ಕೊಪ್ಪಳ: ಕೇಂದ್ರ ಸರ್ಕಾರ ಜಾರಿಗೆ ತಂದ ಎನ್‌ಇಪಿ-2020 ವಿರೋಧಿಸಿ ಎಐಡಿಎಸ್‌ಒ ದೇಶಾದ್ಯಂತ ಕೋಟಿ ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದು, ಅದರ ಭಾಗವಾಗಿ ನಗರದ ಗವಿಮಠ ಮೈದಾನದಲ್ಲಿ ಸಹಿ ಸಂಗ್ರಹ ಅಭಿಯಾನಕ್ಕೆ ಅಖೀಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಎನ್‌ಇಪಿ-2020 ಶಿಕ್ಷಣದ ಖಾಸಗೀಕರಣ, ಕೋಮುವಾದೀಕರಣ, ವಾಣಿಜ್ಯೀಕರಣ ಹಾಗೂ ಕೇಂದ್ರೀಕರಣದ ನೀಲಿನಕ್ಷೆಯಾಗಿದೆ. ಇಲ್ಲಿ ಬಹುಭಾಷಾ ಪದ್ಧತಿ, ವೃತ್ತಿ ಶಿಕ್ಷಣ, ಧರ್ಮಾಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಮೇಲೆ ಕೆಟ್ಟಪರಿಣಾಮ ಬೀರಲಿದೆ. ಇದನ್ನು ಪ್ರತಿಯೊಬ್ಬರು ವಿರೋಧ ಮಾಡಬೇಕು. ನಾನು ಸಹ ಈ ಜನ ವಿರೋಧಿ, ಶಿಕ್ಷಣ ವಿರೋಧಿ ಎನ್‌ಇಪಿ ವಿರೋಧಿ ಸುವೆ ಎಂದರು.
ಎಐಡಿಎಸ್‌ಓ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗುರಳ್ಳಿ ರಾಜ ಅವರು ಮಾತನಾಡಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಅನುಷ್ಠಾನದ ವಿರುದ್ಧ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಹಲವು ಶಿಕ್ಷಣ ತಜ್ಞರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ವಿರೋಧದ ನಡುವೆಯೂ ಈ ನೀತಿಯನ್ನು ಇದೀಗ ಅನುಷ್ಠಾನ ಮಾಡಲಾಗುತ್ತಿದೆ. ಸಾರ್ವಜನಿಕ ಶಿಕ್ಷಣವನ್ನು ನಾಶಗೊಳಿಸಿ, ಶಿಕ್ಷಣ ಕ್ಷೇತ್ರದ ಸಂಪೂರ್ಣ ವ್ಯಾಪಾರೀಕರಣ ಗೊಳಿಸುವ ಉದ್ದೇಶದಿಂದಲೇ ಎನ್‌ಇಪಿ ಅಪ್ರಜಾತಾಂತ್ರಿಕವಾಗಿ ಹೇರಲಾಗುತ್ತಿದೆ ಎಂದರು.
ಆರಂಭದಿಂದಲೂ ಈ ಕರಾಳ ನೀತಿಯನ್ನು ಎಐಡಿಎಸ್‌ಒ ವಿರೋಧಿಸುತ್ತಾ ಬಂದಿದೆ. ಈ ಹೋರಾಟದ ಭಾಗವಾಗಿ ಅಖೀಲ ಭಾರತ ಸಮಿತಿ ನಾಯಕತ್ವದಲ್ಲಿ ದೇಶಾದ್ಯಂತ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನಕ್ಕೆ ಕರೆ ನೀಡಲಾಗಿದೆ. ರಾಜ್ಯದಲ್ಲಿನ ಸಹಿ ಸಂಗ್ರಹ ಅಭಿಯಾನಕ್ಕೆ ರಾಜ್ಯದ ಹಲವು ಗಣ್ಯರು, ಶಿಕ್ಷಣ ತಜ್ಞರು, ಸಾಹಿತಿಗಳು ತಮ್ಮ ಬೆಂಬಲ ಸೂಚಿಸಿದ್ದಾರೆ.
ಎನ್‌ಇಪಿ ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕರ್ನಾಟಕ ಸರ್ಕಾರ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಪ್ರಸ್ತುತ ಶೈಕ್ಷಣಿಕ ವರ್ಷ ಜಾರಿ ಮಾಡಿತು. ಆದರೆ ಪರೀಕ್ಷೆಗಳಿಗೆ ಇನ್ನು ಒಂದು ತಿಂಗಳು ಮಾತ್ರ ಉಳಿದಿದೆ ಎಂದಾಗಲೂ ಸರ್ಕಾರ ಮತ್ತು ವಿವಿಗಳು ನೂತನ ಕೋರ್ಸ್‌ಗೆ ಪೂರಕ ಪಠ್ಯಕ್ರಮ, ಎಲ್ಲ ವಿಷಯಗಳಿಗೂ ಸಂಬಂಧಪಟ್ಟಂತೆ ಪಠ್ಯಪುಸ್ತಕಗಳು ತಯಾರಿ ಮಾಡಿಲ್ಲ. ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿಗಳ ಕೊರತೆ, ತರಗತಿಗಳ ಕೊರತೆಯಿಂದಾಗಿ ಯಾವುದೇ ಸಮಗ್ರ ರೀತಿಯ ಅಧ್ಯಾಯಗಳು ನಡೆದಿಲ್ಲ. ಈ ಹಠಾತ್ ಹೇರಿಕೆಯು ರಾಜ್ಯದ ಪದವಿ ಶಿಕ್ಷಣದಲ್ಲಿ ಅತ್ಯಂತ ಗೊಂದಲ ಹಾಗೂ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂದರು.
ಎಐಡಿಎಸ್‌ಒ ಜಿಲ್ಲಾ ಸಂಚಾಲಕ ಗಂಗರಾಜ ಅಳ್ಳಳ್ಳಿ, ಎಐಡಿಎಸ್‌ಒ ಸದಸ್ಯ ಬಸವರಾಜ, ದುಗೇìಶ, ಮಂಜುನಾಥ, ಶ್ರೀಕಾಂತ, ಕಿರಣ ಹಾಗೂ ವಿದ್ಯಾರ್ಥಿಗಳಾದ ಉದಯ, ಕಳಕೇಶ, ವೀರೇಶ, ಅಭಿಷೇಕ, ಮಾರುತಿ, ಭೀಮೇಶ, ದೇವರಾಜ, ಹನುಮೇಶ, ರವಿ, ಮಹಾಂತೇಶ, ನಿಂಗರಾಜ, ಅಪ್ಪಣ್ಣ ಸೇರಿ ಇತರರು ಉಪಸ್ಥಿತರಿದ್ದರು.