Advertisement

ಮಾರ್ಚ್‌ ವೇಳೆಗೆ ಸಿಗ್ನಲ್‌ ಮುಕ್ತ ಮಾರ್ಗ

11:46 AM Aug 24, 2018 | Team Udayavani |

ಬೆಂಗಳೂರು: ಸಿಲ್ಕ್ಬೋರ್ಡ್‌ ಜಂಕ್ಷನ್‌ನಿಂದ ನಾಯಂಡಹಳ್ಳಿ ಜಂಕ್ಷನ್‌ವರೆಗಿನ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆ 2019ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದ್ದು, ಯೋಜನೆಯಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದು ಮೇಯರ್‌ ಆರ್‌.ಸಂಪತ್‌ರಾಜ್‌ ಹೇಳಿದರು.

Advertisement

ಹೊಸಕೆರೆಹಳ್ಳಿ ಬಳಿಯ ಮುತ್ತುರಾಜ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಅಂಡರ್‌ಪಾಸ್‌ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ಅವರು, ಸಂಚಾರ ದಟ್ಟಣೆ ನಿವಾರಣೆಗಾಗಿ ಸಿಗ್ನಲ್‌ ಫ್ರೀ ಕಾರಿಡಾರ್‌ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ತಾಂತ್ರಿಕ ಕಾರಣಗಳಿಂದ ಯೋಜನೆ ವಿಳಂಬವಾಗುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ವಾಹನಗಳ ಸಂಚಾರಕ್ಕಾಗಿ ಒಟ್ಟು 153 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ನಾಯಂಡ ಹಳ್ಳಿ ಜಂಕ್ಷನ್‌ನಿಂದ ಸಿಲ್ಕ… ಬೋರ್ಡ್‌ ಜಂಕ್ಷನ್‌ನವರೆಗೆ ಡಾಲರ್ಸ್‌ ಕಾಲೋನಿ, ಕೆಇಬಿ ಜಂಕ್ಷನ್‌, ಮತ್ತುರಾಜ್‌ ಜಂಕ್ಷನ್‌, ಕತ್ತರಿಗುಪ್ಪೆ ಜಂಕ್ಷನ್‌, ಜೇಡಿಮರ ಜಂಕ್ಷನ್‌ ಗಳಲ್ಲಿ ಯೋಜನೆ ಕೈಗೆತ್ತಿಕೊಂಡಿದ್ದು, ಕಾಮಗಾರಿ ಪೂರ್ಣಗೊಂಡರೆ 16 ಕಿ.ಮೀ ಉದ್ದದ ರಸ್ತೆ ಸಿಗ್ನಲ್‌ ಮುಕ್ತವಾಗಲಿದೆ ಎಂದು ಮಾಹಿತಿ ನೀಡಿದರು.

ಮುತ್ತುರಾಜ ಜಂಕ್ಷನ್‌ನಲ್ಲಿ ಸುಮಾರು 18 ಕೋಟಿ ರೂ. ವೆಚ್ಚದಲ್ಲಿ ಕೆಳ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಬೃಹತ್‌ ಬಂಡೆ ಸಿಕ್ಕಿದರಿಂದ ಕಾಮಗಾರಿ ವಿಳಂಬವಾಗಿದೆ. ಬಂಡೆ ತೆರವುಗೊಳಿಸಲು ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಬಂಡೆ ತೆರವುಗೊಳಿಸಿದ ನಂತರ ಕಾಮಗಾರಿ ಚುರುಕುಗೊಳ್ಳಲಿದೆ ಎಂದು ಸಂಪತ್‌ರಾಜ್‌ ಭರವಸೆ ವ್ಯಕ್ತಪಡಿಸಿದರು.

