗೂಡು ಬೆಲೆ ಕುಸಿತದಿಂದ ಚಿಂತೆಗೀಡು ಆಗಿರುವ ರೈತರಿಗೆ ಹಿಪ್ಪು ನೇರಳೆ ಸೊಪ್ಪಿಗೆ ಆವರಿಸಿರುವ ನುಸಿರೋಗ ತಲ್ಲಣ ಉಂಟು ಮಾಡಿದೆ. ರೋಗ ನಿವಾರಣೆಗೆ ಸಾವಿರಾರು ರೂ. ವೆಚ್ಚ ಮಾಡಿ ಔಷಧಿ ಸಿಂಪಡಿಸಬೇಕು. ಆದರೆ, ಜಡಿ ಮಳೆ ಹಾಗೂ ಮೋಡ ಮುಸುಕಿದ ವಾತಾವರಣ ಇರುವುದರಿಂದ ಎಷ್ಟೇ ಔಷಧಿ ಸಿಂಪಡಿಸಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ರೇಷ್ಮೆಗೂಡು ಬೆಳೆಯಲು ಹಿಪ್ಪು ನೇರಳೆ ಸೊಪ್ಪಿಗೆ ರೈತರು ಹುಡುಕಾಟ ನಡೆಸುತ್ತಿದ್ದಾರೆ. ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಇಲ್ಲದ ರೇಷ್ಮೆಗೂಡು ಗುಣಮಟ್ಟ ಕುಸಿಯುವ ಆತಂಕ ರೈತರಲ್ಲಿ ಆವರಿಸಿದೆ. ಹೀಗಾಗಿ ಒಂದೇ ಬಾರಿಗೆ ರೈತರಿಗೆ ರೇಷ್ಮೆಗೂಡು ದರ ಕುಸಿತ ಹಾಗೂ ನುಸಿರೋಗ ಒಂದು ರೀತಿ ಡಬಲ್ ಶಾಕ್ ನೀಡಿದ್ದು, ರೇಷ್ಮೆ ಬೆಳೆಗಾರರಲ್ಲಿ ತಲ್ಲಣ ಉಂಟು ಮಾಡಿದೆ.
21 ಸಾವಿರ ಹೆಕ್ಟೇರ್‌ನಲ್ಲಿ ರೇಷ್ಮೆ: ಜಿಲ್ಲೆಯಲ್ಲಿ ಬರೋಬ್ಬರಿ 21 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಇದೆ. ನರೇಗಾ ಯೋಜನೆ ಜಾರಿ ಬಳಿಕ ಜಿಲ್ಲಾದ್ಯಂತ ಗಣನೀಯ ಪ್ರಮಾಣದಲ್ಲಿ ರೇಷ್ಮೆ ಕೃಷಿ ವಿಸ್ತರಣೆ ಆಗಿದೆ. ಶಿಡ್ಲಘಟ್ಟದಲ್ಲಿ 6000 ಹೆಕ್ಟೇರ್ ಪ್ರದೇಶದಲ್ಲಿ ಅಷ್ಟೇ ಪ್ರಮಾಣದಲ್ಲಿ ಚಿಂತಾಮಣಿಯಲ್ಲಿ ರೇಷ್ಮೆ ಕೃಷಿ ಇದೆ. ನಂತರ ಸ್ಥಾನದಲ್ಲಿ ಗೌರಿಬಿದನೂರು ಇದ್ದು ನಾಲ್ಕೇ ಸ್ಥಾನದಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಗುಡಿಬಂಡೆ ತಾಲೂಕು ಗಳಲ್ಲಿ ರೇಷ್ಮೆ ಕೃಷಿ ಪ್ರದೇಶ ಇದೆ.
ನುಸಿ ರೋಗ ಸಮಗ್ರ ನಿರ್ವಹಣೆಗೆ ತಜ್ಞರ ಸಲಹೆ ಏನು ?:
- ಹಿಪ್ಪುನೇರಳೆ ತೋಟವನ್ನು ಆಗಾಗ್ಗೆ ಉಳುಮೆ ಮಾಡುವುದರಿಂದ ನುಸಿಯ ಕೋಶಗಳನ್ನು ಬಿಸಿಲಿಗೆ ಅಥವಾ ಶತ್ರುಗಳಿಗೆ ಒಡ್ಡಿ ನಾಶಪಡಿಸಬಹುದು.
- ಇತರೆ ಆಸರೆ ಸಸ್ಯ ಹಾಗೂ ಕಳೆಗಳನ್ನು ತೆಗೆಯುವುದರಿಂದ ಥ್ರಿಪ್ಸ್ ನುಸಿಗಳ ಸಂಖ್ಯೆಯನ್ನು ನಿಯಂತ್ರಿಸಬಹುದು. ಗಿಡ ಕತ್ತರಿಸುವುದು, ನುಸಿಗಳ ಸಂಖ್ಯೆಯ ಮೇಲೆ ಬಲವಾದ ಪರಿಣಾಮ ಬೀರುತ್ತದೆ.
