Advertisement

ಚಳಿಗಾಲದಲ್ಲಿ ಮೌನ ಸುಖ

06:00 AM Nov 02, 2018 | |

ಚಳಿಗಾಲ ಬಂತೆಂದರೆ ಸಾಕು, ಬೆಳಗಾಗುವ ವೇಳೆಯಲ್ಲಿ ಮುದುಡಿ ಮಲಗುವ ತವಕ. ಹೊದಿಕೆ ಸರಿಸಲೂ ಮನಸ್ಸಿಲ್ಲದ ದಿನವೆಂದರೆ ಅದು ಆ ಮಂಜಿನ ದಿನವೇ ಸರಿ. ಎಲ್ಲರಿಗೂ ಮಳೆ ಮತ್ತು ಬೇಸಿಗೆಗಳಿಗಿಂತ ಚಳಿಗಾಲವೇ ಇಷ್ಟ. ಅದರಲ್ಲೂ ಯೌವನದ ಹರೆಯದಲ್ಲಂತೂ ಎಂಥ ಚಳಿಯನ್ನೂ ಸಹಿಸಿಕೊಳ್ಳುವ ಚೈತನ್ಯವಿರುತ್ತದೆ. ಇಳಿಯಹರೆಯದವರು ಮಾತ್ರ ಚಳಿಗಾಲವನ್ನು ಇಚ್ಛಿಸುವುದಿಲ್ಲ. ನನಗೆ ಚಳಿ ತುಂಬ ಇಷ್ಟ. ಚಳಿಯಲ್ಲಿ ನಡುಗುತ್ತ ನಡೆದಾಡುವುದರಲ್ಲಿಯೇ ಏನೋ ಸುಖವಿದೆ. 

Advertisement

ನಾನು ಆ ದಿನ ಮುಂಜಾನೆ 5 ಗಂಟೆಗೆ ಎದ್ದೆ. ಆಗ ಸೂರ್ಯನಿನ್ನೂ ತನ್ನ ಕೆಲಸ ಶುರು ಮಾಡಿರಲಿಲ್ಲ. ಅದ್ಯಾಕೋ ಗೊತ್ತಿಲ್ಲ, ಈ ಚಳಿಗಾಲವೆಂದರೆ ಆತನಿಗೂ ಬೆಚ್ಚನೆ ಮಲಗುವ ಆಸೆಯೋ ಏನೋ! ಚಳಿಗಾಲದಲ್ಲಿ ಸೂರ್ಯ ಮೂಡುವುದೇ ನಿಧಾನ ಎನ್ನುತ್ತಾರೆ. ಬಹುಶಃ ಚಳಿಯ ಸುಖವನ್ನು ಸೂರ್ಯನೂ ಅನುಭವಿಸುತ್ತಿರಬೇಕು!

ಆ ಮುಂಜಾನೆ ಇನ್ನೂ ಕತ್ತಲೂ ಇಳಿದಿರಲಿಲ್ಲ. ಮಸುಕು ಮಸುಕು ಬೆಳಕು. ನಾನೊಬ್ಬಳೇ ನಡೆದುಕೊಂಡು ಹೋಗುತ್ತಿದ್ದೆ. ಮುಂಜಾನೆಯ ವಾಕಿಂಗ್‌ ಅದು. ದೇಹ ಚಳಿಯಿಂದ ಗಡಗಡ ನಡುಗುತ್ತಿತ್ತು. ಮನಸ್ಸಿನಲ್ಲಿ ಮಾತ್ರ ನೆಮ್ಮದಿಯ ಭಾವ ಅರಳುತ್ತಿತ್ತು. ಚಳಿಯಲ್ಲಿ ಏಕಾಂಗಿಯಾಗಿರುವುದೇ ಒಂದು ಸುಖ. 

ಚಳಿಗಾಲದಲ್ಲಿ ಪ್ರಕೃತಿ ನಳನಳಿಸುತ್ತಿರುತ್ತದೆ. ಪ್ರಕೃತಿಯ ನಿಜವಾದ ಸೌಂದರ್ಯವನ್ನು ಸವಿಯಬೇಕಾದರೆ ಚಳಿಗಾಲದಲ್ಲಿ , ಮುಂಜಾವ ಅಥವಾ ಸಂಜೆಯ ಹೊತ್ತು ವಿಹಾರಕ್ಕೆ ತೆರಳಬೇಕು. ಪಟ್ಟಣವಾಗಿರಲಿ, ಹಳ್ಳಿಯಾಗಿರಲಿ ಚಳಿಗಾಲದ ಸೊಗಸೇ ಬೇರೆ. ನಮ್ಮ ಕವಿಗಳಂತೂ ಉದಯ ಮತ್ತು ಅಸ್ತವನ್ನು ಹಾಡಿಹೊಗಳಿದವರೇ. ಬೇಂದ್ರೆಯವರ ಪದ್ಯ ಎಲ್ಲರಿಗೂ ನೆನಪಿಗೆ ಬಂದೇ ಬರುತ್ತದೆ. ಕುವೆಂಪು ಹಾಡನ್ನು ಗುನುಗುನಿಸದವರಿಲ್ಲ.

