Advertisement

Silence: ಮೌನವೇ ಎಲ್ಲವ ಕೆರಳಿಸುವುದು…..

01:12 PM Mar 06, 2024 | Team Udayavani |

ಅಂತಹದ್ದೇನಿರಬಹುದು ಆತನ ಶಬ್ದಗಳಲ್ಲಿ? ಇದಕ್ಕೆ ಉತ್ತರ ಬಲ್ಲವಳು ನಾನಲ್ಲ. ಉತ್ತರ – ವಿವರಣೆ – ವಿಶ್ಲೇಷಣೆ ಎಲ್ಲವೂ ಆತನೇ.  ಆತನೊಬ್ಬ ಮಳೆಗಾಲದ ಸೂರ್ಯ. ಮಾತು ಕಮ್ಮಿ, ಮೌನದ ಸಂವಾದವೇ ಹೆಚ್ಚು. ಪುಟ್ಟ ಪುಟ್ಟ ಮುತ್ತುಗಳಂತೆ ಪೋಣಿಸಿರುವ ತುಂಡರಿಸಿದ ಸಂದೇಶಗಳು! ಕೆಲವೊಮ್ಮೆ ಎಲ್ಲ ಪ್ರಶ್ನೆಗಳಿಗೂ ಎರಡೇ ಬಗೆಯ ಉತ್ತರಗಳು ಲಭ್ಯ. ಒಂದೋ ಸ್ತಬ್ಧ ನಗು, ಇಲ್ಲವಾದಲ್ಲಿ ಕಡುರಾತ್ರಿಯ ಭೀಕರ ಮೌನ! ಆದರೆ ಕಾಣೆಯಾದ ತಾಳ್ಮೆಯ ತರಬೇತಿಯಂತೂ ಚೆನ್ನಾಗೇ ನಡೆಯುತ್ತಿದೆ. ದಿನವಿಡೀ ಮನದಲ್ಲಿ ಚಿತ್ರೀಕರಿಸಿದ ಕಂತುಗಳನ್ನು ಸಿಗುವ ಬೊಗಸೆಯಷ್ಟು ಐದು ನಿಮಿಷದ ಅವಧಿಯಲ್ಲಿ ಭಟ್ಟಿ ಇಳಿಸುವ ಕಾರ್ಯವಿನ್ನು ನಿಂತ ಕಾಮಗಾರಿಯಾಗಿದೆ.

Advertisement

ಮೌನ ತಬ್ಬಿತು ನೆಲವ; ಜುಮ್ಮನೆ ಪುಳಕಗೊಂಡಿತು ಧಾರಿಣಿ ಗೋಪಾಲಕೃಷ್ಣ ಅಡಿಗರವರು ರಚಿಸಿದ ಈ ಸಾಹಿತ್ಯದಲ್ಲಿನ ಅಗಾಧವಾದ ಭಾವ ಪರಿಣತಿಯು, ವ್ಯಕ್ತವಾಗುವ ರೂಪಕದ ಪರಿಯೂ, ಒಳಸಿಂಚನದಲ್ಲಿ ಅಹ್ಲಾದಕರವಾಗಿ ಒಡಮೂಡಿದೆ. ಮೌನಕ್ಕೇನಾದರೂ ರೂಪ ವಿದ್ದರೆ ಅದು ಬಹುಶಃ ಆತನ ಸಂದೇಶಗಳಲ್ಲಿ ಕಾಣುತಿತ್ತು. ಆದರೂ ಆಡುವ ನಾಲಕ್ಕು ಮಾತುಗಳು ತೂಕಭರಿತ- ಅರ್ಥಗರ್ಭಿತ. ಒಮ್ಮೊಮ್ಮೆ ಈ ಮೌನದ ಕೋಟೆಯ ಗೋಡೆಗಳ ಒಡೆದು ಹಾಕುವ ಹೆಬ್ಬಯಕೆ. ಆದರೇನೋ ಅಳುಕು.

