Advertisement

High Court: ಕ್ರಿಮಿನಲ್‌ ಕೇಸ್‌ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

11:18 AM Nov 02, 2024 | Team Udayavani |

ಬೆಂಗಳೂರು: ಕ್ರಿಮಿನಲ್‌ ಕೇಸ್‌ ಡೈರಿಯ ಪ್ರತೀ ಪುಟಕ್ಕೂ ತನಿಖಾಧಿಕಾರಿಯ ಸಹಿ ಹಾಕಲು ನಿರ್ದೇಶಿಸಬೇಕು ಎಂಬ ಕೊಲೆ ಪ್ರಕರಣದ ಆರೋಪಿಯೊಬ್ಬರ ಮನವಿಯನ್ನು ತಳ್ಳಿಹಾಕಿರುವ ಹೈಕೋರ್ಟ್‌ ಆ ಅರ್ಜಿಯನ್ನು ವಜಾಗೊಳಿಸಿದೆ.

Advertisement

ಸದ್ಯ ಇರುವ ಕಾನೂನುಗಳಲ್ಲಿ ಕೇಸ್‌ ಡೈರಿಯಲ್ಲಿ ಸಹಿ ಹಾಕಲು ಅವಕಾಶ ನೀಡುವಂತಹ ನಿಯಮಗಳು ಇಲ್ಲದಿರುವಾಗ, ಹಾಲಿ ಇರುವ ಕಾನೂನುಗಳನ್ನು ವಿಶ್ಲೇಷಣೆ ಮಾಡಬಹುದೇ ಹೊರತು, ವಿಶ್ಲೇಷಣೆ ಹೆಸರಲ್ಲಿ ನ್ಯಾಯಾಲಯಗಳಿಂದ ಹೊಸ ಕಾನೂನು ಜಾರಿಗೊಳಿಸಲಾಗದು ಎಂದೂ ಹೈಕೋರ್ಟ್‌ ಹೇಳಿದೆ.

2 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಮೊಹಮ್ಮದ್‌ ಶಿಯಾಬ್‌ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾ| ಎನ್‌.ವಿ. ಅಂಜಾರಿಯಾ ಮತ್ತು ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.

ತನಿಖಾ ಸಂಸ್ಥೆಗಳು ನಿರ್ವಹಿಸುತ್ತಿರುವ ಕೇಸ್‌ ಡೈರಿಯನ್ನು ತಿದ್ದುವ ಅಥವಾ ತಿರುಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅದರ ಪ್ರತೀಪುಟಕ್ಕೂ ತನಿಖಾಧಿಕಾರಿಯ ಸಹಿ ಹಾಕಲು ನಿರ್ದೇ ಶನ ನೀಡಬೇಕೆಂದು ಕೋರಿ ಆರೋಪಿ ಶಿಯಾಬ್‌ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ. ಆದರೆ, ನಿಯಮದಲ್ಲಿ ಎಲ್ಲೂ ಪ್ರತೀ ಪುಟದಲ್ಲೂ ತನಿಖಾಧಿಕಾರಿ ಸಹಿ ಹಾಕಬೇಕು ಎಂಬ ಉಲ್ಲೇಖವಿಲ್ಲ. ಆದ್ದರಿಂದ ನ್ಯಾಯಾಲಯ ಹಾಗೆ ಮಾಡುವಂತೆ ಪದಗಳನ್ನು ಸೇರ್ಪಡೆ ಮಾಡಲಾಗದು. ಹಾಗಾಗಿ ಅರ್ಜಿದಾರರ ಮನವಿ ಮಾನ್ಯ ಮಾಡಲಾಗದು ಎಂದು ನ್ಯಾಯಾಲಯ ಆದೇಶಿಸಿದೆ.

Advertisement

ವ್ಯಾಪ್ತಿ ಮೀರಿ ಕಾನೂನು ಸೃಷ್ಟಿಸಲಾಗದು ನ್ಯಾಯಾಲಯಕ್ಕೆ ಶಾಸನ ಬದ್ಧ ನಿಯಮಗಳ ಅನ್ವಯ ಶಾಸನಗಳಲ್ಲಿರುವ ಪದಗಳನ್ನು ವ್ಯಾಖ್ಯಾನ ಅಥವಾ ವಿಶ್ಲೇಷಣೆ ಮಾಡುವ ಅಧಿಕಾರವಿದೆ. ಕೋರ್ಟ್‌ ತನ್ನ ವ್ಯಾಪ್ತಿಯನ್ನು ಮೀರಿ ಕಾನೂನು ಸೃಷ್ಟಿಸಲಾಗದು. ಶಾಸನವನ್ನು ರಚಿಸಿದ ಅನಂತರ ಅದರಲ್ಲಿರುವ ಪದಗಳನ್ನು ಹೊರತುಪಡಿಸಿ ನ್ಯಾಯಾಲಯವೇ ಹೆಚ್ಚುವರಿ ಪದಗಳನ್ನು ಸೇರ್ಪಡೆ ಮಾಡಲಾಗದು ಎಂದು ನ್ಯಾಯಪೀಠ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next