Advertisement
ಇದು ಜಯನಗರದ ಮಾರೇನಹಳ್ಳಿ ಸಿಗ್ನಲ್ ಸಮೀಪದ ಆದರ್ಶ ಪ್ಯಾಲೇಸ್ ಪಕ್ಕದಲ್ಲಿರುವ ಹಿರಿಯ ನಟ ಅಂಬರೀಶ್ ಅವರ ನಿವಾಸದ ಬಳಿ ಮಂಗಳವಾರ ಕಂಡು ಬಂದ ದೃಶ್ಯ. ಹಿಂದೆಲ್ಲಾ ಮನೆಯ ಬಳಿ ಸಡಗರದ ವಾತಾವರಣವಿರುತ್ತಿತ್ತು. ಸಾಕು ನಾಯಿಗಳ ಗಾಂಭೀರ್ಯ ಓಡಾಟವು ಗಮನ ಸೆಳೆಯುತ್ತಿತ್ತು. ಆದರೆ, ಮಂಗಳವಾರ ಮುಂಜಾನೆ ಆ ಯಾವ ರೀತಿಯ ಸಹಜ ವಾತಾವರಣ ಕಾಣಲಿಲ್ಲ. ಮನೆಯ ಒಳಾಂಗಣ ಮಾತ್ರವಲ್ಲದೆ ಹೊರ ಆವರಣವೂ ಬೀಕೋ ಎನ್ನುತ್ತಿತ್ತು.
Related Articles
Advertisement
ಬೆಳಗುತ್ತಿರುವ ಅಮರಜ್ಯೋತಿ: ಜೆಪಿ ನಗರದಲ್ಲಿರುವ ಅಂಬರೀಶ್ ಅವರ ಹೊಸ ನಿವಾಸದಲ್ಲಿ ಇರಿಸಲಾಗಿದ್ದ ಕಲಿಯುಗದ ಕರ್ಣನ ಭಾವ ಚಿತ್ರದ ಮುಂದೆ ಜ್ಯೋತಿ ಬೆಳಗುತ್ತಿತ್ತು. ಸೋಮವಾರ ರಾತ್ರಿ ಜೆ.ಪಿ. ನಗರದ ನಿರ್ಮಾಣ ಹಂತದ ಹೊಸ ನಿವಾಸಕ್ಕೆ ಆಗಮಿಸಿದ್ದ ಅಂಬರೀಶ್ ಅವರ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಹಾಗೂ ಕುಟುಂಬದವರು ಅಂಬರೀಶ್ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ದೀಪ ಹಚ್ಚಿ ತೆರಳಿದ್ದರು. ಆ ದೀಪ ಮಂಗಳವಾರ ಬೆಳಗ್ಗೆಯೂ ಉರಿಯುತ್ತಿತ್ತು. ಹೀಗಾಗಿ, ಕೆಲ ಅಭಿಮಾನಿಗಳು ಈ ಭಾವಚಿತ್ರಕ್ಕೆ ಕೈ ಮುಗಿದು ಹೊರಬಂದರು.
ಅಣ್ಣನನ್ನು ನೋಡಲಾಗಲಿಲ್ಲ: ಅಂಬರೀಶ್ ಅಣ್ಣಾ ಎಂದರೆ ಪ್ರೀತಿ. ಅವರ ಬೈಗುಳವೆಂದರೆ ಖುಷಿ. ಮಂಡ್ಯದ ಮಣ್ಣಿನಲ್ಲಿ ಅಂತಹ ಗಂಡುಗಲಿ ಮತ್ತೆ ಹುಟ್ಟುವುದಿಲ್ಲ. ಒರಟಾಗಿ ಬೈದರೂ ಮಗುವಿನಂತ ಮನಸ್ಸು ಅವರದು. ಕೇಳಿದವರಿಗೆ ಸಹಾಯ ಮಾಡುತ್ತಿದ್ದರು. ಅವರು, ಇಲ್ಲದೆ ಅನಾಥ ಭಾವನೆ ಕಾಡುತ್ತಿದೆ. ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಅಂತ್ಯಕ್ರಿಯೆಗೆ ಹೋಗಲು ಆಗಲಿಲ್ಲ. ರಾತ್ರಿಯಿಡೀ ನಿದ್ರೆ ಬರಲಿಲ್ಲ.
ಹೀಗಾಗಿ ಅಣ್ಣ ವಾಸವಿದ್ದ ಮನೆಯನ್ನಾದರೂ ಕಣ್ತುಂಬಿಕೊಳ್ಳೋಣ ಎಂದು ಬಂದಿದ್ದೇನೆ ಎಂದು ಮಳವಳ್ಳಿಯಅಭಿಮಾನಿ ಸೋಮಣ್ಣ ಕಲ್ಲಾಪುರ ಕಣ್ಣೀರಿಟ್ಟರು. ಅಣ್ಣ ವಾಸಲಿದ್ದು ಮನೆ ನೋಡಿ ಈಗ ಸ್ವಲ್ಪ ನೆಮ್ಮದಿ ತಂದಿದೆ. ಕಂಠೀರವ ಸ್ಟುಡಿಯೋಗೆ ಹೋಗಿ ಅಲ್ಲಿಂದ ಊರಿನತ್ತ ಮುಖ ಮಾಡುವುದಾಗಿ ನುಡಿದರು. ತುಮಕೂರಿನಿಂದ ಬಂದಿದ್ದ ಅಭಿಮಾನಿಯೊಬ್ಬರು ಅಂಬರೀಶ್ ಅವರ ಪುತ್ರನ್ನು ನೋಡಲು ಇಲ್ಲಿಗೆ ಬಂದಿರುವೆ. ಆದರೆ, ಅವರು ಕಾಣಿಸುತ್ತಿಲ್ಲ ಎಂದು ದುಃಖೀತರಾದರು.
* ದೇವೇಶ ಸೂರಗುಪ್ಪ