ಆತನು ಬಹುಶಃ ಚಂದ್ರನಂತೆ ಪಕ್ಷ ಪಾಲಕ. ವಾರಾಂತ್ಯದಲ್ಲಿ ಆತನಲ್ಲಿ ಅಡಗಿರುವ ಮೂಕನಿಗೊಂದು ರಜೆ. ವಾರಾಂತ್ಯಕ್ಕೆಂದು ದಿನಗಳು ಬೇಗ ಕಳೆಯಲಿ ಎಂಬ ಕೋರಿಕೆ ಬಂದದ್ದಂತು ಸುಳ್ಳಲ್ಲ. ಪ್ರತಿ ಸಲವೂ ಅದೇ ನಾಲ್ಕು ಸಂದೇಶಗಳನ್ನು ಪುನಃ – ಪುನಃ ಓದಿ ಕಾಣದ ಸತ್ಯವ ಹುಡುಕುವ ಪ್ರಯತ್ನ ನಿರಂತರ. ಆತನು ಚೂರೇ ಚೂರು ಮಾತಿಗೆ ಲಭ್ಯನಾದಾಗ ಅಭ್ಯಾಸ ಮಾಡಿದ ಸಾಲುಗಳನ್ನು ಆತ ಹಾಗೂ ಆತನ ಮೌನ ಮರೆಸುವುದು ಸರ್ವೇ ಸಾಮಾನ್ಯವಾಗಿದೆ. ಮಾತಿನಲ್ಲೇ ಮನೆಕಟ್ಟುವ ಮರುಳೆಗೆ ಮನಸ್ಸಿನಲ್ಲೇ ಮಾತು ಮುಗಿಸುವವ ಸಿಕ್ಕಿದ್ದು ತರವೇ?

ಪರದೆಯ ಹಿಂದಿನ ಆತನ ಮನದ ನಡೆಗಳನ್ನು  ಭಾಷೆಯಿಂದ ಊಹಿಸುವುದು ಸಲ್ಪ ಕಠಿನ. ಆದರೂ ದಿನಕ್ಕೆ ಒಂದು ಬಾರಿ ಹಗಲಿರುಳಂತೆ ಒಂದು ಸಂದೇಶ ಮಿಂಚಿ ಮರೆಯಾಗುತ್ತೆ. ಆ ಸಂದೇಶದ ಮುಂದುವರೆದ ಭಾಗ ಅವನ ಬಳಿಯೇ ಉಳಿಯುವುದು ಖಚಿತ. ಮಾತಿನ ಮಧ್ಯೆ ಆಗಾಗ ನುಸುಳುವ ವೇದಾಂತ – ನಗು ಇನ್ನಷ್ಟು ಮಾತುಗಳಿಗೆ ಪೀಠಿಕೆ ಹಾಕುವುದಂತೂ ಖಚಿತ. ಕಥೆಯನ್ನು ಅಪೂರ್ಣ ಮಾಡುವವನಿಗೆ ಮರುದಿನ ಹೊಸಕಥೆಯ ಹುಡುಕಾಟ. ಅರ್ಧ ಕಥೆಯನ್ನು ಬಹುಶಃ ನಾನೇ ಆರ್ಥೈಸಿಕೊಳ್ಳಬೇಕೆಂಬುದು ಆತನ ಉದ್ದೇಶವೇನೋ!.

ಆದರೂ ಪ್ರತಿ ಬಾರಿ ಅಪೂರ್ಣ ಕಥೆಯ ಲೇಖಕಿ ನಾನು. ನಾನು ನಾನಾಗಿ ಉಳಿದು ನಿಚ್ಚಳ ಬದುಕುವಂತೆ, ಬವಣೆಗಳ ಮೇಲೆ ಸವಾರಿ ಮಾಡದೆ ನನ್ನಿಷ್ಟದ ಹಬ್ಬಸಿಗೆ ಹೂವಿನ ಮಾಲೆಯೊಂದನ್ನು ಸಿಂಗರಿಸಿಕೊಂಡು ಮುಡಿಗೇರಿಸುವ ಕನಸನ್ನು ಎಳೆ-ಎಳೆಯಾಗಿ ಹೆಣೆದು, ಅಲ್ಲೊಂದು ರೂಪವಂತಿಕೆಯ ಚೆಲುವು ಬೇಕೆಂದೆ, ಚಂದ್ರನ ಕಾಂತಿಯಂತಿರುವ ನಿನ್ನ ನಿದರ್ಶನದ ಛಾಯೆಯೊಂದು ಒಡಮೂಡಿದೆ ನೀ ಹೂಂ ಗುಟ್ಟು ಚೆಲುವೆ ಎಂಬ ನಾಜೂಕುತನದ ತುಂಟು ಮಾತಿನಲ್ಲಿಯೇ ಸೆಳೆದು ಇಡುತ್ತಾನೆ ಮೋಡಿಗಾರ.

