ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಮತ್ತು ಹಳಿಯಾಳದ ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಕಾಲೇಜು ಹಾಗೂ ಬೆಳಗಾವಿಯ ಗೋಗಟೆ ತಾಂತ್ರಿಕ ಕಾಲೇಜು ಜಂಟಿಯಾಗಿ ಸಂಶೋಧನೆ ಹಾಗೂ ಡಿಎಸ್‌ಎಂ ಕಾರ್ಯಕ್ರಮಗಳ ವಿನಿಮಯಕ್ಕಾಗಿ ಪ್ರತ್ಯೇಕವಾಗಿ ಪರಸ್ಪರ ಒಡಂಬಡಿಕೆ (ಎಂಓಯು) ಪತ್ರಕ್ಕೆ ಸಹಿ ಹಾಕಿವೆ.
ಹೆಸ್ಕಾಂನ ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಮನೋಹರ ಎಂ. ಬೇವಿನಮರದ ಅವರು ಮೇ 8ರಂದು ಹಳಿಯಾಳದ ವಿಡಿಆರ್‌ಟಿ ಕಾಲೇಜಿನ ಪ್ರಾಚಾರ್ಯ ಡಾ| ವಾದಿರಾಜ ವಿ. ಕಟ್ಟಿ ಅವರು ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ.
ಅದೇ ರೀತಿ ಮೇ 12ರಂದು ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಸಕ್ಕರಿ ಮತ್ತು ತಾಂತ್ರಿಕ ವಿಭಾಗದ ನಿರ್ದೇಶಕ ಆರ್. ರಾಜಪ್ಪ ಹಾಗೂ ಕರ್ನಾಟಕ ಲಾ ಸೊಸೈಟಿಯ ಬೋರ್ಡ್ ಆಫ್ ಮ್ಯಾನೇಜ್ ಮೆಂಟ್‌ನ ಅಧ್ಯಕ್ಷ ಎಂ.ಆರ್. ಕುಲಕರ್ಣಿ ಇವರು ಬೆಳಗಾವಿಯ ಜಿಇ ಕಾಲೇಜಿನ ಪ್ರಾಚಾರ್ಯ ಡಾ| ಎ.ಎಸ್. ದೇಶಪಾಂಡೆ ಮತ್ತು ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ ವಿಭಾಗದ ಮುಖ್ಯಸ್ಥ ಡಾ| ಡಿ.ಆರ್. ಜೋಶಿ ಸಮ್ಮುಖದಲ್ಲಿ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಹೆಸ್ಕಾಂನ ಜಿಎಂ ಮನೋಹರ ಬೇವಿನಮರ ಹಾಗೂ ಎಂಡಿ ಎಸ್.ಪಿ. ಸಕ್ಕರಿ ಮಾತನಾಡಿ, ಶೈಕ್ಷಣಿಕ ಕ್ಷೇತ್ರದಲ್ಲಿ ಇಂಜನಿಯರ್ ಗಳಿಗೆ ಪ್ರಸಕ್ತ ವಿದ್ಯುತ್ ಕ್ಷೇತ್ರದಲ್ಲಿಯ ಸವಾಲುಗಳಿಗೆ ಉತ್ತರಿಸುವ ಸಂಶೋಧನೆ, ವಿದ್ಯುತ್ ಉತ್ಪಾದನೆ ಹಾಗೂ ವಿದ್ಯುತ್ ಉಳಿತಾಯದ ಬಗ್ಗೆ ಅರಿವು ಮೂಡಿಸುವಲ್ಲಿ ಇದು ಉತ್ತಮ ವೇದಿಕೆಯಾಗಲಿದೆ ಎಂದರು.
ಎಂ.ಆರ್. ಕುಲಕರ್ಣಿ ಹಾಗೂ ಡಾ| ವಾದಿರಾಜ ಕಟ್ಟಿ ಮಾತನಾಡಿ, ಇಂತಹ ಎಂಓಯುಗಳಿಂದ ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳು ಒಟ್ಟಾಗಿ ಸಮಾಜ ಅಭಿವೃದ್ಧಿಗೊಳಿಸಲು ಅನುಕೂಲವಾಗುವುದು ಎಂದರು. ಹೆಸ್ಕಾಂನ ನಾರಾಯಣಗೌಡ, ರಾಘವೇಂದ್ರ ವಿಶ್ವಕರ್ಮ, ಕಾಲೇಜಿನ ಪ್ರಾಧ್ಯಾಪಕರಾದ ಡಾ| ಎಸ್.ಬಿ. ಹಾಲಭಾವಿ, ಮಂಜುನಾಥ ಡಿ., ಗುರುರಾಜ ಆರ್. ಸತ್ತಿಗೇರಿ, ರವೀಂದ್ರ ಎಂ., ವಾಣಿ ದಾತಾರ ಮೊದಲಾದವರಿದ್ದರು.