ನಾನು ವಾಕಿಂಗ್‌ ಹೋಗುವಾಗಲೂ ನನಗೆ ಕವಿಗಳ ಸಾಲುಗಳು ನೆನಪಿಗೆ ಬಂದವು. ನೆನಪಿಗೆ ಬಂದು ಅನುಭವಕ್ಕೂ ನಿಲುಕಿದವು. ಆ ದಿನ ನಿಸರ್ಗ ಸೌಂದರ್ಯವನ್ನು ಸವಿಯುವ ಸರದಿ ನನ್ನದಾಗಿತ್ತು. ಆದರೆ, ಏಕೋ ಹಕ್ಕಿಗಳ ಕಲರವವಿಲ್ಲ. ಇಡೀ ವಾತಾವರಣವೇ ಮೌನ. ಚಳಿಗಾಲದಲ್ಲಿ ಸದ್ದು ಕೂಡ ಚೆಂದ, ಮೌನ ಕೂಡ ಅಂದ. ಹಕ್ಕಿಗಳು ಹಾಡಿದರೆ ಕೇಳಲು ಮಧುರ. ಹಾಡದಿದ್ದರೆ ಮೌನವನ್ನು ಅನುಭವಿಸುವುದು ಕೂಡ ಸುಖಕರ. ಆದರೆ, ಮೌನವನ್ನು ಬೇಧಿಸಲೋ ಎಂಬಂತೆ ಮಳೆಯ ಹನಿಗಳು ಎಲೆಗಳಿಂದ ತಟಪಟ ತಟಪಟ ಸದ್ದಿನೊಂದಿಗೆ ಮರದ ಎಲೆಗಳಿಂದ ಬೀಳುವ ಹನಿಗಳು ನನ್ನ ಒಂಟಿತನವನ್ನು ನೀಗಿಸುತ್ತಿದ್ದವು. ನಾನು ಒಬ್ಬಳೇ ಅಲ್ಲ, ನನ್ನ ಜೊತೆಗೆ ಎಷ್ಟೊಂದು ಮಂದಿ ಇದ್ದಾರೆ ! ಹನಿ ಇದೆ, ಮೌನ ಇದೆ, ಚಳಿ ಇದೆ.

Advertisement

ನನ್ನ ಚಳಿಯ ಯಾನವನ್ನು ಭಂಗಗೊಳಿಸಲೋ ಎಂಬಂತೆ ಸೂರ್ಯ ಮಾತ್ರ ನಿಧಾನವಾಗಿ ಆಗಸವೇರುತ್ತಿದ್ದ.
ಚಳಿ ದೂರವಾಗುತ್ತಿರುವುದೇ ನನ್ನ ಕಾಲುಗಳು ತುಸು ಆಯಾಸಗೊಂಡವು. ಆದರೆ, ಮನಸ್ಸು ಎಷ್ಟೊಂದು ಪ್ರಫ‌ುಲ್ಲಿತವಾಗಿತ್ತೆಂದರೆ ನನ್ನ ಕಾಲುಗಳ ಆಯಾಸ ಗೊತ್ತೇ ಆಗುತ್ತಿರಲಿಲ್ಲ. ಹಾಗಾಗಿ, ನಡೆದು ನಡೆದೂ ಬಹುದೂರ ಬಂದಿದ್ದೆ. ಅಷ್ಟು ಹೊತ್ತಿಗೆ ಹಕ್ಕಿಗಳು ಕಲರವ ಆರಂಭಿಸಿದ್ದವು. ಅವುಗಳು ಹಾರಲಾರಂಭಿಸಿದ್ದವು. ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಿದ್ದವು.

ಮತ್ತೂಂದೆಡೆ ನೋಡುತ್ತೇನೆ, ಹೂವುಗಳು ಮೆಲ್ಲನೆ ಅರಳುತ್ತಿದ್ದವು. ಅವುಗಳ ದಳಗಳ ಮೇಲೆ ಎಲೆಗಳಿಂದ ಬಿದ್ದ ಹನಿಗಳು ಕ್ಷಣಕಾಲ ಆಶ್ರಯ ಪಡೆಯುತ್ತಿದ್ದವು. ನಾನು ವಾಕಿಂಗ್‌ ಹೋಗದಿರುತ್ತಿದ್ದರೆ ಪ್ರಕೃತಿಯ ಈ ಸೌಂದರ್ಯವನ್ನು ನೋಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಅಥವಾ ನಾನು ನಡೆಯದಿದ್ದರೂ ಪ್ರಕೃತಿಯ ಸೌಂದರ್ಯ ಬದಲಾಗುತ್ತಿರಲಿಲ್ಲ. ಅಂದರೆ, ನಾನು ಆ ದಿನ ವಾಕಿಂಗ್‌ ಹೋದರೂ ಹೋಗದಿದ್ದರೂ ಹಕ್ಕಿಗಳು ಹಾಡದೇ ಬಿಡುತ್ತಿರಲಿಲ್ಲ, ಎಲೆಗಳು ಹನಿಯದೇ ಉಳಿಯುತ್ತಿರಲಿಲ್ಲ, ಹೂವುಗಳು ಅರಳದೇ ಬಿಡುತ್ತಿರಲಿಲ್ಲ. ಚಳಿಗಾಲ ಎಂಬುದೊಂದು ಮಾಯಾಲೋಕ ಇದ್ದಂತೆ. ಮನುಷ್ಯನಿಗಿಂತ ಪ್ರಕೃತಿಯೇ ದೊಡ್ಡದು ಎಂಬ ಸತ್ಯದರ್ಶನವಾಗಲು ಚಳಿಗಾಲದಷ್ಟು ಸೂಕ್ತ ಕಾಲ ಮತ್ತೂಂದಿಲ್ಲ.

ಲಿಖಿತಾ ಗುಡ್ಡೆಮನೆ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ, ವಿವೇಕಾನಂದ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next