Advertisement

Goa; ಡ್ರಗ್ಸ್ ಜಾಲ ಭೇದಿಸಿದ ಪೊಲೀಸರು: ವಿದೇಶಿ ಯುವತಿ ಬಂಧನ

08:33 PM May 16, 2024 | Team Udayavani |

ಪಣಜಿ: ಗೋವಾ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಗೋವಾದಲ್ಲಿ ಡ್ರಗ್ ಪೆಡ್ಲರ್ ಗಳು ಮತ್ತು ಡೀಲರ್ ಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಹಲವು ಬಾರಿ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಗೋವಾ ಪೊಲೀಸರ ಮಾದಕ ದ್ರವ್ಯ ನಿಗ್ರಹ ದಳವು 150 ಗ್ರಾಂ ಆಂಫೆಟಮೈನ್‍ನೊಂದಿಗೆ ನೈಜೀರಿಯಾದ ಯುವತಿಯನ್ನು ಬಂಧಿಸಿದೆ ಮತ್ತು ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್ ಅನ್ನು ಭೇದಿಸಿದ್ದಾರೆ.

Advertisement

ಸಿಕ್ಕಿರುವ ಮಾಹಿತಿಯ ಪ್ರಕಾರ, ನೈಜೀರಿಯಾದ ಯುವತಿ ಫೈತ್ ಚಿಮೆರಿ (24) ಬೆಂಗಳೂರಿನಿಂದ ಗೋವಾಕ್ಕೆ ಅಂತರರಾಜ್ಯ ಬಸ್‍ನಲ್ಲಿ ಗಿರಿ ಮ್ಹಾಪ್ಸಾದ ಗ್ರೀನ್ ಪಾರ್ಕ್ ಹೋಟೆಲ್‍ಗೆ ಬಂದರು. ಅಲ್ಲಿ ಬಲೆ ಬೀಸಿದ ಮಾದಕ ದ್ರವ್ಯ ನಿಗ್ರಹ ದಳ ಆಕೆಯನ್ನು ಬಂಧಿಸಿದೆ. ಆಕೆಯ ಲಗೇಜ್ ತಪಾಸಣೆ ನಡೆಸಿದಾಗ 15.10 ಲಕ್ಷ ಮೌಲ್ಯದ 150 ಗ್ರಾಂ ಆಂಫೆಟಮೈನ್ ಮತ್ತು 100 ಗ್ರಾಂ ಗಾಂಜಾ ಪತ್ತೆಯಾಗಿದೆ. ವಿಚಾರಣೆ ವೇಳೆ ಆಕೆ ಬೆಂಗಳೂರಿನಿಂದ ಗೋವಾಕ್ಕೆ ಸರಕು ಪೂರೈಸಲು ಬಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

ತನಿಖೆಯ ನಂತರ, ಯುವತಿ ಲಕ್ನೋ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದಳು ಎಂದು ತಿಳಿದುಬಂದಿದೆ. ಆದರೆ, ಆಕೆ ಲಕ್ನೋಗೆ ಹೋಗಲೇ ಇಲ್ಲ. ಬೆಂಗಳೂರಿನಲ್ಲಿ ತಂಗಿದ್ದ ಆಕೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾಳೆ ಎಂದು ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ದಿನಗಳ ಹಿಂದೆ, ಮಾದಕ ದ್ರವ್ಯ ನಿಗ್ರಹ ದಳವು ಬೋರಿ-ಫೋಂಡಾದಲ್ಲಿ ಹೈಡ್ರೋಪೋನಿಕ್ ಗಾಂಜಾ ಪ್ರಯೋಗಾಲಯವನ್ನು ಭೇದಿಸಿತ್ತು ಮತ್ತು ಅಕ್ರಮ ಗಾಂಜಾ ಕೃಷಿಗಾಗಿ ಯುವಕನನ್ನು ಬಂಧಿಸಿತ್ತು.

ಒಟ್ಟಾರೆ, ಮಾದಕ ದ್ರವ್ಯ ನಿಗ್ರಹ ದಳವು ಈ ವರ್ಷ ಗೋವಾದಲ್ಲಿ 3.77 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದು, ಸ್ಥಳೀಯರು, ಭಾರತೀಯರು ಮತ್ತು ವಿದೇಶಿಗರು ಸೇರಿದಂತೆ 9 ಜನರನ್ನು ಬಂಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next