ಇವತ್ತಿಗೆ ಸುಮಾರು ಎರಡು ವರ್ಷವಾಯಿತು, ನಾವಿಬ್ಬರು ಸರಿಯಾಗಿ ಮಾತನಾಡಿ, ಪರಸ್ಪರ ಭೇಟಿಯಾಗಿ. ಯಾಕೆ ಹೀಗಾಯ್ತು? ಐದನೇ ಕ್ಲಾಸ್‌ನಿಂದ ಸೆಕೆಂಡ್ ಪಿಯುವರೆಗೂ ಒಟ್ಟಿಗಿದ್ದ ನಾವು ಅದು ಯಾವ ಕಾರಣದಿಂದ ದೂರಾದೆವು? ನಿಜವಾಗಿಯೂ ನನಗೆ ಗೊತ್ತಿಲ್ಲ.
ನೀನು ಇಂಜಿನಿಯರಿಂಗ್‌ಗೆಂದು ಬೆಂಗಳೂರು ಸೇರಿದ ಮೇಲಂತೂ ನಮ್ಮಿಬ್ಬರ ಮಧ್ಯೆ ಕೇವಲ ನಾಲ್ಕೈದು ಮೆಸೇಜುಗಳು ರವಾನೆಯಾಗಿರಬಹುದು ಅಷ್ಟೇ. ಒಂದೊಮ್ಮೆ ನಾನು ಮೆಸೇಜು ಮಾಡಿದರೂ ನಿನ್ನಿಂದ ಸೂಕ್ತ ಪ್ರತಿಕ್ರಿಯೆ ಇಲ್ಲ. ನಿನ್ನೊಡನೆ ಮಾತನಾಡಬೇಕೆನಿಸಿ ಕರೆ ಮಾಡಿದರೂ ಅದಕ್ಕೂ ಉತ್ತರವಿಲ್ಲ. ನೀವು ಕರೆ ಮಾಡಿರುವ ಚಂದಾದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಉಲಿಯುವ ಧ್ವನಿಯನ್ನು ಕೇಳಿ ಕೇಳಿ ನಂಗಂತೂ ಸಾಕಾಗಿ ಹೋಗಿದೆ.
ಹೇಳು ಗೆಳತಿ, ಯಾಕೆ ಹೀಗೆ ಮಾಡುತ್ತಿರುವೆ? ನನ್ನಿಂದ ನಿನಗೆ ಏನಾದರೂ ಬೇಸರವಾಗಿದೆಯಾ? ಮತ್ತೆ, ನೀನು ಹೀಗೆ ಕಾರಣವಿಲ್ಲದೆ ಮೌನ ತಾಳಿದರೆ ನಾನು ಏನು ಅಂಥ ಅರ್ಥ ಮಾಡಿಕೊಳ್ಳಲಿ ಹೇಳು. ನಾನು ಉಜಿರೆಗೆ ಬಂದಮೇಲೆ ನಿನ್ನ ನೆನಪು ಬಹಳವಾಗಿ ಕಾಡಿದೆ. ಮೊದಲಿಗಂತೂ ನಾನು ಭೇಟಿಯಾದ ಪ್ರತಿಯೊಬ್ಬರಲ್ಲೂ ನಿನ್ನನ್ನೇ ಹುಡುಕುತಿದ್ದೆ. ಆದರೆ, ಯಾರೂ ನಿನ್ನ ಹಾಗಿಲ್ಲ. ನಿನ್ನ ತರಹ ಯಾರು ಇರಲಿಕ್ಕೂ ಸಾಧ್ಯವಿಲ್ಲ ಬಿಡು. ಹಾಗೆ ಹುಡುಕಿ ನಾನೇ ತಪ್ಪು ಮಾಡಿದೆ. ನಿನ್ನ ಜೊತೆ ಕಳೆದ ಕ್ಷಣಗಳನ್ನು ನಾನು ಮರೆಯಲು ಸಾಧ್ಯವೆ? ನಾನು ಮತ್ತು ನೀನು ಟೀಚರ್ ಪಾಠ ಮಾಡ್ತಾ ಇರಬೇಕಾದರೆ ಮಾತನಾಡುತ್ತ ಬೈಸಿಕೊಂಡಿದ್ದು ಅದೆಷ್ಟೋ ಸಲ!
ಹಾಗೆಯೇ ಐಟಿ ಕ್ವಿಜ್‌ಗೆಂದು ನಿನ್ನೊಂದಿಗೆ ಕಾರವಾರಕ್ಕೆ ಹೋಗಿದ್ದು ಒಂದು ಅವಿಸ್ಮರಣೀಯ ಅನುಭವ! ನೀನು ನಮ್ಮನೆಯಲ್ಲಿ ಊಟ ಮಾಡಿದ್ದು, ನಾನು ನಿಮ್ಮನೆಗೆ ಬಂದು ನಿಮ್ಮೆಲ್ಲರ ತುಂಬು ಹೃದಯದ ಆತಿಥ್ಯ ಎಲ್ಲವೂ ನಿನ್ನೆ ಮೊನ್ನೆ ನಡೆದಂತೆಯೇ ಭಾಸವಾಗುತ್ತಿದೆ. ನಿನ್ನ ನೆನಪೇ ನನಗೆ ಆಧಾರ ಎಂದು ಹೇಳುವುದೆಲ್ಲವೂ ಫಿಲಿ¾ ಡೈಲಾಗ್‌ಗಳಂತೆ ಕಂಡರೂ, ಪದೇ ಪದೇ ನಿನ್ನ ನೆನಪುಗಳು ನನಗೆ ಕಾಡುವುದಂತೂ ಸುಳ್ಳಲ್ಲ. ಆ ದೇವರಲ್ಲಿ ನನ್ನದೊಂದೇ ಪ್ರಾರ್ಥನೆ, ಅಲ್ಲಾ ವಾರಿಯಾ… ಮೆ ತೊ ಹಾರಿಯಾ… ಟೂಟಿ ಯಾರಿಯಾ… ಮಿಲಾದೇ ಒಯ……
– ಎನ್. ಆರ್. ಪೂರ್ವಿ
ಎಸ್‌ಡಿಎಂ ಕಾಲೇಜು, ಉಜಿರೆ