Advertisement

ಸಿಟಿ ಮಾತು ಚಿತ್ರೀಕರಣ ಮುಗಿಸಿ ಬಂದವರ ಜೊತೆಗೊಂದು ಸಂಜೆ

03:45 AM Mar 10, 2017 | Team Udayavani |

ಶ್ರೀನಗರ ಕಿಟ್ಟಿ ಅಭಿನಯದ “ಸಿಲಿಕಾನ್‌ ಸಿಟಿ’ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದೇ ಹೋಗಿದೆ. ಕುಂಬಳಕಾಯಿ ಒಡೆದಿರುವ ಚಿತ್ರತಂಡದವರು, ಆಡಿಯೋ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರೆ. ಆಡಿಯೋ ಬಿಡುಗಡೆ 10ಕ್ಕಾದರೆ, ಚಿತ್ರ ಬಿಡುಗಡೆ ತಿಂಗಳ ಕೊನೆಗಂತೆ. ಈ ವಿಷಯಗಳನ್ನು ಹೇಳುವುದಕ್ಕೆ ಚಿತ್ರತಂಡದವರು ಅದೊಂದು ಸಂಜೆ ಸೇರಿದ್ದರು. ಜೊತೆಗೆ ಚಿತ್ರದ ತುಣುಕುಗಳನ್ನು, ಮೇಕಿಂಗ್‌ ವೀಡಿಯೋಗಳನ್ನೂ ತೋರಿಸಿದರು.

Advertisement

ಚಿತ್ರ ನಿರ್ದೇಶಿಸಬೇಕೆಂಬುದು ಮುರಳಿ ಅವರ ಹಲವು ವರ್ಷಗಳ ಕನಸ್ಸಾಗಿತ್ತಂತೆ. “1995ರಲ್ಲಿ ಕಂಡ ಕನಸು, ಇದೀಗ ನನಸಾಗಿದೆ. ಬೆಂಗಳೂರಿನಲ್ಲಿ ನಡೆಯಬಹುದಾದ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಬೆಂಗಳೂರು ಹೇಗೆ ಸಿಲಿಕಾನ್‌ ಸಿಟಿಯಾಗಿ ಬದಲಾಯಿತು ಎಂಬ ವಿಷಯಗಳೂ ಇವೆ. ಆರಂಭದಲ್ಲಿ ಬೆಂಗಳೂರು ಕೂಲ್‌ ಆಗಿತ್ತು. ಈಗ ಎಲ್ಲಿ ನೋಡಿದರೂ ಟ್ರಾಫಿಕ್‌, ರಶ್‌ ಆಗಿದೆ. ಇಂಥದ್ದೊಂದು ನಗರದಲ್ಲಿ ನಡೆಯುವ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಈಗಾಗಲೇ ಚಿತ್ರದ ಎಡಿಟಿಂಗ್‌ ಮುಗಿದಿದೆ. ಚಿತ್ರ ನೋಡಿ ವಿಶ್ವಾಸ ಬಂದಿದೆ. ಈ ತಿಂಗಳ ಕೊನೆಗೆ ಬಿಡುಗಡೆ ಮಾಡುವ ಯೋಚನೆ ಇದೆ. ಶ್ರೀನಗರ ಕಿಟ್ಟಿ ಇಲ್ಲದೆಯೇ ಈ ಸಿನಿಮಾ ಆಗುತ್ತಿರಲಿಲ್ಲ. ನಮ್ಮ ಇಡೀ ತಂಡಕ್ಕೆ ಅವರೊಬ್ಬ ಗಾಡ್‌ಫಾದರ್‌ ಇದ್ದಂತೆ’ ಎಂದರು. ಪಕ್ಕದಲ್ಲಿದ್ದ ಕಿಟ್ಟಿ, ಗುರಾಯಿಸಿದರು.

ತಮ್ಮ ಸರದಿ ಬಂದಾಗ ಕಿಟ್ಟಿ ಉತ್ತರ ಕೊಟ್ಟರು. “ನಾನು ಗಾಡೂ ಅಲ್ಲ, ಫಾದರೂ ಅಲ್ಲ. ನಮಗೆ ನಾವೇ ಗಾಡ್‌, ನಮಗೆ ನಾವೇ ಫಾದರ್‌. ಈ ತಂಡವೇ ಚೆನ್ನಾಗಿತ್ತು. ಅದರ ಜೊತೆಗೆ ಸೇರಿಕೊಂಡು ಇಷ್ಟು ದೂರ ಬಂದಿದ್ದಕ್ಕೆ ಖುಷಿಯಾಗಿದೆ. ಇವತ್ತು ನಡೆಯುವ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೀವಿ. ಮಾನವೀಯ ಮೌಲ್ಯಗಳು ಹೇಗೆ ಕಡಿಮೆ ಆಗ್ತಿದೆ, ಯುವಶಕ್ತಿ ಏನಾಗುತ್ತಿದೆ ಅಂತ ಈ ಚಿತ್ರ ಹೇಳುತ್ತಿದೆ. ಚಿತ್ರದ ಇಡೀ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ’ ಎಂದರು.

ಇನ್ನು ಈ ಚಿತ್ರದಲ್ಲಿ ಅವರ ಸಹೋದರನ ಪಾತ್ರಕ್ಕೆ ಕಿಟ್ಟಿ, ಸೂರಜ್‌ ಗೌಡರ ಹೆಸರನ್ನು ಸೂಚಿಸಿದ್ದರಂತೆ. ಕಿಟ್ಟಿಗೆ ಥ್ಯಾಂಕ್ಸ್‌ ಹೇಳುತ್ತಲೇ ಮಾತು ಪ್ರಾರಂಭಿಸಿದರು ಸೂರಜ್‌. “ನನ್ನ ಪಾತ್ರಕ್ಕೆ ಎರಡು ತರಹದ ಶೇಡ್‌ಗಳಿವೆ. ಬಹಳ ಚಾಲೆಂಜಿಂಗ್‌ ಪಾತ್ರ. ನನಗಂತೂ ಸಂಪೂರ್ಣ ಸಂತೋಷವಿದೆ’ ಎಂದರು. ಕಾವ್ಯಾ ಶೆಟ್ಟಿ ಈ ಚಿತ್ರದಲ್ಲಿ ಮಿಡ್ಲ್ ಕ್ಲಾಸ್‌ ಹುಡುಗಿಯ ಪಾತ್ರವನ್ನು ಮಾಡಿದ್ದಾರಂತೆ. “ಗ್ಲಾಮರ್‌ ಇಲ್ಲದ ಪಾತ್ರ ನನ್ನದು. ಬಹಳ ಚೆನ್ನಾಗಿತ್ತು’ ಎಂದು ಕಾವ್ಯ ಹೇಳಿಕೊಂಡರು. ಬಹಳ ದಿನಗಳ ನಂತರ ನಟಿಸಿರುವ ಕಡ್ಡಿ ವಿಶ್ವ, ಯಾವುದೇ ಒತ್ತಡವಿಲ್ಲದೆ ಚಿತ್ರದಲ್ಲಿ ನಟಿಸಿದ್ದಾಗಿ ಹೇಳಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next