Advertisement

ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೇ ಯೋಗ ಜಾಗೃತಿ

11:49 AM Jun 21, 2022 | Team Udayavani |

ಹುಬ್ಬಳ್ಳಿ: ವಿಶ್ವವ್ಯಾಪಿ ಪಸರಿಸುತ್ತಿರುವ ಯೋಗ ತರಬೇತಿ ನಗರ ಪ್ರದೇಶಗಳಿಗೆ ಸೀಮಿತವಾಗುತ್ತಿದ್ದು, ಗ್ರಾಮೀಣದಲ್ಲಿ ಅಷ್ಟೊಂದಾಗಿ ಪ್ರಾಮುಖ್ಯತೆ ಪಡೆದಿಲ್ಲ. ಮುಂದಿನ ಕಾಲಘಟ್ಟದಲ್ಲಾದರೂ ಹಳ್ಳಿ ಮಕ್ಕಳು ಯೋಗಾಭ್ಯಾಸ ಮಾಡಬೇಕು ಎನ್ನುವ ಮಹತ್ವಾಕಾಂಕ್ಷೆಯೊಂದಿಗೆ ಕುಸುಗಲ್ಲ ಗ್ರಾಮದ ಡಾ| ಶ್ರೀಧರ ಹೊಸಮನಿ ಅವರು ಯೋಗ ಪಟುವಾಗಿ, ಯೋಗ ಶಿಕ್ಷಕರಾಗಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಯೋಗ ತರಬೇತಿ ನೀಡುವ ಕಾಯಕದಲ್ಲಿ ತೊಡಗಿದ್ದಾರೆ.

Advertisement

ಕಳೆದ 10 ವರ್ಷಗಳಿಂದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬೇಸಿಕ್‌ ಯೋಗ ತರಬೇತಿ ನೀಡುತ್ತಿದ್ದಾರೆ. ಯೋಗ ಶಕ್ತಿ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡಿದ್ದು, 12,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರಿಂದ ಯೋಗ ತರಬೇತಿ ಪಡೆದಿದ್ದಾರೆ. ಇನ್ನೂ ಆಸಕ್ತ ಗ್ರಾಮಗಳಲ್ಲಿ 8-15 ದಿನಗಳ ಯೋಗ ಶಿಬಿರ ಆಯೋಜಿಸುತ್ತಿದ್ದಾರೆ. ಇದಕ್ಕೆ ತಗಲುವ ಖರ್ಚನ್ನು ಶ್ರೀಧರ ತಮ್ಮ ದುಡಿಮೆಯ ಒಂದಿಷ್ಟು ಭಾಗವನ್ನು ವಿನಿಯೋಗಿಸುತ್ತ ಬಂದಿದ್ದಾರೆ. ಇಲ್ಲಿಯವರೆಗೆ 100ಕ್ಕೂ ಹೆಚ್ಚು ಉಚಿತ ತರಬೇತಿ ಶಿಬಿರ ಆಯೋಜಿಸಿದ್ದಾರೆ.

ಬಾಲ್ಯದಲ್ಲಿಯೇ ಯೋಗ ಬಗ್ಗೆ ಆಸಕ್ತಿ ಹೊಂದಿದ್ದ ಶ್ರೀಧರ ಕವಿವಿಯ ಯೋಗ ಅಧ್ಯಯನ ವಿಭಾಗದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್‌ಅನ್ನು ಪ್ರಥಮ ಸ್ಥಾನದಲ್ಲಿ ಪೂರ್ಣಗೊಳಿಸಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಯೋಗದ ಜೊತೆಗೆ ಸೈಕಲ್‌ ಸವಾರಿ ಅಚ್ಚುಮೆಚ್ಚು. ಬಹುತೇಕ ಕಾರ್ಯಗಳಿಗೆ ಸೈಕಲ್‌ ಬಳಸಿದರೆ, ಅನಿವಾರ್ಯ-ತುರ್ತು ಸಂದರ್ಭದಲ್ಲಿ ಮಾತ್ರ ಬೈಕ್‌ ಬಳಸುತ್ತಾರೆ. ಅಂತಾರಾಷ್ಟ್ರೀಯ ಯೋಗ ದಿನದಂದೇ ಬಾಳಸಂಗಾತಿಯನ್ನು ವರಿಸಿದ್ದು, ಮದುವೆ ಮಂಟಪದಲ್ಲೇ ಆಶೀರ್ವದಿಸಲು ಬಂದವರಿಗೆ ಕೆಲ ಆಸನಗಳನ್ನು ಮಾಡಿಸಿ ಯೋಗದ ಮಹತ್ವ ಸಾರಿದ್ದರು.

ಕಾಯಕ ಯೋಗಿ: ಪಾಲಿಕೆಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ ಕಾಯಕಯೋಗಿ. ಬೆಳಗ್ಗೆ 6 ಗಂಟೆಯಿಂದ ಆರಂಭವಾಗುವ ಇವರ ದಿನಚರಿ ಬೆಳಗ್ಗೆ ಗ್ರಾಮದಲ್ಲಿ ಯೋಗ ತರಬೇತಿ, 10 ಗಂಟೆಯಿಂದ ಪಾಲಿಕೆಯಲ್ಲಿ ಕರ್ತವ್ಯ, ಸಂಜೆ ನಂತರ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ, ವಾರದಲ್ಲಿ ನಾಲ್ಕು ದಿನ ಪಾಲಿಕೆಯ ಆಯಾ ಆಸ್ಪತ್ರೆಗಳ ಪ್ರದೇಶ ವ್ಯಾಪ್ತಿಯಲ್ಲಿ ಯೋಗ ತರಬೇತಿ, ಇದರ ನಡುವೆ ಆಯುಷ್‌ ಇಲಾಖೆ, ಬಾಲಕ ಬಾಲಮಂದಿರದಲ್ಲಿ ಯೋಗ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಾರೆ. ಯೋಗ ಸಾಧನೆಗೆ ತಮಿಳುನಾಡು ಯುನಿವರ್ಸಲ್‌ ವಿವಿ ಡಾಕ್ಟರೇಟ್‌ ನೀಡಿ ಗೌರವಿಸಿದೆ. ಇವರ ನಿಸ್ವಾರ್ಥ ಸೇವೆ ಮೆಚ್ಚಿ ಹಲವು ಸಂಘ-ಸಂಸ್ಥೆಗಳು ಸನ್ಮಾನಿಸಿ ಸತ್ಕರಿಸಿವೆ.

ಗ್ರಾಮೀಣ ಭಾಗದಲ್ಲಿ ಯೋಗ ಜಾಗೃತಿ ಮೂಡಿಸಿ ಆರೋಗ್ಯ ಸುಧಾರಿಸುವ ಕಾರ್ಯ ಮಾಡಬೇಕು ಎನ್ನುವ ಆಸೆ ಹೊಂದಿದ್ದೇನೆ. ಇದಕ್ಕಾಗಿ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಉಚಿತವಾಗಿ ಯೋಗ ತರಬೇತಿ ನೀಡುತ್ತಿದ್ದೇನೆ. ಇದರೊಂದಿಗೆ ಗ್ರಾಮೀಣ ಪ್ರದೇಶದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೂಡ ಆಸಕ್ತಿಯಿಂದ ಯೋಗ ಕಲಿಯುತ್ತಿದ್ದಾರೆ. –ಡಾ| ಶ್ರೀಧರ ಹೊಸಮನಿ, ಯೋಗ ಶಿಕ್ಷಕ

Advertisement

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next