ಜನರನ್ನು ಅದರಲ್ಲೂ ಜನಸಾಮಾನ್ಯರ ದೈನಂದಿನ ಜೀವನ ಮತ್ತು ದೇಶದ ಆರ್ಥಿಕತೆಯೊಂದಿಗೆ ನೇರ ಸಂಬಂಧ ಹೊಂದಿರುವ ಹಣದುಬ್ಬರ ನಿಯಂತ್ರಣದ ಪ್ರಶ್ನೆ ಬಂದಾಗಲೆಲ್ಲ ಇದು ಸರಕಾರ ಮತ್ತು ಆರ್‌ಬಿಐ ಪಾಲಿಗೆ ಕಬ್ಬಿಣದ ಕಡಲೆಯೇ. ತೈಲ, ಆಹಾರ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗಲೆಲ್ಲ ಹಣದುಬ್ಬರ ಹೆಚ್ಚಾಗಿ ಜನಸಾಮಾನ್ಯರನ್ನು ಮತ್ತು ಸರಕಾರವನ್ನು ಇನ್ನಿಲ್ಲದಂತೆ ಕಾಡುತ್ತಲೇ ಬಂದಿದೆ. ಆದರೆ ಜುಲೈ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಗೂ ಮೀರಿ ಇಳಿಕೆಯಾಗಿದೆ. ಇದು ಸರಕಾರ ಮತ್ತು ಆರ್‌ಬಿಐಯ ನಿಟ್ಟುಸಿರಿಗೆ ಕಾರಣವಾಗಿದ್ದರೆ, ಜನಸಾಮಾನ್ಯರು ಕೂಡ ಒಂದಿಷ್ಟು ನಿರಾಳರಾಗುವ ಬೆಳವಣಿಗೆಯಾಗಿದೆ.
ಕಳೆದ ಐದು ವರ್ಷಗಳಲ್ಲಿಯೇ ಮೊದಲ ಬಾರಿಗೆ ದೇಶದಲ್ಲಿ ಚಿಲ್ಲರೆ ಹಣದುಬ್ಬರ ಅತೀ ಕನಿಷ್ಠ ಅಂದರೆ ಶೇ. 3.54ಕ್ಕೆ ಇಳಿದಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಶೇ.4ಕ್ಕಿಂತ ಕಡಿಮೆ ಎಂಬುದು ಕೂಡ ಅತ್ಯಂತ ಗಮನಾರ್ಹ. ರಾಷ್ಟ್ರೀಯ ಸಾಂಖೀಕ ಕಚೇರಿ ಬಿಡುಗಡೆ ಮಾಡಿರುವ ಜುಲೈ ತಿಂಗಳ ದತ್ತಾಂಶಗಳ ಪ್ರಕಾರ, ಆಹಾರ ವಸ್ತುಗಳ ಸಹಿತ ಅಗತ್ಯ ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿರುವುದೇ ಹಣದುಬ್ಬರ ಇಷ್ಟೊಂದು ಕಡಿಮೆಯಾಗಲು ಪ್ರಮುಖ ಕಾರಣ. ಈ ಹಿಂದೆ ಅಂದರೆ 2019ರ ಸೆಪ್ಟಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇ. 3.99ರಷ್ಟು ದಾಖಲಾಗಿತ್ತು.
ಬೇಸಗೆಯಲ್ಲಿ ಅಧಿಕ ತಾಪಮಾನದ ಪರಿಣಾಮ ದೇಶದ ಹಲವೆಡೆ ಒಂದಿಷ್ಟು ಮುಂಚಿತವಾಗಿ ಬೇಸಗೆ ಮಳೆ ಸುರಿದಿತ್ತು. ಹೀಗಾಗಿ ರೈತರು ಕೆಲವು ಆಹಾರ ಬೆಳೆಗಳ ಬಿತ್ತನೆ, ನಾಟಿ ಕಾರ್ಯವನ್ನು ನಿಗದಿತ ಅವಧಿಗೂ ಮುನ್ನವೇ ಆರಂಭಿಸಿದ್ದರಿಂದಾಗಿ ಮಾರುಕಟ್ಟೆಗೆ ಕೆಲವು ಬೆಳೆಗಳು ಸಾಕಷ್ಟು ಮುಂಚಿತವಾಗಿ ಪೂರೈಕೆಯಾಗಿವೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇದ್ದುದರಿಂದಾಗಿ ಆಹಾರ ಪದಾರ್ಥಗಳ ಬೆಲೆ ಹೆಚ್ಚೇನೂ ಏರಿಳಿತ ಕಾಣದೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ.
