ಹತ್ತಾರು ವರ್ಷಗಳ ನಂತರ ಮುಖಾಮುಖಿಯಾದೆವು. ಇಬ್ಬರೂ ಒಂದೊಂದು ರೌಂಡ್ ಮೈ ತುಂಬಿಕೊಂಡಿದ್ದೆವು. ಕಣ್ಣುಗಳು ಕಲೆತಿದ್ದೇ ತಡ, ನಗು ಚಿಮ್ಮಿತು. ಯಾವ ಭಯ, ಬಿಂಕಗಳಿಲ್ಲದೆ ಮಾತುಗಳು ಚೆಲ್ಲಿದವು. ವರ್ಷಗಳಿಂದ ಹಿಡಿದಿಟ್ಟಿದ್ದ ಮಾತು ಕುಂಭದ್ರೋಣ ಮಳೆಯಾಯಿತು.
ಬಿಳಿ ಟೇಪುಗಳನ್ನು ಸೇರಿಸಿ ನೆಯ್ದು ಮೇಲೆ ಕಟ್ಟಲ್ಪಟ್ಟ ಎರಡು ಜಡೆಗಳು ಹೆಗಲ ಮುಂಭಾಗದಲ್ಲಿ ನಗುತ್ತಿದ್ದವು. ಕಪ್ಪನೆಯ ಬೂಟಿನೊಳಗೆ ಬಂಧಿಯಾಗಿದ್ದ ಮೊಲದ ಕಾಲಿನಂಥ ಪುಟ್ಟ ಹೆಜ್ಜೆಗಳು ನವಿಲನ್ನು ಅನುಕರಿಸಿದ್ದವು. ಮೂರ್‍ನಾಲ್ಕು ನೋಟ್ ಬುಕ್ಕುಗಳನ್ನು ಎದೆಗವುಚಿ ನೀನು ನಡೆದು ಬರುವಾಗಲೆಲ್ಲ, ಕಣ್ಣುಗಳಲ್ಲಿ ಸಂಭ್ರಮ ತುಂಬಿಕೊಂಡು ಒಮ್ಮೊಮ್ಮೆ ಹತ್ತಿರದಿಂದ, ಕೆಲವೊಮ್ಮೆ ದೂರದಿಂದ ನೋಡುತ್ತಿದ್ದೆ! “ಯಾಕೆ, ನನ್ನ ಹೀಗೆ ನೋಡ್ತಿದ್ದೀಯಾ?’ ಅಂತ ನೀನೇನಾದ್ರೂ ಕೇಳಿದ್ದರೆ ಹೆದರಿ ಬ್ಬೆ,ಬ್ಬೆ, ಬ್ಬೆ.. ಅಂದು ಬಿಡುತ್ತಿದ್ದೆನೇನೋ! ಉಡಾಳ ವಯಸ್ಸು. ಹತ್ತನೇ ತರಗತಿಯ ಕೊನೆಯ ದಿನಗಳು. ನನ್ನ ಕಣ್ಣುಗಳಲ್ಲಿ ಬರೀ ನಿನ್ನ ಕನಸುಗಳಿದ್ದವು. ಅದು ಕ್ರಷಾ? ಗೊತ್ತಿಲ್ಲ! ಆದರೆ ಆ ದಿನಗಳಲ್ಲಂತೂ ನನಗೆ ನಿತ್ಯ ಹಬ್ಬ.
ಒಂದರಿಂದ ಹತ್ತನೆ ಕ್ಲಾಸ್‌ವರೆಗೆ ಒಟ್ಟಿಗೆ ಓದಿದರೂ ನಾವು ಒಮ್ಮೆಯೂ ಮಾತಾಡಿಕೊಳ್ಳಲಿಲ್ಲ. ನೋಡಿಯೇ ಕಣ್ಣು ತುಂಬಿಕೊಳ್ಳುತ್ತಿದ್ದ ನನಗೆ ಮಾತಾಡುವ ಧೈರ್ಯವೂ ಇರಲಿಲ್ಲ. ನಿನಗೆ ನನ್ನನ್ನು ಕಂಡರೆ ಬುಸ್ ಬುಸ್ ಕೋಪವಿತ್ತು. ಸಣ್ಣ ಗಲಾಟೆ ನೆಪಕ್ಕೆ ಹೆಸರು ಬರೆದು, ಮೇಷ್ಟ್ರು ಹತ್ರ ಹೊಡೆಸುತ್ತಾನೆ ಅನ್ನುವುದೇ ನಿನ್ನ ತಕರಾರು. ಹತ್ತು ವರ್ಷಗಳ ಕಾಲ ಅದೇ ಕೋಪವನ್ನು ಕಾಪಾಡಿಕೊಂಡು ಬಂದೆ. ನಮ್ಮ ಯಾತ್ರೆ ಪಿಯುಸಿಯಲ್ಲೂ ಮುಂದುವರಿಯಿತು. ಆಸೆಗೆ ಚೈತ್ರ ಬಂದು ಪ್ರೀತಿಯ ಮರ ಹಸಿರು ತುಂಬಿಕೊಂಡಿತ್ತು. ಇಷ್ಟು ದಿನವೂ ಒಂದೇ ಒಂದು ಮಾತನಾಡದ ನಿನ್ನ ಮುಂದೆ ನಿಂತು “ನೀವಂದ್ರೆ ನನಗಿಷ್ಟ ರೀ’ ಅಂತ ಹೇಗೆ ನುಲಿದು ಕೂರಲಿ? ಯಾವ ಬುದ್ಧಿ ಬಂದು ತಲೆಯೊಳಗೆ ಕೂತುಬಿಟ್ಟಿತ್ತೂ ಗೊತ್ತಿಲ್ಲ. ಪ್ರೀತಿಯನ್ನು ನಿನ್ನ ಮುಂದೆ ನೈವೇದ್ಯಕಿಟ್ಟಾಗ ನೀನು ನನ್ನನ್ನು ತುಂಬಾ ಚೀಪಾಗಿ ಕಂಡುಬಿಟ್ಟರೆ? ಇಷ್ಟು ವರ್ಷಗಳಿಂದ ಮನಸ್ಸಿನಲ್ಲಿ ಏನೆಲ್ಲಾ ಭಾವನೆಗಳನ್ನು ಮಳ್ಳನಂತೆ ಇಟ್ಟುಕೊಂಡಿ¨ªಾನೆ ಅಂತ ನನ್ನನ್ನು ಅವಮಾನಿಸಿಬಿಟ್ಟರೆ ಅನಿಸಿದ್ದೇ, ಆ ಯೋಚನೆಯನ್ನು ಒತ್ತಟ್ಟಿಗೆ ತಳ್ಳಿಬಿಟ್ಟೆ. ಹಸಿರಾದ ಪ್ರೀತಿ ಹೂವಾಗಿ, ಕಾಯಾಗಿ, ಹಣ್ಣಾಗಿ, ನನ್ನಲ್ಲೇ ಉಳಿದು ಹೋಯಿತು.
