Advertisement

ಸುವರ್ಣ ಸೌಧದಲ್ಲಿ ಕಚೇರಿಗಳಿಗೆ ಸ್ಥಳಾಭಾವ

06:00 AM Aug 02, 2018 | |

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗಿ ನಗರದ ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರೂ, ಸ್ಥಳಾವಕಾಶದ ಕೊರತೆ ಎದುರಾಗಲಿದೆ. ಒಂದು ವೇಳೆ, ಮುಖ್ಯಮಂತ್ರಿಯವರು ಕಚೇರಿಗಳ ಸ್ಥಳಾಂತರ ನಿರ್ಧಾರ ಮಾಡಿದರೆ ವಿಧಾನಮಂಡಲ ಅಧಿವೇಶನದ ಸಮಯದಲ್ಲಿ ಇದರಿಂದ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತ ವಿವಿಧ ಸಂಘಟನೆಗಳ ಬೇಡಿಕೆಗೆ ಸ್ಪಂದಿಸಿ ಈ ಭಾಗದ ಮಠಾಧೀಶರು ಹೋರಾಟದಲ್ಲಿ ಪಾಲ್ಗೊಂಡ ಬೆನ್ನಲ್ಲೇ ಕುಮಾರಸ್ವಾಮಿ ಅವರು, ಕೃಷ್ಣ ಜಲಭಾಗ್ಯ ನಿಗಮ ಸ್ಥಳಾಂತರ ಮಾಡುವುದಾಗಿ ಪ್ರಕಟಿಸಿದ್ದಾರೆ. ಆದರೆ, ಸುವರ್ಣ ವಿಧಾನಸೌಧದಲ್ಲಿ ಕಚೇರಿಗಳ ಸ್ಥಾಪನೆಗೆ ಸ್ಥಳಾವಕಾಶದ ಕೊರತೆ ಇದೆ. ಕಟ್ಟಡ ಕಟ್ಟುವಾಗಲೇ ಈ ಬಗ್ಗೆ ಆಲೋಚನೆ ಮಾಡಿ ಅದರಂತೆ ನಕ್ಷೆ ರೂಪಿಸಿ ಕಚೇರಿಗಳಿಗಾಗಿ ಸ್ಥಳ ನಿಗದಿ ಮಾಡಬೇಕಿತ್ತು. ಆದರೆ, ಆಗ ಈ ಬಗ್ಗೆ ಚಿಂತನೆ ಮಾಡಲಿಲ್ಲ. ಹೀಗಾಗಿ, ಈಗ ಸಮಸ್ಯೆ ಎದುರಾಗಿದೆ. ಕಚೇರಿಗಳನ್ನು ಸ್ಥಾಪನೆ ಮಾಡುವುದೇ ಉದ್ದೇಶವಾಗಿದ್ದರೆ ಅದಕ್ಕೆ ಪರ್ಯಾಯ ಪರಿಹಾರ ಕಂಡುಕೊಳ್ಳಬೇಕು ಎಂಬುದು ಈ ಭಾಗದ ಶಾಸಕರ ಅಭಿಪ್ರಾಯ.

ಎರಡು ವರ್ಷಗಳ ಹಿಂದೆ ಕಚೇರಿಗಳ ಸ್ಥಳಾಂತರಕ್ಕೆ ವ್ಯಾಪಕ ಬೇಡಿಕೆ ಕೇಳಿ ಬಂದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಆ ಸಮಿತಿ ಅಧ್ಯಯನ ಮಾಡಿ ಸುವರ್ಣ ವಿಧಾನಸೌಧ ಕಚೇರಿಗಳ ಸ್ಥಳಾಂತರಕ್ಕೆ ಸೂಕ್ತವಾಗಿಲ್ಲ. ಇಲ್ಲಿ ಕಚೇರಿಗಳ ಸ್ಥಾಪನೆಗೆ ಸ್ಥಳದ ಕೊರತೆ ಇದೆ. ಕಚೇರಿ ಸ್ಥಾಪನೆ ಮಾಡಿದರೆ ಅಧಿವೇಶನದ ಸಮಯದಲ್ಲಿ ಈ ಸಿಬ್ಬಂದಿಗೆ ಬಹಳ ಸಮಸ್ಯೆ ಎದುರಾಗಲಿದೆ ಎಂದು ವರದಿ ನೀಡಿತ್ತು.

