Advertisement

Significant Agreement: ವನ-ವನ್ಯಜೀವಿ ಸಂರಕ್ಷಣೆಗೆ ಯತ್ನ: ಸಚಿವ ಈಶ್ವರ ಖಂಡ್ರೆ

11:57 PM Sep 27, 2024 | Team Udayavani |

ವಿಜಯವಾಡ: ಅರಣ್ಯ, ವನ್ಯಜೀವಿ ಮತ್ತು ಪರಿಸರ ಇಡೀ ಜಗತ್ತಿನ ಸಂಪತ್ತಾಗಿದ್ದು, ಇವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳಲ್ಲಿ ವನ, ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶ ಒಗ್ಗೂಡಿ ಶ್ರಮಿಸಲಿವೆ ಎಂದು ಕರ್ನಾಟಕದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ವಿಜಯವಾಡದಲ್ಲಿ ಶುಕ್ರವಾರ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್‌ ಕಲ್ಯಾಣ್‌ ಅವರೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು ಮಾತನಾಡಿ, ಪರಿಸರ-ಅರಣ್ಯ ಮತ್ತು ವನ್ಯಜೀವಿ ನಿರ್ವಹಣೆಯಲ್ಲಿ ಹಲವು ಪ್ರಮುಖ ಸವಾಲುಗಳಿವೆ. ಇವುಗಳನ್ನು ಎದುರಿಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಅರಣ್ಯ ಇಲಾಖೆಗಳು ಒಗ್ಗೂಡಿವೆ ಎಂದು ತಿಳಿಸಿದರು.

ಎರಡೂ ರಾಜ್ಯಗಳ ಮಧ್ಯೆ ಹಲವು ತಿಳಿವಳಿಕೆ ಮಹತ್ವದ ಒಪ್ಪಂದಗಳಿಗೆ ಪವನ್‌ ಕಲ್ಯಾಣ್‌ ಮತ್ತು ತಮ್ಮ ಸಮ್ಮುಖದಲ್ಲಿ ಸಹಿ ಹಾಕಲಾಗುತ್ತಿದೆ. ಇದರಲ್ಲಿ ವನ್ಯಜೀವಿಗಳನ್ನು ರಕ್ಷಿಸಲು, ನಮ್ಮ ಕಾಡುಗಳನ್ನು ಸಂರಕ್ಷಿಸಲು ಮತ್ತು ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವಾಸಿಸುವ ಜನ ಸಮುದಾಯಗಳು ಎದುರಿಸುತ್ತಿರುವ ಸಂಕೀರ್ಣ ಸವಾಲುಗಳನ್ನು ತಗ್ಗಿಸಲು ಸಾಮೂಹಿಕ ಪ್ರಯತ್ನ ಮಾಡುವ ಸಂಕಲ್ಪವೂ ಸೇರಿದೆ ಎಂದರು.

ಈ ತಿಳಿವಳಿಕೆ ಒಪ್ಪಂದಗಳಿಂದ ಕರ್ನಾಟಕ ಗಡಿ ಭಾಗದಲ್ಲಿ ಮಾನವ-ಆನೆ ಸಂಘರ್ಷ ತಗ್ಗುವುದಲ್ಲದೆ, ವನ್ಯಜೀವಿಗಳ ಅಕ್ರಮ ಬೇಟೆ, ಕಳ್ಳಸಾಗಣೆಗೂ ಕಡಿವಾಣ ಬೀಳಲಿದೆ. ಜತೆಗೆ ಅರಣ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ನಿಯೋಜನೆಯಂತಹ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಬಲಪಡಿಸುತ್ತದೆ ಎಂದು ಖಂಡ್ರೆ ಹೇಳಿದರು.
ಕರ್ನಾಟಕವು ಅರಣ್ಯ ನಿರ್ವಹಣೆಯಲ್ಲಿ ಹಲವಾರು ಮಾಹಿತಿ ತಂತ್ರಜ್ಞಾನ-ಐಟಿ ಉಪಕ್ರಮಗಳನ್ನು ಪ್ರಾರಂಭಿಸಿದೆ. ಇದು ವನ್ಯಜೀವಿಗಳ ಮೇಲ್ವಿಚಾರಣೆ, ಕಾನೂನುಬಾಹಿರ ಚಟುವಟಿಕೆ ತಡೆಗೆ ಸಹಕಾರಿಯಾಗಿದೆ. ಒಟ್ಟಾರೆ ಅರಣ್ಯ ನಿರ್ವಹಣೆ ಆಡಳಿತವನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಇವುಗಳ ಬಲವರ್ಧನೆಗೆ ಎರಡೂ ರಾಜ್ಯಗಳು ಶ್ರಮಿಸಲಿವೆ ಎಂದರು.

