ಧಾರವಾಡ: ಪತ್ರಾಗಾರ ಇಲಾಖೆಯು ಅನೇಕ ದಶಕಗಳ ಅಪೂರ್ವ ದಾಖಲೆಗಳನ್ನು ಕಾಪಾಡಿಕೊಂಡು ಬಂದಿದ್ದು, ನಾಡಿನ, ದೇಶದ ಇತಿಹಾಸ ಸಾರುವ ತಾಳೆಗರಿ, ಹಸ್ತಪ್ರತಿ ದಾಖಲೆಗಳನ್ನು ಸಂರಕ್ಷಿಸುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಕನ್ನಡ, ಸಂಸ್ಕೃತಿ ಮತ್ತು ಪತ್ರಾಗಾರ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ಕವಿವಿಯ ಕನ್ನಡ ಅಧ್ಯಯನ ಪೀಠ ಆವರಣದಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪ್ರಾದೇಶಿಕ ಪತ್ರಾಗಾರ ಕಚೇರಿ ಕಟ್ಟಡಕ್ಕೆ ಅಡಿಗಲ್ಲು ಪೂಜೆ ನೆರವೇರಿಸಿ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ, ಇತಿಹಾಸಕಾರರಿಗೆ, ಸಂಶೋಧಕರಿಗೆ ಅಗತ್ಯವಿರುವ ಈ ಕಚೇರಿಗೆ ಕವಿವಿ ನಿವೇಶನ ಒದಗಿಸಿದೆ.
ಇಲಾಖೆಯು ಸುಮಾರು 60 ಲಕ್ಷ ಪುಟಗಳ ಅಮೂಲ್ಯ ಮಾಹಿತಿಯನ್ನು ತಂತ್ರಜ್ಞಾನ ಬಳಸಿಕೊಂಡು ಗಣಕೀಕರಣಗೊಳಿಸಲಾಗಿದೆ. ಆಡಳಿತದಲ್ಲಿನ ಅನೇಕ ಹಳೆಯ ದಾಖಲೆಗಳನ್ನು ಇಲಾಖೆ ರಕ್ಷಿಸಿದೆ. ಬ್ರಿಟಿಷ್ ಲೈಬ್ರರಿಯಿಂದಲೂ ದಾಖಲೆಗಳನ್ನು ತರಿಸಿಕೊಂಡು ಪುಸ್ತಕ ಪ್ರಕಟಿಸಲಾಗಿದೆ.
ಮುಂಬಯಿ ಕರ್ನಾಟಕಕ್ಕೆ ಸಂಬಂಧಿಸಿದ 60 ಸಾವಿರ ಮೋಡಿ ಹಾಗೂ ಮರಾಠಿ ದಾಖಲೆಗಳನ್ನು ಸಂರಕ್ಷಿಸಲಾಗುತ್ತಿದೆ. ಅದರಲ್ಲೂ ಕಣಜ ಕನ್ನಡ ವೆಬ್‌ಸೈಟ್‌ನಲ್ಲಿ ಅನೇಕ ಮಾಹಿತಿ ಲಭ್ಯವಿದೆ ಎಂದರು. ಜನರಿಗೆ ಅರಿವು ಮೂಡಿಸಲು, ಸಾಮಾನ್ಯ ವ್ಯಕ್ತಿಗೂ ಮಾಹಿತಿ, ಕಾನೂನು ತಿದ್ದುಪಡಿಗಳನ್ನು ಇಲಾಖೆಯ ವೆಬ್‌ಸೈಟ್‌ಗೆ ಹಾಕಲಾಗುತ್ತಿದೆ ಎಂದರು.
ಕವಿವಿ ಕುಲಸಚಿವ ಮಲ್ಲಿಕಾರ್ಜುನ ಪಾಟೀಲ, ಡಾ| ಜೆ.ಎಂ.ನಾಗಯ್ಯ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಅಶೋಕ ಕವಲೂರ, ಪತ್ರಾಗಾರ ಇಲಾಖೆಯ ಮಂಜುಳಾ ಯಲಿಗಾರ, ಡಾ| ವೀರಶೆಟ್ಟಿ ಸೇರಿದಂತೆ ಹಲವರು ಇದ್ದರು.