Advertisement

ಟ್ರ್ಯಾಕ್ಟರ್‌ ಚಾಲಕನ ಚಿತ್ತ ರೇಷ್ಮೆ ಹುಳು ಸಾಕಾಣಿಕೆಯತ್ತ

03:02 PM Jun 11, 2023 | Team Udayavani |

ಎಚ್‌.ಡಿ.ಕೋಟೆ: ಕಳೆದ 3 ವರ್ಷಗಳ ಹಿಂದೆ ಟ್ರ್ಯಾಕ್ಟರ್‌ ಚಾಲಕನಾಗಿದ್ದ ನಾನೀಗ 10 ಮಂದಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಿದ್ದೇನೆ. ಪ್ರತಿ ತಿಂಗಳು ತೀರ ಕಡಿಮೆ ಎಂದರೂ ಖರ್ಚು ಕಳೆದು 1 ಲಕ್ಷ ಹಣಗಳಿಸುತ್ತಿದ್ದಾರೆ. ಈ ಸಾಧನೆಗೆ ನನ್ನ ರೇಷ್ಮೆ ಕೃಷಿ ಹಾಗೂ ರೇಷ್ಮೆ ಬೆಳೆಯಲು ಸಹಕಾರ ನೀಡಿದ ಅಧಿಕಾರಿಗಳು ಸಂಘ-ಸಂಸ್ಥೆಗಳು ಕಾರಣ. ಇತರ ರೈತರು ಆದಾಯಕ್ಕೆ ಪೂರಕವಾದ ರೇಷ್ಮೆ ಬೆಳೆದು ಸ್ವಾವಲಂಭಿಗಳಾಗುವಂತೆ ರೈತ ಪರಶಿವಮೂರ್ತಿ ರೈತರಿಗೆ ಸಲಹೆ ನೀಡಿದ್ದಾರೆ.

Advertisement

ಮೂಲತಃ ತಾಲೂಕಿನ ಜಕ್ಕಹಳ್ಳಿ ಗ್ರಾಮದ ನಿವಾಸಿ ಪರಶಿವಮೂರ್ತಿ ಲಕ್ಷ್ಮೀಪುರದ ಬಳಿಯಲ್ಲಿ ತನಗಿದ್ದ 2 ಎಕರೆ ಕೃಷಿ ಭೂಮಿಯಿಂದ ಯಾವ ಬೆಳೆದು ಆರ್ಥಿಕವಾಗಿ ಸಬಲೀಕರಣ ನಾಗಲು ಸಾಧ್ಯ ಅನ್ನುವ ಯೋಚನೆ ಮುಂದಾದರು. ಟ್ರ್ಯಾಕ್ಟರ್‌ ವೊಂದರ ಚಾಲಕನಾಗಿದ್ದ ಪರಶಿವಮೂರ್ತಿಗೆ ಅಂತಿಮವಾಗಿ ನೆನಪಿಗೆ ಬಂದ್ದದ್ದು ರೇಷ್ಮೆ ಕೃಷಿ ಮಾಡುವುದು.

3 ವರ್ಷದ ಹಿಂದೆ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್‌ನಿಂದ ಏನನ್ನೂ ಸಂಪಾದಿಸುವುದು ಸಾಧ್ಯವಿಲ್ಲ ಅನ್ನುವುದನ್ನು ಮನಗಂಡು ಚಾಲಕ ವೃತ್ತಿಗೆ ಗುಡ್‌ ಬೈ ಹೇಳಿ, ರೇಷ್ಮೆ ಕೃಷಿಯತ್ತ ಒಲವು ತೋರಿ ಈಗ ರೇಷ್ಮೆ ಕೃಷಿಯಿಂದ ಪ್ರತಿ ತಿಂಗಳು ಕಡಿಮೆ ಎಂದರೆ ಕೃಷಿ ಖರ್ಚು ಹೊರತು ಪಡಿಸಿ ಪ್ರತಿ ತಿಂಗಳು 1 ಲಕ್ಷಕ್ಕೂ ಅಧಿಕ ಆದಾಯಗಳಿಸುವ ಮೂಲಕ ರೇಷ್ಮೆ ಬೆಳೆಗಾರ ಮಾದರಿ ರೈತ ಎನಿಸಿಕೊಂಡಿದ್ದಾರೆ.