ಇದೇ ವೇಳೆ ನಿವ್ವಳ ತೆರಿಗೆ ಸಂಗ್ರಹ ಕೂಡ ಶೇ.22.48ರಷ್ಟು ಹೆಚ್ಚಳ ಕಂಡಿದೆ. ಉತ್ಪಾದನ ವಲಯ ಒಂದಿಷ್ಟು ಹಿನ್ನಡೆ ಕಂಡಿದೆಯಾದರೂ ಮುಂದಿನ ದಿನಗಳಲ್ಲಿ ಈ ಕ್ಷೇತ್ರವೂ ಚೇತರಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಒಟ್ಟಾರೆ ಬೆಳವಣಿಗೆಗೆಗಳು ದೇಶದ ಆರ್ಥಿಕತೆಯನ್ನು ಇನ್ನಷ್ಟು ಸದೃಢಗೊಳಿಸಲು ಪೂರಕವಾಗಿವೆ. ಆರ್‌ಬಿಐ ಮತ್ತು ಸರಕಾರದ ಕಠಿನ ನಿಲುವಿನ ಪರಿಣಾಮ ಒಂದೆಡೆಯಿಂದ ಸರಕಾರದ ಬೊಕ್ಕಸ ತುಂಬುತ್ತಿದ್ದರೆ ಮತ್ತೂಂದೆಡೆಯಿಂದ ದೇಶದ ಆರ್ಥಿಕತೆ ವಿಶ್ವದಲ್ಲಿಯೇ ಮುಂಚೂಣಿಯಲ್ಲಿ ಬೆಳವಣಿಗೆ ಹೊಂದುತ್ತಿದೆ.
ಏತನ್ಮಧ್ಯೆ ಆಗಸ್ಟ್-ಸೆಪ್ಟಂಬರ್ ತಿಂಗಳ ಅವಧಿಯಲ್ಲಿ ದೇಶದ ಹಲವೆಡೆ ಭಾರೀ ಮಳೆಯಾಗಿ ಪ್ರವಾಹ ತಲೆದೋರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಬೆಳೆ ಹಾನಿಗೀಡಾಗುವ ಆತಂಕ ತಲೆದೋರಿದೆ. ಹೀಗಾದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಆಹಾರ ಪದಾರ್ಥಗಳು ಮಾರುಕಟ್ಟೆಗೆ ಆವಕವಾಗುವ ಸಾಧ್ಯತೆಗಳು ಕಡಿಮೆ. ಅಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಹಬ್ಬಗಳ ಸರಣಿ ಆರಂಭಗೊಳ್ಳಲಿದ್ದು ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಕುದುರಲಿದೆ. ಕಾಳಸಂತೆಕೋರರು ಮತ್ತು ಸಗಟು ವ್ಯಾಪಾರಿಗಳು ಇದನ್ನು ದಾಳವಾಗಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿರುವುದರಿಂದ ಸರಕಾರ ಇತ್ತ ನಿಗಾ ವಹಿಸಬೇಕು. ಬೆಳೆಗಳ ಸಮರ್ಪಕ ಮತ್ತು ಸುವ್ಯವಸ್ಥಿತ ದಾಸ್ತಾನಿಗೆ ಅಗತ್ಯ ಗೋದಾಮುಗಳ ವ್ಯವಸ್ಥೆಯನ್ನು ಮಾಡಬೇಕು. ಮಾರುಕಟ್ಟೆಯಲ್ಲಿ ಈ ವಸ್ತುಗಳ ಅಭಾವ ಎದುರಾದಲ್ಲಿ ತನ್ನ ದಾಸ್ತಾನಿನಲ್ಲಿರುವ ಸರಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಏರು ಹಾದಿಯನ್ನು ಹಿಡಿದು ಆರ್ಥಿಕತೆಯ ನಾಗಾಲೋಟಕ್ಕೆ ಕಡಿವಾಣ ಹಾಕಲಿದೆ.