Advertisement

ಸೇನೆ ನಿಯೋಜನೆ ಸ್ನೇಹಕ್ಕೆ ಅಡ್ಡಿ; ಚೀನ ವಿದೇಶಾಂಗ ಸಚಿವರಿಗೆ ಭಾರತದ ಖಡಕ್‌ ಮಾತು

02:16 AM Mar 26, 2022 | Team Udayavani |

ಹೊಸದಿಲ್ಲಿ: ಗಡಿಯಲ್ಲಿ ಹೆಚ್ಚು ವರಿ ಸೇನೆಯನ್ನು ಜಮಾಯಿಸಿ ಸ್ನೇಹವನ್ನು ಉತ್ತಮ ಗೊಳಿಸಬೇಕು ಎಂದು ಬಯಸುವುದು ಸರಿಯಲ್ಲ. ಇಂಥ ಕ್ರಮದಿಂದ ಉಭಯ ದೇಶಗಳ ಸ್ನೇಹ ಗಟ್ಟಿಯಾಗಲು ಖಂಡಿತಾ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ಶುಕ್ರವಾರ ಚೀನದ ವಿದೇಶಾಂಗ ಸಚಿವರಿಗೆ ಹೇಳಿದರು.

Advertisement

ಪೂರ್ವ ಲಡಾಖ್‌ನಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು ಚೀನ ಸಂಪೂರ್ಣವಾಗಿ ಹಿಂಪಡೆಯುವ ವರೆಗೂ ಉಭಯ ದೇಶಗಳ ನಡುವೆ “ಸಹಜ’ ಬಾಂಧವ್ಯ ಏರ್ಪಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಚೀನದ ವಿದೇಶಾಂಗ ಸಚಿವ ವಾಂಗ್‌ ಯಿ ಅವರು ಗುರುವಾರ ರಾತ್ರಿ ಭಾರತಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದು, ಶುಕ್ರವಾರ ಸಚಿವ ಜೈಶಂಕರ್‌ ಹಾಗೂ ಎನ್‌ಎಸ್‌ಎ ದೋವಲ್‌ ಜತೆ ಮಾತುಕತೆ ನಡೆಸಿದ್ದಾರೆ.

ಈ ಮೂಲಕ 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಆರಂಭವಾದ ಗಡಿ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಎರಡೂ ದೇಶಗಳ ನಡುವೆ ಉನ್ನತ ಮಟ್ಟದ ಮಾತುಕತೆ ನಡೆದಂತಾಗಿದೆ.

ಸಂಬಂಧ ಸಹಜವಾಗಿಲ್ಲ
ಸುಮಾರು 3 ತಾಸುಗಳ ಮಾತುಕತೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜೈಶಂಕರ್‌, ಸದ್ಯಕ್ಕೆ ಎರಡೂ ದೇಶಗಳ ನಡುವಿನ ಸಂಬಂಧವು “ಸಹಜ’ವಾಗಿದೆಯೇ ಎಂದು ನೀವು ಪ್ರಶ್ನಿಸಿದರೆ, ನಾನು “ಇಲ್ಲ’ ಎಂದು ಉತ್ತರಿಸುತ್ತೇನೆ. ಗಡಿಯಲ್ಲಿ ಚೀನ ಸೇನೆ ಜಮಾವಣೆ ಯಾಗಿರುವುದೇ ಉಭಯ ದೇಶಗಳ ನಡುವಿನ ಸಹಜ ಸಂಬಂಧಕ್ಕೆ ಪ್ರಮುಖ ತಡೆಯಾಗಿದೆ. 2020ರ ಎಪ್ರಿಲ್‌ನಿಂದಲೂ ಗಡಿಯಲ್ಲಿ ಚೀನದ ಸೇನೆ ನಿಯೋಜನೆ ಗೊಂಡಿರುವುದು ಹಲವು ರೀತಿಯ ಉದ್ವಿಗ್ನತೆ, ಸಂಘರ್ಷಕ್ಕೆ ಕಾರಣವಾಗಿದೆ. ಅದನ್ನು ನಾವು ಸಹಜ ಸಂಬಂಧ ಎನ್ನಲಾಗುವುದಿಲ್ಲ. ಈ ಸಮಸ್ಯೆಯನ್ನು ಪೂರ್ಣಪ್ರಮಾಣದಲ್ಲಿ ಪರಿಹರಿಸಿಕೊಳ್ಳುವ ಪ್ರಯತ್ನವನ್ನು ಮಾತುಕತೆ ವೇಳೆ ಮಾಡಲಾಗಿದೆ. ಈ ವಿಚಾರದ ಬಗ್ಗೆ ವಾಂಗ್‌ ಯಿ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಭಾರತದ 16 ಮಂದಿ ಮೀನುಗಾರರನ್ನು ವಾಪಸ್‌ ಕರೆಯಿಸಿಕೊಳ್ಳಲು ಭಾರತ ಬದ್ಧ: ಕೇಂದ್ರ

