ಬೆಂಗಳೂರು: ಉದ್ಯೋಗಾಸಕ್ತ ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ಅಮೆಜಾನ್ ಇಂಡಿಯಾವು ಕರ್ನಾಟಕ ಸರ್ಕಾರ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಮತ್ತು ಹರಿಯಾಣ ರಾಜ್ಯ ಸರ್ಕಾರಗಳೊಡನೆ ಒಪ್ಪಂದಕ್ಕೆ ಸಹಿ ಹಾಕಿದೆ.
ಅಮೆಜಾನ್ ಇಂಡಿಯಾದ ಆಪರೇಷನ್ಸ್ ಜಾಲದಾದ್ಯಂತ ಐದು ರಾಜ್ಯಗಳಲ್ಲಿ ಶ್ರವಣ ಸಮಸ್ಯೆಯುಳ್ಳ ಸಾವಿರಾರು ದಿವ್ಯಾಂಗ ಅಭ್ಯರ್ಥಿಗಳಿಗೆ ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಪೂರೈಸಲಿದೆ. ರಾಜ್ಯ ಸರ್ಕಾರಗಳು ಮತ್ತು ಅಮೆಜಾನ್ ಇಂಡಿಯಾ ನಡುವಿನ ಒಪ್ಪಂದವು ದಿವ್ಯಾಂಗರಿಗೆ ಉದ್ಯೋಗ ಮತ್ತು ಕೌಶಲ್ಯದ ಅವಕಾಶಗಳಿಗೆ ಆದ್ಯತೆ ನೀಡುತ್ತದೆ ಮತ್ತು ಮುಖ್ಯವಾಹಿನಿ ಉದ್ಯೋಗ ಗಳಲ್ಲಿ ದಿವ್ಯಾಂಗರು ಪಾಲ್ಗೊಳ್ಳಲು ನೆರವಾಗುತ್ತದೆ. ಇದು ಪ್ರಧಾನಮಂತ್ರಿಯವರ ಆತ್ಮನಿರ್ಭರ ಭಾರತಕ್ಕೆ ಪೂರಕವಾಗಿದೆ ಎಂದು ಕಂಪೆನಿ ತಿಳಿಸಿದೆ.
ಅಮೆಜಾನ್ ನ ಕಾರ್ಯಾಚರಣೆ ಜಾಲ ಅಂದರೆ ಫುಲ್ ಫಿಲ್ ಮೆಂಟ್ ಸೆಂಟರ್ ಗಳು, ಸಾರ್ಟೇಷನ್ ಕೇಂದ್ರಗಳು ಮತ್ತು ಡೆಲಿವರಿ ಸ್ಟೇಷನ್ ಗಳಲ್ಲಿ ಸ್ಟೋವಿಂಗ್, ಪಿಕಿಂಗ್, ಪ್ಯಾಕಿಂಗ್ ಮತ್ತು ಸಾರ್ಟಿಂಗ್ ಮತ್ತಿತರೆ ಉದ್ಯೋಗಗಳನ್ನು ನೀಡಲಾಗುತ್ತದೆ.
ಅಮೆಜಾನ್ ನ ಪೀಪಲ್ ಎಕ್ಸ್ ಪೀರಿಯೆನ್ಸ್ ಅಂಡ್ ಟೆಕ್ನಾಲಜಿ(ಪಿ.ಎಕ್ಸ್.ಟಿ.)ಯ ಇಂಡಿಯಾ ಆಪರೇಷನ್ಸ್ ನಿರ್ದೇಶಕ ಲಿಜು ಥಾಮಸ್, ಮಾತಾಡಿ, ಕರ್ನಾಟಕ, ಹರಿಯಾಣ, ಮಹಾರಾಷ್ಟ್ರ, ಗುಜರಾತ್ ರಾಜ್ಯ ಸರ್ಕಾರಗಳ ನಿರಂತರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ.. ಇದು ಅವಕಾಶ ವಂಚಿತರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪೂರಕವಾಗಿದೆ. ಶ್ರವಣ ಮತ್ತು ಮಾತಿನ ಸಮಸ್ಯೆಗಳುಳ್ಳ ಸಾವಿರಾರು ಸಿಬ್ಬಂದಿ ಅಮೆಜಾನ್ ಇಂಡಿಯಾದ ಕಾರ್ಯಾಚರಣೆ ಜಾಲದ ಭಾಗವಾಗಿ ಮೌಲ್ಯಯುತ ಪಾತ್ರ ವಹಿಸಿದ್ದಾರೆ ಎಂದರು.
ಕರ್ನಾಟಕ ಸರ್ಕಾರದ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿ ಕೆ.ಎಸ್. ಲತಾಕುಮಾರಿ ಮಾತನಾಡಿ,ಅಮೆಜಾನ್ ಇಂಡಿಯಾ ಶ್ರವಣ ಮತ್ತು ಮಾತಿನ ದೋಷವುಳ್ಳವರಿಗೆ ಬೆಂಬಲಿಸಲು ಹಲವಾರು ಮೂಲಸೌಕರ್ಯ ಸೌಲಭ್ಯಗಳನ್ನು ಅನುಷ್ಠಾನಗೊಳಿಸಿದೆ ಎಂದರು.