ಈಗ ಎಂದಲ್ಲ, ಮೊದಲಿನಿಂದಲೂ ಅದೊಂದು ಹುಚ್ಚು; ಯಾರಾದರೂ ಓದ್ತಾ ಇದ್ದರೆ ಅವರಿಗೆ ಕಿರಿಕಿರಿಯಾಗುತ್ತದೆ ಅಂತ ಗೊತ್ತಿದ್ದರೂ ಅದರ ಮುಖಪುಟ ಇಣುಕಿ ನೋಡುವುದು ನನ್ನ ಚಾಳಿಯಾಗಿತ್ತು. ಬಹುಶಃ ಊರಿಗೆ ಹೋಗುವಾಗ ಚಿರಿಪಿರಿ ಮಾತಾಡ್ತಾನೆ ಅಂತ ಅಣ್ಣ ತೆಗೆದುಕೊಟ್ಟ “ಬಾಲಮಂಗಳ’ ಮೊದಲ ಪುಸ್ತಕ.ಅಲ್ಲಿಂದ ಶುರು. ಇದೊಂದು ಅಧ್ಯಾಯ, ಇನ್ನೊಂದು ಪುಟ, ಹಾಗೆ, ಅಂತ ಹೇಳಿ ರಾತ್ರಿಯಿಡೀ ದೀಪ ಉರಿಸಿದ ನೆನಪು ಹಲವಿದೆ.
ಪುಸ್ತಕಗಳನ್ನು ಕೊಂಡು ಕೊಂಡು ಪೇರಿಸಿಟ್ಟರೂ ಈಗಲೂ ಹೊಸ ಪುಸ್ತಕ ಕಂಡಾಗ ಕಿಸೆ ಮರೆತುಹೋಗಿ, ಮನಸು ಆಸೆಬುರುಕ ಮಗುವಾಗುತ್ತದೆ. ‘ಇವನಿಷ್ಟು ಓದುವುದು ಯಾಕೆಂದರೆ ಜೀವನ ಎದುರಿಸಲು ಭಯವಾಗಿ, ಅದಕ್ಕೇ ಪಲಾಯನ’ ಅಂತೊಬ್ಬರು ಅಂದಿದ್ದರು. ಇರಬಹುದೇನೋ! ಪುಸ್ತಕವೊಂದ ಬಿಡಿಸಿ, ಪುಟಗಳ ಆಘ್ರಾಣಿಸಿ, ಕಣ್ಣು ಮುಚ್ಚಿ, ಮತ್ತನಾಗಿ ,ಮುನ್ನುಡಿ ಹಾರಿಸಿ ಮೊದಲ ಪುಟ ತೆರೆದರೆ ಹೊಸದೊಂದು ಲೋಕಕ್ಕೆ ಪ್ರವೇಶವಾಗುತ್ತದಲ್ಲ
ಅದು ಯಾವ ಸಾಹಸಕ್ಕೆ ಕಮ್ಮಿ?
ಈಗ ಬಿಡಿ, ಕುಳಿತಲ್ಲೇ ಸಾವಿರಾರು ಪುಸ್ತಕ ಇಳಿಸಿಕೊಳ್ಳಬಲ್ಲ ಕಿಂಡಲ್ ಬಂದಿದೆ. ಆದರೂ ಪುಟ ತಿರುಗಿಸುವಾಗಿನ ಚರ್ರ ಎಂಬ ಶಬ್ದ; ನಡುವೆ ಇಟ್ಟ. ಯಾವುದೋ ಪೇಪರ್ ಚೂರು ಬುಕ್ ಮಾರ್ಕ್, ಯಾರೋ ಗೀಚಿದ ಸಾಲು ಇವೆಲ್ಲ ಅನುಭವದ ಭಾಗವಾಗುತ್ತದೆ; ನೆನಪು ಗಟ್ಟಿಯಾಗುತ್ತದೆ. ಕನ್ನಡದಲ್ಲಿ ಶುದ್ಧ ಹಾರರ್ ಸಾಹಿತ್ಯ ಇನ್ನೂ ಮರೀಚಿಕೆಯೇ ಆಗಿದೆ. ಅದು ಗಂಭೀರವಲ್ಲ ಅನ್ನುವ ಅಸಡ್ಡೆಯೇ ಕಾರಣವಾ? ಗೊತ್ತಿಲ್ಲ.
ಕನ್ನಡದ ಎಲ್ಲೆಗಳು ವಿಸ್ತಾರವಾಗುವ ಸಾಹಿತ್ಯ ಈಗಿನ ತುರ್ತು; ಅದೇ ನೆಲ,ಮಣ್ಣು,ತಳ ಹಿಡ್ಕೊಂಡು ಎಷ್ಟು ದಿನ ಸಾಗಿಸಬಹುದು? ಇವೆಲ್ಲ ಕನಸುಗಳು ನನಸಾಗುವಂತೆ ಒಂದಿಬ್ಬರು ಈಗ ಬರೆಯುತ್ತಿದ್ದಾರೆ ಅದೇ ಸಮಾಧಾನ! ಒಂದು ಪುಸ್ತಕ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಇನ್ನೊಂದರ ಓದನ್ನು ಶುರುಮಾಡುವ ಮೊದಲಿನ ನಿರ್ವಾತ ಇದೆಯಲ್ಲ ಅದು ಬಹುಶಃ ಇನ್ನೊಬ್ಬ ಪುಸ್ತಕಪ್ರೇಮಿಗೇ ಅರಿವಾಗಬಹುದೇನೋ? ಪುಸ್ತಕ ಓದುವಾಗ ಕಾತರ, ಮುಗಿದಾಗ ನಿಟ್ಟುಸಿರು, ನೆಮ್ಮದಿ ಬದುಕಿಗಿನ್ನೇನು ಬೇಕು?
* ಪ್ರಶಾಂತ್ ಭಟ್