Advertisement

ಕಾಮಗಾರಿ ಪ್ರಗತಿಯಲ್ಲಿದೆ
ಪೂರ್ವ ಲಡಾಖ್‌ನ ಪ್ರಸ್ತುತ ಪರಿಸ್ಥಿತಿಯು “ಪ್ರಗತಿಯಲ್ಲಿರುವ ಕಾಮಗಾರಿ’ಯಂತಿದೆ. ಆದರೆ, ಈ ಪ್ರಗತಿಯು ಅಗತ್ಯಕ್ಕಿಂತ ನಿಧಾನಗತಿಯಲ್ಲಿದೆ. ಅದಕ್ಕೆ ವೇಗ ನೀಡಬೇಕು ಎನ್ನುವುದೇ ಇಂದಿನ ಮಾತುಕತೆಯ ಉದ್ದೇಶವಾಗಿತ್ತು ಎಂದೂ ಜೈಶಂಕರ್‌ ಹೇಳಿದ್ದಾರೆ.

ಉಭಯ ದೇಶಗಳ ಹಿರಿಯ ಸೇನಾ ಕಮಾಂಡರ್‌ಗಳ ನಡುವೆ ಈಗಾಗಲೇ 15 ಸುತ್ತುಗಳ ಮಾತುಕತೆ ನಡೆದಿವೆ. ಕೆಲವು ಸಂಘರ್ಷ ವಲಯಗಳಿಂದ ಎರಡೂ ದೇಶಗಳ ಸೇನೆಗಳು ವಾಪಸಾಗಿವೆ. ಆದರೆ ಇನ್ನೂ ಕೆಲವು ಪ್ರದೇಶಗಳಲ್ಲಿ ಪರಿಸ್ಥಿತಿ ಹಾಗೆಯೇ ಇದೆ. ಮಾತುಕತೆ ನಡೆಯಬೇಕೆಂದರೆ, ಸೇನೆ ಜಮಾವಣೆಯನ್ನು ಹಿಂಪಡೆಯ ಬೇಕು. ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯೇ ಸ್ಥಿರ ಹಾಗೂ ಸಹಕಾರಯುತ ಬಾಂಧವ್ಯದ ಅಡಿಪಾಯವಾಗಿದೆ ಎಂದಿದ್ದಾರೆ.

ಶೀಘ್ರ ಪರಿಹಾರಕ್ಕೆ ಆಗ್ರಹ
ಪೂರ್ವ ಲಡಾಖ್‌ನ ಉಳಿದ ಕಡೆಗಳಿಂದಲೂ ಸೇನೆಗಳನ್ನು ಹಿಂಪಡೆ ಯುವ ನಿಟ್ಟಿನಲ್ಲಿ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಚೀನ ವಿದೇಶಾಂಗ ಸಚಿವ ವಾಂಗ್‌ ಯಿ ಅವರಿಗೆ ದೋವಲ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next