- ಎಲೆಗಳ ತಳಭಾಗಕ್ಕೆ ನೀರನ್ನು ರಭಸವಾಗಿ ಸಿಂಪಡಣೆ ಮಾಡುವುದರಿಂದ ಈ ನುಸಿಗಳನ್ನು ಎಲೆಗಳಿಂದ ತೊಳೆದು ಹಾಕಬಹುದು.
- ಎಕರೆಗೆ 5-10 ನೀಲಿ ಅಂಟುಪಟ್ಟಿಗಳನ್ನು ಬಳಸುವುದರಿಂದ ಥ್ರಿಪ್ಸ್ ನುಸಿಗಳನ್ನು ನಿಯಂತ್ರಿಸಬಹುದು
- ಬೇವಿನ ಎಣ್ಣೆ (10000 ಪಿ.ಪಿ.ಎಂ) 2 ಮಿ.ಲೀ ಒಂದು ಲೀ. ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸುವುದು.
- ಸ್ವಾಭಾವಿಕ ಶತ್ರುಗಳಾದ ಗುಲಗಂಜಿ ಹುಳುಗಳಿಂದ ಇವುಗಳನ್ನು ನಾಶ ಮಾಡಬಹುದು. ಹಸಿರು ಲೇಸ್ ವಿಂಗ್ ಚಿಟ್ಟೆ (ಕ್ರೈಸೋಪ) ಗಳನ್ನು ಬಿಡುಗಡೆ ಮಾಡುವುದು.
ಕೆ.ಜಿ. ರೇಷ್ಮೆಗೂಡಿಗೆ 400 ರೂ. ಸಿಕ್ಕರೂ ನಷ್ಟ :
ರೇಷ್ಮೆ ಕೃಷಿ ಅವಸಾನದ ಅಂಚಿಗೆ ಬಂದು ನಿಂತಿದೆ. ವಿಪರೀತ ರೋಗಬಾಧೆ, ಬೆಲೆ ಕುಸಿತವಾಗಿದೆ. ರೇಷ್ಮೆ ಗೂಡಿಗೆ 400 ರೂ. ಸಿಕ್ಕರೂ ರೇಷ್ಮೆ ಬೆಳೆಗಾರರಿಗೆ ನಷ್ಟವೇ, ಕನಿಷ್ಠ 550 ರಿಂದ 600 ರೂ. ಕೆ.ಜಿ. ರೇಷ್ಮೆಗೂಡಿಗೆ ಸಿಗಬೇಕು. ಕಳೆದ ತಿಂಗಳಿಂದ ರೇಷ್ಮೆಗೂಡಿನ ಬೆಲೆ ಕುಸಿತ ಕಂಡಿದೆ. ಸದ್ಯ 250ರಿಂದ 350 ರೂ. ವರೆಗೂ ಮಾರಾಟವಾಗುತ್ತಿದೆ.
● ಮಳ್ಳೂರು ಹರೀಶ್, ಉಪಾಧ್ಯಕ್ಷರು, ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ, ಶಿಡ್ಲಘಟ್ಟ
ಜಿಲ್ಲೆಯಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಆವರಿಸಿರುವ ನುಸಿ ರೋಗ ತಡೆಯಲು ಈಗಾಗಲೇ ಕೃಷಿ ವಿಜ್ಞಾನಿಗಳನ್ನು ಕರೆಸಿ ಪ್ರತಿ ತಾಲೂಕಿನಲ್ಲಿ ರೈತರಿಗೆ ಕಾರ್ಯಾಗಾರದ ಹಾಗೂ ತೋಟಗಳಿಗೆ ತೆರಳಿ ಪ್ರಾತ್ಯಕ್ಷಿತೆಯ ಮೂಲಕ ಅರಿವು ಮೂಡಿಸಲಾಗಿದೆ. ಜಿಲ್ಲೆಯಲ್ಲಿ 21 ಸಾವಿರ ಹೆಕ್ಟೇರ್ ಪ್ರದೇಶ ದಲ್ಲಿ ರೇಷ್ಮೆ ಕೃಷಿ ಇದ್ದು ಶಿಡ್ಲಘಟ್ಟ ಹಾಗೂ ಚಿಂತಾಮಣಿಯಲ್ಲಿ ಹೆಚ್ಚು ರೇಷ್ಮೆ ಬೆಳೆಯುವ ರೈತರು ಇದ್ದಾರೆ. ● ಲಕ್ಷ್ಮಣಗೌಡ, ಉಪ ನಿರ್ದೇಶಕರು, ರೇಷ್ಮೆ ಕೃಷಿ ಇಲಾಖೆ
-ಕಾಗತಿ ನಾಗರಾಜಪ್ಪ