ಭೂಮಿ ಗುಂಡಗಿದೆ ಅಂತ ಇದಕ್ಕೇ ಹೇಳಿರಬೇಕು. ಪಿಯುಸಿ ಮುಗಿಸಿ ಹಾರಿ ಹೋದವರು ಹತ್ತಾರು ವರ್ಷಗಳ ನಂತರ ಮುಖಾಮುಖೀಯಾದೆವು. ಇಬ್ಬರೂ ಒಂದೊಂದು ರೌಂಡ್ ಮೈ ತುಂಬಿಕೊಂಡಿದ್ದೆವು. ಕಣ್ಣುಗಳು ಕಲೆತಿದ್ದೇ ತಡ, ನಗು ಚಿಮ್ಮಿತು. ಯಾವ ಭಯ, ಬಿಂಕಗಳಿಲ್ಲದೆ ಮಾತುಗಳು ಚೆಲ್ಲಿದವು. ವರ್ಷಗಳಿಂದ ಹಿಡಿದಿಟ್ಟಿದ್ದ ಮಾತು ಕುಂಭದ್ರೋಣ ಮಳೆಯಾಯಿತು.
“ಹನ್ನೆರಡು ವರ್ಷಗಳಿಂದ ಒಟ್ಟಿಗೇ ಓದಿದೆವು. ನನ್ನ ಪ್ರತಿ ಕೋಪದ ಹಿಂದೆ ಅದೆಷ್ಟು ಪ್ರೀತಿ ಇತ್ತು ಗೊತ್ತಾ? ಆದರೆ, ನನಗೆ ಓದು ಮುಖ್ಯವಾಗಿತ್ತು. ಮನಸ್ಸು ನಿನ್ನೆಡೆಗೆ ಎಳೆದಾಗ ಅಪ್ಪ ನೆನಪಾಗಿ ಬಿಡುತ್ತಿದ್ದ. ಅಷ್ಟು ವರ್ಷಗಳ ಕಾಲ ಮನಸು ಹಿಡಿದಿಡಲು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಇವನ್ಯಾಕೆ ಟಿ.ಸಿ ತಗೊಂಡು ಬೇರೆ ಸ್ಕೂಲಿಗೆ ಹೋಗಬಾರದು ಅನಿಸಿದ್ದಿದೆ. ಓದು ಮುಗಿಸಿ ದೂರವಾದ ಮೇಲೆ ನಿನ್ನ ಹುಡುಕಬೇಕೆನಿಸಿತು. ನೀನು ಕಳೆದು ಹೋಗಿರಲಿಲ್ಲ, ಹೊರಟು ಹೋಗಿದ್ದೆ. ಬದುಕು ನನ್ನನ್ನು ಒಂಟಿಯಾಗಿ ಬಿಡದೆ ಬಂಧಿಸಿ, ಮದುವೆ ಮಾಡಿ ಹಾಕಿತು. ಸಂಸಾರದಲ್ಲಿ ಎಲ್ಲವೂ ಮರೆತಂತಾಗಿತ್ತು. ಕನಿಷ್ಠ ಒಮ್ಮೆ ನೋಡಲಾದರೂ ಸಿಕ್ಕೆಯಲ್ಲಾ ಥ್ಯಾಂಕ್ಸ್ ಕಣೋ…’ ಅಂತ ಅವತ್ತು ನೀನಾಡಿದ ಮಾತುಗಳು ಕಣ್ಣಲ್ಲಿ ನೀರು ಜಿನುಗಿಸಿದ್ದವು. ನಾಳೆಗೆ ಬಣ್ಣದ ಗರಿಗಳನ್ನು ನೋಡುವ ಆಸೆಯಿಂದ ಸಾಕಿಕೊಂಡಿದ್ದ ಪುಟ್ಟ ನವಿಲು ಮರಿಯಂಥ ಪ್ರೀತಿ, ಇಂದು ಮೊದಲ ಬಾರಿ ಅನಾಥವಾಯಿತು. ಯಾರೋ ಮಾತನ್ನು ಕಿತ್ತುಕೊಂಡಂತಾಗಿ ಬರೀ ಮೌನ, ಮೌನ; ನಿನ್ನ ಪ್ರೀತಿಯಂತೆ!
ಸದಾ…