Advertisement

ವಾಸ್ತವಿಕವಾಗಿ ಪ್ರೇಮವೆಂಬುದು ಹೃದಯದಲ್ಲಿ ಸದಾ ಜಾಗೃತವಾಗಿರಬೇಕೆಂದಿಲ್ಲ. ಆದರೆ ಯಾರು ಮಾನಸಿಕವಾಗಿ ಜರ್ಜರಿತರಾಗಿರುವರೋ ಅಲ್ಲಿ ಮೂಡುವ ಒಂದು ಸಣ್ಣ ಬಗೆಯ ಮೌನವೂ ಪರ್ವತದಷ್ಟಾಗಿ ಕಾಣಬಹುದು. ಇಲ್ಲಿ ಮುಖ್ಯವಾಗಿರುವ ಒಂದು ವಿಚಾರ “ಶಬ್ದವು ಕಿವಿಗಳಿಗೆ ಅಸಹನೀಯವಾದರೆ, ಮೌನವು ಹೃದಯಕ್ಕೆ” ಮೌನ ಕೊಲ್ಲುತ್ತದೆ.

ಪ್ರತಿ ಹೆಣ್ಣು ಸಹ ಆತನೆಂಬ ಕೌತುಕಗಳಿಗೆ ಬೆರಗಾಗುತ್ತಾ ಆಕರ್ಷಿತಳಾಗುವುದು ಸಾಮಾನ್ಯ ವಿಚಾರವಾದರೂ, ಅದರಲ್ಲೊಂದು ಪ್ರಾಕೃತಿಕ ದತ್ತವಾದ ಸಂಚಲನವಿದೆ. ಸೃಷ್ಟಿ ಸೊಬಗಿನ ವಿಚಾರಗಳೆಲ್ಲ ಮನದಟ್ಟು ಮಾಡಿಕೊಳ್ಳುವಷ್ಟು ಪ್ರಜ್ಞಾಳಿರುವ ಪ್ರತಿ ಹೆಣ್ಣು ಸಹ ಪುರುಷನ ಮೌನವನ್ನು ಅರ್ಥೈಸಿಕೊಳ್ಳುವಳು. ಮತ್ತೂ ಪುರುಷನು ಸಹ ಹೆಣ್ಣಿನ ಪ್ರತಿ ಭಾವನೆಗೂ ಸ್ಪಂದಿಸುತ್ತ, ಪ್ರಕೃತಿ ಮತ್ತು ಪುರುಷ ಇಬ್ಬರೂ ಸೃಷ್ಟಿಯ ಜನನಕ್ಕೆ ಕಾರಣ ಕತೃìಗಳು ಎಂಬುದನ್ನು ಸಾರಲು ಈ ರೀತಿಯ ಮೌನದ ಕೆರಳಿಕೆಯೂ ಮೂಲವಾಗಿದೆ.

ಮೌನದ ಪರಿ ಭಾಷೆಯ ಒಳಾರ್ಥದಲ್ಲಿ ನೋಡುವುದಾದರೆ, ಕಾವ್ಯ ರಸಧಾರೆಯ ಪಾಂಡಿತ್ಯಕ್ಕೆ ಭಕ್ತಿ ಸಿಂಚನವೊಂದು ರೂಪಾಂತರವಾಗುವುದು. ಇಲ್ಲಿ ಎಲ್ಲವೂ ಸ್ಥಿರ ಮತ್ತು ಅಸ್ಥಿರ! ಎರಡೂ ಬಗೆಯ ಪ್ರಶ್ನೋದಕಗಳು ಒಡಮೂಡಿ ಗೊಂದಲಗೊಂಡಾಗ ಚಂಚಲತೆ ಮೂಡಿ ಆಚಾತುರ್ಯವಾಗುವುದು.  ಕ್ಷಣ ಕಾಲ ಮನಸ್ಸು ಮೌನಕ್ಕೆ ಜಾರಿ ವಾಸ್ತವದ ಬಗ್ಗೆ ಗಮನ ಹರಿಸಿದರೆ ನೈಜತೆಯ ಸ್ಪಷ್ಟ ಚಿತ್ರಣವೊಂದು ಗಾಢವಾಗುವುದು. ಇದೂ ಮೌನಕ್ಕಿರುವ ಅಗಾಧ ಶಕ್ತಿ. ಹೀಗೆ ಆತನ ಪ್ರತಿ ಮೌನವೂ ಪ್ರಕೃತಿಯಲ್ಲಿನ ಬದಲಾವಣೆಗೆ ಕಾರಣವಾಗುವುದು.

-ದೀಪಿಕಾ ಬಾಬು

ಮಾರಘಟ್ಟ

Advertisement

Udayavani is now on Telegram. Click here to join our channel and stay updated with the latest news.

Next