ಎರಡೂ ರಾಜ್ಯಗಳ ನಡುವಿನ ಪಾಲುದಾರಿಕೆಯ ಮೂಲಕ, ಕರ್ನಾಟಕವು ಆಂಧ್ರ ಪ್ರದೇಶದೊಂದಿಗೆ ಸಹಕರಿಸಿ ಪರಿಸರ ಪ್ರವಾಸೋದ್ಯಮ ಉಪಕ್ರಮಗಳನ್ನು ಬಲಪಡಿಸುತ್ತದೆ. ಇದು ಜನರಿಗೆ ಪ್ರಯೋಜನವನ್ನು ನೀಡುವುದಲ್ಲದೆ ವನ್ಯಜೀವಿ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಖಂಡ್ರೆ ತಿಳಿಸಿದರು.

Advertisement

ಪವನ್‌ಗೆ ‘ನಂದಿನಿ’ ಉಡುಗೊರೆ
ಇದೇ ವೇಳೆ ಪವನ್‌ ಕಲ್ಯಾಣ್‌ ಅವರಿಗೆ ಈಶ್ವರ ಖಂಡ್ರೆ ಅವರು ರಾಜ್ಯದ ಹೆಮ್ಮೆಯ “ನಂದಿನಿ’ ಕ್ಷೀರೋತ್ಪನ್ನಗಳನ್ನು ಉಡುಗೊರೆಯಾಗಿ ನೀಡಿದರು. “ನಂದಿನಿ’ ಮೊಸರು, ತುಪ್ಪ, ಪೇಡ, ಮೈಸೂರು ಪಾಕ್‌ ಸೇರಿದಂತೆ ಹಲವು ಉತ್ಪನ್ನಗಳಿದ್ದ ಉಡುಗೊರೆಯ ಗುತ್ಛವನ್ನು ಪವನ್‌ ಕಲ್ಯಾಣ್‌ ಅವರಿಗೆ ನೀಡಿದರು ಮತ್ತು ರೇಷ್ಮೆ ಗೂಡಿನಿಂದ ತಯಾರಿಸಿದ ಮಾಲೆ ಅರ್ಪಿಸುವ ಮೂಲಕ ಕರ್ನಾಟಕದ ಹಿರಿಮೆಯನ್ನು ಸಾರಿದರು.

ಪುಂಡಾನೆಗಳ ಸೆರೆಗೆ ಆಂಧ್ರಕ್ಕೆ 4 ಕುಮ್ಕಿ ಆನೆ
ವಿಜಯವಾಡ: ಆಂಧ್ರಪ್ರದೇಶದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಸಾವು-ನೋವು ಸಂಭವಿಸುತ್ತಿದೆ. ರೈತರು ಕಷ್ಟ ಪಟ್ಟು ಬೆಳೆದ ಬೆಳೆ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುಂಡಾನೆಗಳ ಸೆರೆಗೆ ಮಾನವೀಯ ನೆಲೆಗಟ್ಟಿನಲ್ಲಿ ಕರ್ನಾಟಕದ ನಾಲ್ಕು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ನೀಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ವಿಜಯವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ದಸರಾ ಮಹೋತ್ಸವದಲ್ಲಿ ಭಾಗಿಯಾಗುವ ಆನೆಗಳ ಬಗ್ಗೆ ಜನರಲ್ಲಿ ಭಾವನಾತ್ಮಕ ನಂಟಿರುತ್ತದೆ. ಹೀಗಾಗಿ ದಸರಾದಲ್ಲಿ ಭಾಗಿಯಾದ ಯಾವುದೇ ಆನೆಯನ್ನಾಗಲೀ, ಮುಂಬರುವ ದಸರಾ ಮಹೋತ್ಸವಕ್ಕಾಗಿ ಗುರುತಿಸಲಾದ ಯಾವುದೇ ಕುಮ್ಕಿ ಆನೆಯನ್ನೂ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next