ಉಳಿದ ಜಂಕ್ಷನ್‌ಗಳಲ್ಲಿ ಕಾಮಗಾರಿ ವೇಳೆ ಹೆಚ್ಚುವರಿ ಸಿಬ್ಬಂದಿ ಮತ್ತು ಯಂತ್ರೋಪಕರಣ ಬಳಸಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಮುತ್ತು ರಾಜ ಜಂಕ್ಷನ್‌ ಅಂಡರ್‌ಪಾಸ್‌ ಕಾಮಗಾರಿ 4 ತಿಂಗಳಲ್ಲಿ ಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಕತ್ತರಿಗುಪ್ಪೆ ಹಾಗೂ ಜೇಡಿಮರ ಕಾಮಗಾರಿಗಳನ್ನೂ ಶೀಘ್ರ ಪೂರ್ಣಗೊಳಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

Advertisement

ಮುಂದಿನ ವಾರದಿಂದ ಒತ್ತುವರಿ ತೆರವು: ಮೇಯರ್‌ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಮರುಚಾಲನೆ ನೀಡಲು ಪಾಲಿಕೆ ನಿರ್ಧರಿಸಿದ್ದು, ಮುಂದಿನ ಒಂದು ವಾರದೊಳಗೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿದೆ.

ನಗರಾಭಿವೃದ್ಧಿ ಸಚಿವ ಜಿ.ಪರಮೇಶ್ವರ್‌ ಪಾಲಿಕೆಗೆ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಭೂ ಮಾಪನಾಧಿಕಾರಿಗಳು ಸರ್ವೆ ನಡೆಸಿ ವರದಿ ನೀಡಿದ್ದಾರೆ. ಮೂರು ದಿನಗಳಲ್ಲಿ ಸರ್ವೆಯ ಸಂಪೂರ್ಣ ವರದಿ ಕೈಸೇರಲಿದ್ದು, ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಮೇಯರ್‌ ಸಂಪತ್‌ರಾಜ್‌ ತಿಳಿಸಿದ್ದಾರೆ.

ಈಗಾಗಲೇ ನಗರದ 400ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಂದಾಯ ಇಲಾಖೆಯ ಭೂ ಮಾಪನ ಅಧಿಕಾರಿಗಳು ಒತ್ತುವರಿ ಗುರುತಿಸಿದ್ದಾರೆ. ಆದರೆ, ತೆರವು ಕಾರ್ಯಾಚರಣೆಗೆ ಗುರುತು ಮಾಡಿಕೊಡದ ಕಾರಣ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ವರದಿ ಬಂದ ಕೂಡಲೇ ಸಚಿವರೊಂದಿಗೆ ಚರ್ಚಿಸಿ ಒತ್ತುವರಿ ತೆರವು ಆರಂಭಿಸಲಾಗುವುದು ಎಂದು ಹೇಳಿದರು.
 
728 ಪ್ರಕರಣ ಬಾಕಿ: ಪಾಲಿಕೆಯ ಮಾಹಿತಿಯಂತೆ ನಗರದಲ್ಲಿ ಒಟ್ಟು 1,953 ರಾಜಕಾಲುವೆ ಒತ್ತುವರಿ ಪ್ರಕರಣಗಳಿದ್ದು, 2016ಕ್ಕೆ ಮೊದಲೇ 820ಕ್ಕೂ ಹೆಚ್ಚು ಪ್ರಕರಣಗಳಲ್ಲಿನ ಒತ್ತುವರಿಯನ್ನು ಪಾಲಿಕೆ ತೆರವುಗೊಳಿಸಿತ್ತು. ಮುಖ್ಯಮಂತ್ರಿಗಳ ನಿರ್ದೇಶನದ ನಂತರದಲ್ಲಿ 405 ಪ್ರಕರಣಗಳಲ್ಲಿ ಮಾತ್ರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿರುವ ಬಿಬಿಎಂಪಿ, ಒತ್ತುವರಿಯಿಂದ ತೀವ್ರ ಸಮಸ್ಯೆಯಾಗುತ್ತಿರುವ ಕಡೆಗಳಲ್ಲಿ ಕಾರ್ಯಾಚರಣೆಗೆ ಮುಂದಾಗಿಲ್ಲ. ಪ್ರಭಾವಿಗಳ ಪ್ರಕರಣಗಳಲ್ಲಿ ಪಾಲಿಕೆ ಮೌನವಹಿಸಿದ್ದು, ಇನ್ನೂ 728 ಪ್ರಕರಣಗಳಲ್ಲಿ ತೆರವು ಬಾಕಿಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next