Advertisement

Sikh separatist ಭಾರತಕ್ಕೆ ಕಂಟಕ ಪನ್ನುನ್‌ : ಯಾರೀತ?

01:08 AM Dec 01, 2023 | Team Udayavani |

ಸಿಕ್ಖ್ ಪ್ರತ್ಯೇಕತಾವಾದಿ, ಉಗ್ರಗಾಮಿ ಗುರುಪತ್ವಂತ್‌ ಸಿಂಗ್‌  ಪನ್ನುನ್‌  ಹತ್ಯೆ ಯತ್ನ ವಿಚಾರ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈತನ ಹತ್ಯೆ ಯತ್ನ ಸಂಬಂಧ ಅಮೆರಿಕ ಪೊಲೀಸರು ಭಾರತ ಮೂಲದ ವ್ಯಕ್ತಿಯೊಬ್ಬನ ಮೇಲೆ ಆಪಾದನೆ ಹೊರಿಸಿದ್ದಾರೆ.ಈ ಬೆಳವಣಿಗೆಯಾಗುತ್ತಿದ್ದಂತೆ ಅತ್ತ ಕೆನಡಾವೂ ನಿಜ್ಜರ್‌ ಹತ್ಯೆ ವಿಚಾರವನ್ನು ಕೆದಕಿದೆ. ಹಾಗಾದರೆ ಯಾರಿದು ಪನ್ನುನ್‌? ಭಾರತ ವಿರೋಧಿ ಮೇಲೆ ಪಾಶ್ಚಾತ್ಯ ದೇಶಗಳಿಗೇಕೆ ಪ್ರೀತಿ? ಇಲ್ಲಿದೆ ಮಾಹಿತಿ…

Advertisement

ಯಾರೀತ ಪನ್ನುನ್‌?

ಪಂಜಾಬ್‌ ಮೂಲದ ಗುರುಪತ್ವಂತ್‌ ಸಿಂಗ್‌ ಪನ್ನುನ್‌  ಅಮೆರಿಕ ಮತ್ತು ಕೆನಡಾ ಪೌರತ್ವ ಹೊಂದಿರುವ ಉಗ್ರ. ಈತ ಪಂಜಾಬ್‌ನ ಅಮೃತಸರ ಜಿಲ್ಲೆಯ ಖೋಂಕಟ್‌ ಎಂಬ ಗ್ರಾಮದಲ್ಲಿ ಜನಿಸಿದ್ದ. ಅಮೃತಸರದಲ್ಲಿನ ಗುರುನಾನಕ್‌ ದೇವ್‌ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದ್ದು, ಬಳಿಕ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲನಾಗಿ ಕೆಲಸ ಮಾಡುತ್ತಿದ್ದ. ಹಿಂದೂ ಮುಖಂಡನೊಬ್ಬನನ್ನು ಹತ್ಯೆ ಮಾಡಿದ್ದ ಆರೋಪವೂ ಈತನ ಮೇಲಿತ್ತು. ಹೀಗಾಗಿ 2007ರಲ್ಲಿ ಅಮೆರಿಕಕ್ಕೆ ಪರಾರಿಯಾಗಿದ್ದ.

ಭಾರತ ವಿರೋಧಿ ನಡವಳಿಕೆ

ಮೊದಲಿನಿಂದಲೂ ಈತ ಭಾರತ ವಿರೋಧಿ ನಡವಳಿಕೆ ಹೊಂದಿದ್ದಾನೆ. 2020ರ ಅಕ್ಟೋಬರ್‌ನಲ್ಲಿ  ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ ಸಂದರ್ಭದಲ್ಲಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಈತ,  ವಿದ್ಯಾರ್ಥಿಗಳಲ್ಲಿ ಖಲಿಸ್ಥಾನಿ ಪರ ಘೋಷಣೆ  ಕೂಗುವಂತೆ ಪ್ರೇರೇಪಿಸಿದ್ದ. ಈ ರೀತಿ ಮಾಡಿದರೆ ಐಫೋನ್‌ ಕೊಡುವುದಾಗಿ ಆಮಿಷ ವೊಡ್ಡಿದ್ದ.  2020ರ ಜೂನ್‌ನಲ್ಲಿ ಭಾರತ-ಚೀನ ನಡುವಿನ ಗಾಲ್ವಾನ್‌ ಘರ್ಷಣೆ ವೇಳೆ, ಈತ ಚೀನ ಬಗ್ಗೆ ಸಹಾನುಭೂತಿ ತೋರಿದ್ದ. ಭಾರತದ ಬಗ್ಗೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದ.

