Advertisement

UV Fusion: ಅನ್ನದ ಮಹತ್ವ

11:09 AM Oct 02, 2023 | Team Udayavani |

ಅದು ನಾನು ಮೂರನೇ ತರಗತಿ ಓದುತ್ತಿದ್ದ ಸಮಯ. ಅಮ್ಮ ನಾಗರ ಪಂಚಮಿ ಹಬ್ಬದ ಸಲುವಾಗಿ ವಿವಿಧ ತಿಂಡಿಗಳನ್ನು ಮಾಡುತ್ತಿದ್ದರು. ನಾನು ಇನ್ನೂ  ಚಿಕ್ಕವನಿದ್ದಿದ್ದರಿಂದ ಹಬ್ಬ ಹರಿದಿನಗಳ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ನಾನು ಹಾಗೂ ನನ್ನ ತಮ್ಮ ನಾಳೆಗೆ ಹಬ್ಬವನ್ನು ಆಚರಿಸುವ ಉತ್ಸಾಹದಲ್ಲಿ ಇದ್ದೆವು.

Advertisement

ನಿಜ ನನ್ನ ಅಮ್ಮ ನನಗಾಗಲಿ ನನ್ನ ತಮ್ಮನಿಗಾಗಲಿ ಯಾವುದೇ ರೀತಿಯ ಕುಂದು ಕೊರತೆಗಳನ್ನು ಮಾಡದೆ ಅತ್ಯಂತ ಮುದ್ದಿನಿಂದ ಸಾಕಿದ್ದಳು. ಅಮ್ಮನಿಗೆ ನನ್ನ ಮೇಲೆ ಸ್ವಲ್ಪ ಪ್ರೀತಿ ಜಾಸ್ತಿ.

ನಾಗರ ಪಂಚಮಿದ್ದಿದ್ದರಿಂದ ನಮ್ಮಿಬ್ಬರಿಗೂ ಹೊಸ ಬಟ್ಟೆಗಳನ್ನು ತಂದಿದ್ದಳು. ಆದರೆ ನನಗೆ ಅಮ್ಮ ತಂದಿದ್ದ ಬಟ್ಟೆ ಇಷ್ಟವಾಗಲಿಲ್ಲ. ಅದಕ್ಕಾಗಿ ನಾನು ಅಮ್ಮನ ಮೇಲೆ ಸಿಟ್ಟಿನಿಂದ ರೇಗಿ ಹೋದೆ, ಅವರನ್ನು ಮಾತನಾಡಿಸದೆ ಅಳಲಾರಂಭಿಸಿದೆ. ಆದರೆ ಎಷ್ಟಾದರೂ ಅಮ್ಮ ಅಲ್ಲವೇ ಕೊನೆಗೆ ಅವರೇ ನನ್ನ ಬಳಿ ಬಂದು ಕಣ್ಣೀರು ಒರೆಸಿ ಪ್ರೀತಿಯಿಂದ ಸಮಾಧಾನ ಮಾಡಿದರು.

ಅಂದು ಅಮ್ಮ ಹಬ್ಬದ ಸಲುವಾಗಿ ರುಚಿ ರುಚಿಯಾದ ಕಟ್ಟಿನ ಸಾರು, ಅನ್ನ, ಕಡಬು, ಪಾಯಸ, ಹೋಳಿಗೆ ಹಾಗೂ ವಿವಿಧ ನಮಗಿಷ್ಟವಾದ ತಿಂಡಿಗಳನ್ನು ಮಾಡಿದ್ದರು. ಅಂದು ಅವಳು ಬಡಿಸಿದ ಊಟ ಎಷ್ಟು ರುಚಿಯಾಗಿದ್ದರೆ ಅದನ್ನು ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರೂರುತ್ತದೆ.

ನನಗೆ ಈಗಲೂ ನೆನಪಿದೆ ಅಮ್ಮ ಅಷ್ಟು ರುಚಿಯಾಗಿ ಅಡುಗೆ  ಮಾಡಿದ್ದರು. ನಾನು ಮಾತ್ರ ಅರ್ಧಂಬರ್ಧ ಊಟ ಮಾಡಿ ಉಳಿದಿದ್ದನ್ನು ಅಮ್ಮನಿಗೆ ತಿಳಿಯದ ಹಾಗೆ ಬಿಸಾಡಿದ್ದೇ. ಕೊನೆಗೆ ನನ್ನ ತಮ್ಮ ಅಮ್ಮನಿಗೆ ಈ ವಿಷಯ ಹೇಳಿದ, ಆದರೆ ಅಮ್ಮ ನನ್ನನ್ನು ಬೈಯಲಿಲ್ಲ,ಬದಲಾಗಿ ಜಗತ್ತಿನಲ್ಲಿ ಎಷ್ಟು ಜನರಿಗೆ ತಿನ್ನಲು ಅನ್ನವಿಲ್ಲ. ಅನ್ನ ಎಂದರೆ ದೇವರು ಅದನ್ನು ಗೌರವಿಸಬೇಕು ಎಂದು ಬುದ್ಧಿವಾದ ಹೇಳಿದರು.

