Advertisement

ಅಂಗನವಾಡಿ ಕಾರ್ಯಕರ್ತೆಯರಿಂದ ಸಹಿ ಸಂಗ್ರಹ ಚಳವಳಿ

09:56 AM Jun 11, 2018 | Team Udayavani |

ಕಲಬುರಗಿ: ನೇರ ನಗದು ವರ್ಗಾವಣೆ, ಅನುದಾನ ಕಡಿತ, ಖಾಸಗಿ ನರ್ಸರಿಗಳನ್ನು ಹೆಚ್ಚೆಚ್ಚು ತೆರೆಯಲು ಅವಕಾಶ
ಮಾಡಿಕೊಡುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸಾಮೂಹಿಕ ಸಹಿ
ಸಂಗ್ರಹ ಚಳವಳಿ ನಡೆಯಿತು.

Advertisement

ಮಕ್ಕಳ ಬೆಳವಣಿಗೆ ಅಪೌಷ್ಟಿಕತೆಗೊಳಗಾಗಿ ಕುಂಠಿತವಾಗಬಾರದು ಎನ್ನುವ ಉದ್ದೇಶದಿಂದ 6 ವರ್ಷದೊಳಗಿನ ಮಕ್ಕಳ ದೈಹಿಕ ಬೆಳವಣಿಗೆಗೆ ಶೇ.40, ಮಾನಸಿಕ ಬೆಳವಣಿಗೆ ಶೇ.80 ಆಗುತ್ತದೆ. ಈ ವಯಸ್ಸಿನಲ್ಲಿ ಪೌಷ್ಟಿಕ ಆಹಾರ ಹಾಗೂ ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ನೀಡಲು ವಿಶ್ವಸಂಸ್ಥೆಯ ನೆರವಿನೊಂದಿಗೆ 1975 ರಲ್ಲಿ ಭಾರತ
ಸರ್ಕಾರ ಸಮಗ್ರ ಶಿಶು ಅಭಿವೃದ್ಧಿಯೋಜನೆ ಸ್ಥಾಪಿಸಿತ್ತು.

ಈಗ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಈ ಯೋಜನೆಯನ್ನು ಕಾಯಂ ಮಾಡುವ ಬದಲಿಗೆ 2014-15 ರಲ್ಲಿದ್ದ 18,391ಕೋಟಿ ರೂ.ದಿಂದ 2015-16ರಲ್ಲಿ 8754 ಕೋಟಿ ರೂ.ಗೆ ಇಳಿಸಿದೆ. ಈಗ ಕೇವಲ ಶೇ.25 ರಷ್ಟು ಅನುದಾನ ಮಾತ್ರ ನೀಡುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಆಹಾರ, ಆರೋಗ್ಯ, ಶಿಕ್ಷಣವನ್ನು ಖಾಸಗಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳ
ಹಿತಾಸಕ್ತಿಗಳಿಗೆ ಬಲಿ ನೀಡಲು ಇಂತಹ ಯೋಜನೆಗಳಿಗೆ ಅನುದಾನ ಕಡಿತ ಮಾಡುತ್ತಿದೆ. ಮಾತ್ರವಲ್ಲದೇ
ಅಂಗನವಾಡಿ ಕೇಂದ್ರಗಳ ಉದ್ದೇಶಕ್ಕೆ ವಿರುದ್ಧವಾಗಿ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಗೆ
ಮುಂದಾಗಿರುವುದು ಸರಿಯಲ್ಲ ಎಂದರು. 

ವಿಶ್ವ ಆರೋಗ್ಯ ಸಂಸ್ಥೆಯ ಡೆಪ್ಯೂಟಿ ಡೈರೆಕ್ಟರ್‌ ಡಾ| ಸೌಮ್ಯ ಸ್ವಾಮಿನಾಥನ್‌ ಅವರು ಅಂಗನವಾಡಿಗಳಲ್ಲಿ ತಾಜಾ
ಬೇಯಿಸಿದ ಆಹಾರ ನೀಡಬೇಕು, ನಗದು ನೀಡಿದರೆ ನೇರ ಫಲಾನುಭವಿಗಳಿಗೆ ದಕ್ಕುವುದಿಲ್ಲ ಎಂಬ ವರದಿ
ನೀಡಿದ್ದರೂ ಕೇಂದ್ರ ಸರ್ಕಾರದ ನೀತಿ ಆಯೋಗ ಹಾಗೂ ಇಲಾಖೆಯ ಸಚಿವರಾದ ಮೇನಕಾ ಗಾಂಧಿ ಅವರು ನೇರ
ನಗದು ವರ್ಗಾವಣೆಯ ಆದೇಶ ಹೊರಡಿಸಿ , ಈಗಾಗಲೇ 4 ಪ್ರಾಜೆಕ್ಟ್ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದಾರೆ.

Advertisement

ಬಿಹಾರದಲ್ಲಿ ಸಂಪೂರ್ಣವಾಗಿ ಜಾರಿಗೆ ತರಲು ಅಲ್ಲಿನ ರಾಜ್ಯ ಸರ್ಕಾರ ಮುಂದಾಗಿದೆ. 48 ವರ್ಷಗಳ ಐಸಿಡಿಎಸ್‌
ಯೋಜನೆಯನ್ನು ಉಳಿಸಲು ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘವು ಸಾಮೂಹಿಕವಾಗಿ
ಸಹಿ ಸಂಗ್ರಹಿಸಿ ಸೆ.5 ರಂದು ಪ್ರಧಾನಮಂತ್ರಿಗೆ ಸಲ್ಲಿಸಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಶಾಂತಾ ಘಂಟಿ, ಗೌರಮ್ಮ ಪಾಟೀಲ, ದೇವಮ್ಮಾ ಯರಗಲ್‌, ಬಾಣಿ ಸುಭಾಶ್ಚಂದ್ರ, ಮಹಾದೇವಿ
ಪೋಲಕಪಳ್ಳಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next