Advertisement

ಪನ್ನುನ್‌ ಬೆನ್ನಿಗೆ ನಿಂತ ಕೆನಡಾ

ಕೆನಡಾದಲ್ಲಿ ಸಿಕ್ಖರು ಹೆಚ್ಚಿನ ಪ್ರಮಾಣದಲ್ಲೇ ಇದ್ದು, ಹೀಗಾಗಿ ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರಾಡೊ ಖಲಿಸ್ಥಾನಿ ಉಗ್ರರ ಜತೆಗೆ ನಿಂತಿದ್ದಾರೆ. ಈ ಹಿಂದೆ ನಿಜ್ಜರ್‌ ಹತ್ಯೆಗೆ ಭಾರತವೇ ಕಾರಣ ಎಂದಿದ್ದ ಪ್ರಧಾನಿ, ಈಗ ಪನ್ನುನ್‌  ಬೆಂಬಲಕ್ಕೆ ನಿಂತಿದ್ದಾರೆ. ಜತೆಗೆ ಕೆನಡಾದಲ್ಲಿಯೇ ಖಲಿಸ್ಥಾನಿ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು, ಇದಕ್ಕೆ ಅಲ್ಲಿನ ಸರಕಾರದ ಬೆಂಬಲವೂ ಇದೆ ಎಂಬ ಆರೋಪವೂ ಇದೆ. ಇದುವರೆಗೆ ಅಲ್ಲಿನ ಹಿಂದೂ ಸಂಘಟನೆಗಳು ನೀಡಿರುವ ದೂರಿಗೆ ಸರಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಏನಿದು ಸಿಕ್ಖ್ ಫಾರ್‌ ಜಸ್ಟೀಸ್‌ ಸಂಘಟನೆ?

ಈತ ಖಲಿಸ್ಥಾನಿ ಪರ ಹೋರಾಟ ನಡೆಸುತ್ತಿದ್ದು, ಇದಕ್ಕಾಗಿಯೇ ಸಿಕ್ಖ್ ಫಾರ್‌ ಜಸ್ಟೀಸ್‌ ಎಂಬ ಸಂಘಟನೆ ಕಟ್ಟಿಕೊಂಡಿದ್ದಾನೆ. ಇದು ಕೆನಡಾ ಮೂಲದ ಸಂಘಟನೆಯಾಗಿದ್ದು, ಅಲ್ಲಿಂದಲೇ ಭಾರತ ವಿರೋಧಿ ಕೆಲಸ ಮಾಡುತ್ತಿದೆ. ಅಷ್ಟೇ ಅಲ್ಲ, ವಿದೇಶಗಳಲ್ಲಿರುವ ಹಿಂದೂಗಳಿಗೂ ಈ ಸಂಘಟನೆ ಮೂಲಕವೇ ಪನ್ನುನ್‌  ಬೆದರಿಕೆಯೊಡ್ಡುತ್ತಿದ್ದಾನೆ.  ಅಷ್ಟೇ ಅಲ್ಲ, ಭಾರತದಿಂದ ಪಂಜಾಬ್‌ ಬೇರೆಯಾಗಬೇಕು, ಖಲಿಸ್ಥಾನ ದೇಶವಾಗಬೇಕು ಎಂದು ಅಮೆರಿಕ, ಕೆನಡಾ ಸೇರಿದಂತೆ ಹಲವಾರು ದೇಶಗಳಲ್ಲಿ ಅನಧಿಕೃತವಾಗಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾನೆ.

ಪಾಶ್ಚಾತ್ಯ ದೇಶಗಳ ಇಬ್ಬಗೆ ನೀತಿ

ಕೆನಡಾ, ಅಮೆರಿಕ, ಬ್ರಿಟನ್‌, ಆಸ್ಟ್ರೇಲಿಯಾದಲ್ಲಿ ಖಲಿಸ್ಥಾನಿಗಳ ಅಬ್ಬರ ಹೆಚ್ಚಾಗಿದೆ. ಪನ್ನುನ್‌  ನೇರವಾಗಿಯೇ ಭಾರತದ ಪ್ರಧಾನಿ ಮೋದಿ ಸೇರಿದಂತೆ ಹಲವಾರು ಗಣ್ಯರಿಗೆ ಹತ್ಯೆ ಬೆದರಿಕೆ ಹಾಕಿದ್ದಾನೆ. ಈ ದೇಶಗಳಲ್ಲಿನ ಭಾರತದ ರಾಯಭಾರ, ಹೈಕಮಿಷನ್‌ ಕಚೇರಿಗಳಿಗೂ ಖಲಿಸ್ಥಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಪನ್ನುನ್‌  ವಿರುದ್ಧ ಭಾರತದಲ್ಲಿ ಎನ್‌ಐಎ ಪ್ರಕರಣವನ್ನೂ ದಾಖಲಿಸಿದೆ. ಜತೆಗೆ, ಪನ್ನುನ್‌  ಸೇರಿದಂತೆ ಖಲಿಸ್ತಾನಿ ಉಗ್ರರ ಕುರಿತಂತೆ ಭಾರತ ಅಮೆರಿಕ, ಕೆನಡಾ ದೇಶಗಳಿಗೆ ಹಲವಾರು ಬಾರಿ ದೂರು ಸಲ್ಲಿಸಿದೆ. ಈ ಬಗ್ಗೆಯೂ ಈ ದೇಶಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಪನ್ನುನ್‌  ಹತ್ಯೆ ಸಂಚು ವಿಫ‌ಲ