ಕಚೇರಿಗಳ ಸ್ಥಳಾಂತರ ಮಾಡಿದರೆ ಒಂದು ಕಚೇರಿಯಲ್ಲಿ ಕನಿಷ್ಠ 15 ರಿಂದ 20 ಜನ ಸಿಬ್ಬಂದಿ ಇರುತ್ತಾರೆ. ಕಚೇರಿಗಳ ದಾಖಲೆ ಪತ್ರಗಳಿರುತ್ತವೆ. ಎಲ್ಲದಕ್ಕೂ ಜಾಗ ಹೊಂದಿಸಿಕೊಡುವುದು ಕಷ್ಟ. ಇದರಿಂದ ಅಧಿವೇಶನ ನಡೆಯುವ ಸಮಯದಲ್ಲಿ ಬಹಳ ತೊಂದರೆ ಉಂಟಾಗಲಿದೆ ಎಂದು ಸಮಿತಿಯ ಸದಸ್ಯರು ಅಭಿಪ್ರಾಯಪಟ್ಟಿದ್ದರು. ಇದೇ ಅವಧಿಯಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಬಳಿಯೂ ಅಧಿಕಾರಿಗಳು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿ ಕಚೇರಿಗಳ ಸ್ಥಳಾಂತರಕ್ಕೆ ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿದ್ದರು. ಹೀಗಾಗಿ, ಆಗ ಈ ವಿಷಯವನ್ನು ಅಲ್ಲಿಗೆ ಬಿಡಲಾಗಿತ್ತು.

ಇನ್ನೊಂದೆಡೆ, 2014ರ ಮಾರ್ಚ 25ರಂದು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುವರ್ಣ ವಿಧಾನಸೌಧಕ್ಕೆ ಯಾವುದೇ ಕಚೇರಿಗಳನ್ನು ಕಾಯಂ ಆಗಿ ಸ್ಥಳಾಂತರಿಸುವ ಅಗತ್ಯ ಇಲ್ಲ ಎಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಸರಕಾರಕ್ಕೆ ಸಹ ತಿಳಿಸಲಾಗಿತ್ತು. ಇದಾದ ನಂತರ ಸುವರ್ಣ ವಿಧಾನಸೌಧಕ್ಕೆ ಕೆಲವು ಇಲಾಖೆಗಳನ್ನು ಕಾಯಂ ಆಗಿ ಸ್ಥಳಾಂತರಿಸುವ ಸಂಬಂಧ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯನ್ನು ರದ್ದುಪಡಿಸಲಾಗಿತ್ತು.

Advertisement

ಈಗ ಸುವರ್ಣ ವಿಧಾನಸೌಧದಲ್ಲಿ ಸಚಿವರ ಕೊಠಡಿಗಳನ್ನು ಬಿಟ್ಟರೆ ಅವರ ಕಾರ್ಯದರ್ಶಿಗಳಿಗೆ ಒಂದು ಕೊಠಡಿ ಒದಗಿಸಲಾಗಿದೆ. ಸಚಿವರಿಗೆ ಸಂಬಂಧಿಸಿದ ಅಧಿಕಾರಿಗಳಿಗೇ ಸಮರ್ಪಕ ಕೊಠಡಿಗಳಿಲ್ಲ. ಅಧಿವೇಶನ ನಡೆದಾಗ ಈಗಿರುವ ಒಂದೊಂದು ಕೊಠಡಿಗಳಲ್ಲಿ ಮೂವರು ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸಬೇಕಿದೆ. ಹೀಗಿರುವಾಗ ಕಚೇರಿಗಳ ಸ್ಥಳಾಂತರ ಮಾಡಿದರೆ ಆಗ ಸಮಸ್ಯೆ ಉಂಟಾಗಲಿದೆ ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.

ವಿಧಾನಮಂಡಲ ಅಧಿವೇಶನ ಇಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಲಾಗಿದೆ. ಸರಕಾರಿ ಕಚೇರಿ ಸ್ಥಾಪನೆ ಮಾಡಲು ಅಲ್ಲ. ಸೌಧದೊಳಗೆ ಕಚೇರಿಗಳ ಸ್ಥಾಪನೆ ಸಾಧ್ಯವಿಲ್ಲ. ಹೀಗಾಗಿ ಕಚೇರಿಗಳ ಸ್ಥಳಾಂತರಕ್ಕೆ ಸುವರ್ಣ ವಿಧಾನಸೌಧದ ಆವರಣದಲ್ಲಿ ಹೊಸದಾಗಿ ಆಡಳಿತ ಭವನ ನಿರ್ಮಾಣ ಮಾಡಬೇಕು.
– ಮಹಾಂತೇಶ ಕವಟಗಿಮಠ, ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ.

Advertisement

Udayavani is now on Telegram. Click here to join our channel and stay updated with the latest news.

Next