ರೇಷ್ಮೆ ಸಾಕಾಣಿಕೆ ಸಾಧಕ ಮಾಡಿದ ರೈತ: ರೇಷ್ಮೆ ಸಾಕಾಣಿಕೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಧಿಕ ಇಳುವರಿ ಪಡೆಯಬಹುದೆಂದು ತೋರಿಸಿಕೊಟ್ಟ ರೈತ ಪರಶಿವಮೂರ್ತಿ. ಆರಂಭ ದಲ್ಲೇ ಉತ್ತಮ ರೇಷ್ಮೆ ಕೃಷಿ ಜೊತೆಗೆ ರೇಷ್ಮೆ ಸಾಕಾಣಿಕೆಯಲ್ಲಿ ಸಾಧನೆ ಮಾಡಿದ ಮೊಟ್ಟಮೊದಲ ರೈತ ಪರಶಿವಮೂರ್ತಿ ರೇಷ್ಮೆ ಬೆಳೆಯಲು ರೇಷ್ಮೆ ಇಲಾಖೆ ಅಧಿಕಾರಿಗಳು, ರೇಷ್ಮೆ ಬೆಳೆಗಾರ ರೈತರ ಸಂಪರ್ಕ ಸಲಹೆ ಸಹಕಾರ ಪಡೆದುಕೊಂಡು ಸರ್ಕಾರಿ ಸವಲತ್ತಿನ ಸದ್ಬಳಕೆಯೊಂದಿಗೆ ಉತ್ತಮ ಸಾಧನೆ ಮಾಡಿ ಸಾಧಕ ರೈತರು ಎನಿಸಿಕೊಳ್ಳಲಿ ಅನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಆಶಯ.

ಪರಶಿವಮೂರ್ತಿ ತಜ್ಞರಿಂದ ಸಲಹೆ ಪಡೆದುಕೊಂಡಾಗ ರೇಷ್ಮೆ ಬೆಳೆಗೆ ಅಪಾರ ಬೇಡಿಕೆ ಇದ್ದು, ಆದಾಯ ಕೂಡ ಗಳಿಸಬಹುದು ಅನ್ನುವ ಮಾಹಿತಿ ಪಡೆದುಕೊಂಡು ಸರಗೂರು ಸ್ವಾಮಿ ವಿವೇಕಾನಂದ ಸಂಸ್ಥೆಯಲ್ಲಿ 3 ದಿನಗಳ ರೇಷ್ಮೆ ಕೃಷಿ ತರಬೇತಿ ಪಡೆದುಕೊಂಡರು.

Advertisement

ಆರಂಭದಲ್ಲೇ ಉತ್ತಮ ಇಳುವರಿ: ಆರಂಭದಲ್ಲಿ 125 ರೇಷ್ಮೆ ಮೊಟ್ಟೆ ಸಾಕಾಣಿಕೆಯಿಂದ (1 ಮೊಟ್ಟೆಗೆ 400 ಹುಳುಗಳು) ಮೊದಲ ಬಾರಿಗೆ ಪ್ರತಿ ಕೆ.ಜಿ. ರೇಷ್ಮೆಗೆ 736 ರೂ. ನಂತೆ ಒಟ್ಟು 162 ಕೆ.ಜಿ. ಇಳುವರಿ ಲಭಿಸಿತು. ಕೃಷಿ ಚಟುವಟಿಕೆ ಕೆಲಸಗಾರರ ಕೂಲಿ ಸೇರಿ 25ರಿಂದ 30ಸಾವಿರ ಖರ್ಚು ತೆಗೆದರೂ 1 ಲಕ್ಷ ಆದಾಯ ಆರಂಭದಲ್ಲೇ ದೊರೆಯಿತು. ಇದರಿಂದ ಪ್ರಭಾವಿತನಾದ ಪರಶಿವಮೂರ್ತಿ 2ನೇ ಬಾರಿ 175 ರೇಷ್ಮೆ ಮೊಟ್ಟೆ ಸಾಕಾಣಿಕೆಗೆ ಮುಂದಾದರು. ಈ ಬಾರಿ 222 ಕೆ.ಜಿ. ಇಳುವರಿ ಲಭಿಸಿದ್ದು ಪ್ರತಿ ಕೆ.ಜಿ.ಗೆ 648ರೂ. ಬೆಲೆ ದೊರೆಯಿತಾದರೂ ಅದರಲ್ಲೂ 1 ಲಕ್ಷ ಆದಾಯ ದೊರೆಯಿತು. 3ನೇ ಬಾರಿಯೂ ಉತ್ತಮ ಇಳುವರಿ ಜೊತೆಗೆ ಒಳ್ಳೆಯ ಲಾಭ ದೊರೆತ ಹಿನ್ನೆಲೆಯಲ್ಲಿ ರೇಷ್ಮೆ ಬೇಸಾಯ ಮಾಡುವುದಾಗಿ ನಿರ್ಧರಿಸಿದರು.