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಭಾರತ ವಿರೋಧಿ ಉಗ್ರರನ್ನು ಅನಾಮಿಕರು ಹತ್ಯೆ ಮಾಡುತ್ತಿದ್ದಾರೆ. ಇದರಲ್ಲಿ ಖಲಿಸ್ಥಾನಿ ನಿಜ್ಜರ್‌ ಕೂಡ ಸೇರಿದ್ದಾನೆ. ಆದರೆ ಪನ್ನುನ್‌  ಹತ್ಯೆಗೂ ಸಂಚು ರೂಪಿತವಾಗಿದ್ದು, ಅಮೆರಿಕದಿಂದಾಗಿ ಅದು ವಿಫ‌ಲವಾಗಿದೆ. ಸದ್ಯ ಪನ್ನುನ್‌  ಹತ್ಯೆ ಸಂಚು ಆರೋಪದ ಮೇಲೆ ನಿಖೀಲ್‌ ಗುಪ್ತಾ ಎಂಬ ಭಾರತದ ಮೂಲದ ವ್ಯಕ್ತಿ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಅಮೆರಿಕದಲ್ಲಿ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹತ್ಯೆ ಸಂಚಿನ ಬಗ್ಗೆ ವಿವರ ಸಲ್ಲಿಸಲಾಗಿದೆ.

ಅವರ ಪ್ರಕಾರ, ಪನ್ನುನ್‌  ಹತ್ಯೆ ಸಂಚು ಹೀಗಿತ್ತು.

1 ಸಿಸಿ-1 – ಭಾರತದ ಏಜೆನ್ಸಿಯೊಂದರ ಅಧಿಕಾರಿ. ಪನ್ನುನ್‌  ಹತ್ಯೆಗೆ ಸಂಚು ರೂಪಿಸಿದ ಪ್ರಮುಖ ವ್ಯಕ್ತಿ ಇವರೇ. ಇವರ ಗುರುತು ಪತ್ತೆಯಾಗಿಲ್ಲ. ಹಿಂದೆ ಸಿಆರ್‌ಪಿಎಫ್ನಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ.

2 ನಿಖೀಲ್‌ ಗುಪ್ತಾ – 52 ವರ್ಷದ ಭಾರತೀಯ ವ್ಯಕ್ತಿ. ಸಿಸಿ-1 ಇವರನ್ನು ಪನ್ನುನ್‌  ಹತ್ಯೆಗೆ ನೇಮಕ ಮಾಡಿದೆ. ಗುಪ್ತಾ ಮೇಲೆ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳ ಸಾಗಾಟದ ಕೇಸ್‌ ಇದೆ.

3 ಸಿಎಸ್‌ – ಪನ್ನುನ್‌  ಹತ್ಯೆಗೆ ನೇಮಕ ಮಾಡಿದ ಹಿಟ್‌ಮ್ಯಾನ್‌ ಹುಡುಕಿಕೊಟ್ಟವ. ನ್ಯೂಯಾರ್ಕ್‌ನಲ್ಲಿ ಈತನನ್ನು ನೇಮಕ ಮಾಡಲಾಗಿತ್ತು. ಈತ ಅಮೆರಿಕದ ಕಾನೂನು ಸಂಸ್ಥೆಯೊಂದರಲ್ಲಿ ಗುಪ್ತಚರನಾಗಿ ಹಿಂದೆ ಕೆಲಸ ಮಾಡುತ್ತಿದ್ದ.

4 ಯುಸಿ – ಪನ್ನುನ್‌  ಹತ್ಯೆಗೆ ಸುಫಾರಿ ಪಡೆದವ. ಸಿಎಸ್‌ ಈತನನ್ನು ಗುಪ್ತಾಗೆ ಪರಿಚಯ ಮಾಡಿಕೊಟ್ಟಿದ್ದ. ಈತನೂ ಅಮೆರಿಕದ ಗುಪ್ತಚರ ಸಂಸ್ಥೆಯಲ್ಲಿ ಅಂಡರ್‌    ಕವರ್‌ನಲ್ಲಿ ಕೆಲಸ ಮಾಡುತ್ತಿದ್ದವ.

5 ಸಂತ್ರಸ್ತ – ಈತನ ಹೆಸರನ್ನು ಅಮೆರಿಕ ನಮೂದಿಸಿಲ್ಲ. ಆದರೆ ಈತನೇ ಪನ್ನುನ್‌ . ಈತನ ಇತರ ವಿವರಗಳ ಬಗ್ಗೆ ನಮೂದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next