Advertisement

ಆದರೂ ನನಗೆ ಅವತ್ತು ಅವರು ಹೇಳಿದ ಮಾತುಗಳು ಅರಿವಿಗೆ ಬರಲಿಲ್ಲ. ಆದರೆ ಮುಂದೆ ಬರುವ ದಿನಗಳು ನನಗೆ ಅನ್ನದ ಬೆಲೆಯನ್ನು ತಿಳಿಸಿಕೊಟ್ಟವು. ನಾನು 5ನೇ ತರಗತಿಯಲ್ಲಿರುವಾಗ ಅಮ್ಮ ನಮ್ಮನ್ನೆಲ್ಲ ಅಗಲಿದರು.

ಇಂದಿಗೆ ಸರಿಯಾಗಿ ಹತ್ತು ವರ್ಷಗಳು ಕಳೆದಿವೆ ಅಂದು ಅವರು ಅನ್ನದ ಮಹತ್ವದ ಬಗ್ಗೆ ನನಗೆ ಹೇಳಿದ್ದರು. ಆದರೆ ಅದು ಇಂದು ನನಗೆ  ಅರಿವಾಗಿದೆ. ಎಷ್ಟೋ ಜನ  ಒಂದು ಹೊತ್ತು ಊಟ ಮಾಡಿದರೆ ಇನ್ನೆರಡು ಹೊತ್ತು ಉಪವಾಸದಿಂದ ಚಳಪಡಿಸುತ್ತಿದ್ದಾರೆ.

ಎಷ್ಟು ಮಕ್ಕಳಿಗೆ ಹಬ್ಬದ ದಿನ ಹೊಸ ಬಟ್ಟೆಗಳನ್ನು ಕೊಡಿಸುವವರಿರುವುದಿಲ್ಲ, ಎಷ್ಟು ಮಕ್ಕಳು ತಮಗೆ ಬೇಕಾಗಿರುವ ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಆದರೆ ಇಂದು ನಮ್ಮ ಪಾಲಕರು ನಮ್ಮ ಬೇಕು-ಬೇಡಿಕೆಗಳನ್ನು ನಮಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡು ಅದನ್ನು ನಾವು ಕೇಳುವ ಮುಂಚೆ ಪೂರೈಸುತ್ತಿದ್ದಾರೆ.

ತಂದೆ ತಾಯಿಂದಿರು ನಮ್ಮ ಮೇಲೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅವರನ್ನು ಎಂದೂ ನಿರಾಶೆ ಮಾಡಬೇಡಿ.  ನಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಸೋತು ಕೆಟ್ಟ ನಿರ್ಧಾರಗಳನ್ನು  ತೆಗೆದುಕೊಳ್ಳುವ ಮುಂಚೆ ನಮ್ಮ ತಂದೆ ತಾಯಿಯಂದಿರ ನೆನಪಾಗಲಿ.

ನಮಗಾಗಿ ಅವರು ಮಾಡಿರುವ ಹಾಗೂ ಮಾಡುತ್ತಿರುವ ತ್ಯಾಗಗಳ ಮುಂದೆ ನಮ್ಮ ಕಷ್ಟಗಳೇನು ಅಲ್ಲ. ಆದ್ದರಿಂದ ಅವರ ತ್ಯಾಗ ಪರಿಶ್ರಮಕ್ಕೆ ನಾವು ಎಂದಿಗೂ ಋಣಿಯಾಗಿರಬೇಕು ಅವರನ್ನು ಗೌರವದಿಂದ ಕಾಣಬೇಕು.

ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವೇ ಎನ್ನುವಂತೆ ಮುಂದೊಂದು ದಿನ ಒಳ್ಳೆಯ ದಿನ ಬಂದೇ ಬರುತ್ತದೆ. ಆ ದಿನಕ್ಕಾಗಿ ಮಾಡಬೇಕಾದ ಪ್ರಯತ್ನ ಪರಿಶ್ರಮವನ್ನು ಇವತ್ತಿನಿಂದಲೇ ಆರಂಭಿಸೋಣ.

-ಕಾರ್ತಿಕ ಹಳಿಜೋಳ

ಎಂ.ಎಂ. ಆರ್ಟ್ಸ್ ಆ್ಯಂಡ್‌ ಸೈನ್ಸ್‌ ಕಾಲೇಜು, ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next