10 ಮಂದಿ ಕೂಲಿಕಾರ್ಮಿಕರಿಗೆ ಆಶ್ರಯದಾತ: ಪರಶಿವಮೂರ್ತಿ ರೇಷ್ಮೆ ಸಾಕಾಣಿಕೆಯಿಂದ 1 ವರ್ಷದಲ್ಲಿ 10 ಮಂದಿ ಕೂಲಿಕಾರ್ಮಿಕರಿಗೆ ಆಶ್ರಯದಾತನಾಗಿದ್ದಾರೆ. ಸ್ವಂತ ಕಾರಿನಲ್ಲಿ ಈಗ ಜಮೀನಿಗೆ ಬಂದು ರೇಷ್ಮೆ ಸಾಕಾಣಿಕೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ನನ್ನಂತೆ ಇತರ ರೈತರೂ ರೇಷ್ಮೆ ಬೆಳೆ ಅವಲಂಭಿಸಿ ಆದಾಯಗಳಿಸಿ, ರೇಷ್ಮೆ ಸಾಕಾಣಿಕೆಗೆ ನನ್ನಿಂದ ಸಲಹೆ ಸಹಕಾರ ಬೇಕಾದರೆ ತಾಲೂಕಿನ ಯಾವುದೇ ರೈತರಿಗೂ ರೇಷ್ಮೆ ಕಸಾಕಾಣಿಕೆ ಕುರಿತು ನನಗೆ ತಿಳಿಸುತ್ತೇನೆ ಅನ್ನುತ್ತಾರೆ ರೇಷ್ಮೆ ರೈತ ಪರಶಿವಮೂರ್ತಿ.

ರೇಷ್ಮೆ ಆದಾಯದಾಯಕ ಬೆಳೆ, ಕೇವಲ 21 ದಿನದಲ್ಲಿ ರೇಷ್ಮೆ ಗೂಡು ಕಟ್ಟಿದ ಬಳಿಕ 7ದಿನದಲ್ಲಿ ಮಾರಾಟ ಮಾಡಬೇಕು. ಇಂತಹ ಲಾಭದಾಯಕ ಬೆಳೆ ಮತ್ತೂಂದಿಲ್ಲ ಅನ್ನುವುದು ನನ್ನ ಅನಿಸಿಕೆ. ಪ್ರತಿ ತಿಂಗಳು ಸರ್ಕಾರಿ ನೌಕರರು ಪಡೆದುಕೊಳ್ಳುವ ವೇತನದಂತೆ ರೇಷ್ಮೆ ಬೆಳೆ ಪ್ರತಿತಿಂಗಳು ಲಕ್ಷಲಕ್ಷ ಆದಾಯ ನೀಡುತ್ತಿದೆ. ಮಾಹಿತಿಗಾಗಿ 9845956194 ಕರೆ ಮಾಡಬಹುದು. -ಪರಶಿವಮೂರ್ತಿ, ರೇಷ್ಮೆ ಸಾಕಾಣಿಕೆ ಸಾಧಕ

ರೈತ ಪರಶಿವಮೂರ್ತಿ ಕಳೆದ ವರ್ಷ ಹೊಸದಾಗಿ ರೇಷ್ಮೆ ಕೃಷಿ ಆರಂಭಿಸಿದ ರೈತ. ಆರಂಭದಲ್ಲಿ ನನ್ನಿಂದ ಸಲಹೆ ಸಹಕಾರ ಅಷ್ಟೇ ಅಲ್ಲದೆ ಜಿಲ್ಲೆ ಮತ್ತು ತಾಲೂಕಾದ್ಯಂತ ಎಲ್ಲೇ ರೇಷ್ಮೆ ತರಬೇತಿ ಕರ್ಯಾಗಾರ ನಡೆದರೂ ಭಾಗಿಯಾಗಿ ಹೆಚ್ಚು ಪ್ರಚಲಿತರಾದರು. ಅವರು ನಿರ್ಮಿಸಿರುವ ರೇಷ್ಮೆ ಸಾಕಾಣಿಕೆ ಕೇಂದ್ರ ವೈಜ್ಞಾನಿಕವಾಗಿದೆ. -ಬಿ.ಜಿ.ಮಂಜುನಾಥ್‌, ಸಹಾಯಕ ಕೃಷಿ ನಿದೇರ್ಶಕರು ರೇಷ್ಮೆ ಇಲಾಖೆ

-ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next