ಮೌನಕ್ಕೆ ಭಾವನೆಗಳೇ ಇಲ್ಲವೆಂಬುದು ಹಲವರ ಭಾವನೆ. ಆದರೆ ಮೌನವೇ ಒಂದು ಅದ್ಭುತ ಭಾವನೆಯೆಂಬ ಸತ್ಯವನ್ನು ಎಲ್ಲರೂ ಮರೆತಿದ್ದಾರೆ. ಅಲ್ಲಿ ಪ್ರೀತಿಯಿದೆ, ಕಾಳಜಿ, ನೋವು, ಕೋಪ, ಅಹಂಕಾರ, ಸ್ವಾಭಿಮಾನ ಎಲ್ಲವೂ ಇದೆ. ಆದರೆ ತೋರಿಸುವ ರೀತಿ ಬೇರೆಯೆಂಬುದು ಮಾತ್ರ ಸತ್ಯ. ಅದಕ್ಕಿಂತ ಹೆಚ್ಚು ನಿಗೂಢ.
ಭಾವನೆಗಳನ್ನು ತೋರಿಸಲು ಮಾತೇ ಪ್ರಧಾನವಾದ ಮಾರ್ಗ. ಅದು ಯಾವುದೇ ಆಗಿರಬಹುದು. ಪ್ರೀತಿ ಕೋಪ ಹೀಗೆ ಎಲ್ಲ. ಮಾತಿನಲ್ಲಿ ಹೇಳಿದಾಗ ಅದು ಅರ್ಥವಾಗಬೇಕಾದ ವ್ಯಕ್ತಿಗೆ ನೇರವಾಗಿ ಅರ್ಥವಾಗುತ್ತದೆ. ಆದರೆ ಮೌನ ಹಾಗಲ್ಲ. ಅದು ಅರ್ಥವಾಗಬೇಕಾದರೆ ಎರಡು ವ್ಯಕ್ತಿಗಳ ನಡುವೆ ಸಂಭಾಷಣೆಯೇ ನಡೆಯಬೇಕೆಂದಿಲ್ಲ. ಎಲ್ಲ ಭಾವನೆಗಳೂ ಹೃದಯವನ್ನು ತಟ್ಟುತ್ತವೆ. ಅಷ್ಟು ಶಕ್ತಿಯಿದೆ.
ಸೀತೆಯನ್ನು ಕಾಡಿಗೆ ಅಟ್ಟುವಾಗ ರಾಮನ ಮೌನದಲ್ಲಿದ್ದದ್ದು ಸೀತೆಯ ಬಗ್ಗೆ ಅಪರಿಮಿತ ಪ್ರೀತಿ ಮತ್ತು ಕಾಳಜಿ ಹಾಗೂ ರಾಜ ಮತ್ತು ಗಂಡನ ಪದವಿಯ ನಡುವೆ ಸಿಲುಕಿದ ತೊಳಲಾಟ ಮಾತ್ರ. ಆದರೆ ಪ್ರಜೆಗಳಿಗೆ ಅರ್ಥವಾದದ್ದು ಅವನು ಮಾತಿನಲ್ಲಿ ಹೇಳಿದ ಶಾಸನ ಮಾತ್ರ. ಆದರೆ ಸೀತೆಗೆ ಹಾಗಲ್ಲ. ಅವಳಿಗೆ ಅವನ ಮೌನವೂ ಅರ್ಥವಾಗಿತ್ತು. ಅದಕ್ಕಾಗಿಯೇ ಕಾಡಿನ ಮಧ್ಯೆ ಲಕ್ಷ್ಮಣ ಅವಳನ್ನು ಬಿಟ್ಟು ಬಂದಾಗಲೂ ಸೀತೆ ರಾಮನನ್ನು ಹಳಿಯುವುದಿಲ್ಲ. ಅದುವೇ ಮೌನದ ಮಹತ್ವ.
ಸೋತು ನಿಂತಿರುವ ಪ್ರತಿಯೊಬ್ಬರಿಗೂ ಸಾಂತ್ವನದ ಅಗತ್ಯವಿರುತ್ತದೆ. ಅದಕ್ಕಾಗಿ ಜಗತ್ತೆಲ್ಲ ಕೇಳುವಂತೆ ನಾನು ನಿನ್ನೊಂದಿಗಿದ್ದೇನೆಂದು ಹೇಳಬೇಕಾಗಿಲ್ಲ. ಸೊರಗಿದ ಕೈಯನ್ನು ಗಟ್ಟಿ ಹಿಡಿದರೂ ಸಾಕು. ಸೋತಿರುವ ವ್ಯಕ್ತಿಗೆ ನೂರಾನೆ ಬಲ ಬಂದಂತಾಗುತ್ತದೆ.
ಮೌನ ಎಂದರೆ ಸೋಲಲ್ಲ. ಸೋತು ಗೆಲ್ಲುವ ತವಕ. ಕೆಲವು ಬಾರಿ ನಿಮ್ಮ ಮೌನ ಹಲವರಿಗೆ ಅರ್ಥವಾಗದೇ ಹೋಗಬಹುದು. ಮೌನದ ಹಿಂದಿರುವ ನಿಮ್ಮ ಭಾವನೆಗಳಿಗೆ ಎದುರಿಗಿರುವ ವ್ಯಕ್ತಿ ಸ್ಪಂದಿಸಬೇಕಾದರೆ ಮೌನವನ್ನು ಮುರಿಯಲೇ ಬೇಕು. ಮನಸ್ಸಿನಲ್ಲಾಗುವ ಭಾವನೆಗಳಿಗೆ ಮಾತಿನ ರೂಪವನ್ನು ನೀಡಿದರೆ ಮಾತ್ರ ಎಲ್ಲ ರೂ ಸ್ಪಂದಿಸುತ್ತಾರೆ. ಗಾಢ ಮೌನವಹಿಸಿ ಸಂಬಂಧಗಳನ್ನು ಕೆಡಿಸಿಕೊಳ್ಳುವುದರ ಬದಲು ಒಂದೆರಡು ಮಾತನಾಡಿ ಭಾವನೆಗಳನ್ನು ಹಂಚಿಕೊಂಡರೆ ಮುರಿದು ಹೋಗುವ ಎಷ್ಟೋ ಬಾಂಧವ್ಯಗಳನ್ನು ಉಳಿಸಬಹದು.
- ಸುಶ್ಮಿತಾ ಶೆಟ್ಟಿ ಸಿರಿಬಾಗಿಲು