ಕುಣಿಗಲ್: ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಆ. 16ರಂದು ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರಾಗಿ ಬೆಳೆಗೆ ನೀರು ಹರಿಸಿ, ಸಾಲು ಕೆರೆ ತುಂಬಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಶಾಸಕ ಡಾ.ಎಚ್.ಡಿ.ರಂಗನಾಥ್ ಎಚ್ಚರಿಸಿದರು.
ಅಮೃತೂರಿನಲ್ಲಿ ಶುಕ್ರವಾರ 50 ಲಕ್ಷ ರೂ. ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆ. 1ರಂದು ಮಾರ್ಕೋನಹಳ್ಳಿ ಪ್ರವಾಸಿ ಮಂದಿರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ರಾಗಿ ಬೆಳೆ, ಹಾಗೂ ಸಾಲು ಕೆರೆ ತುಂಬಿಸಲು ತೀರ್ಮಾನಿಸಲಾಗಿತ್ತು. ರೈತರು ರಾಗಿ ಬೆಳೆ ಬೆಳೆಯಲು ಸಾವಿರಾರು ರೂ. ಖರ್ಚು ಮಾಡಿ ಜಮೀನು ಹದ ಮಾಡಿ ಕಾಯುತ್ತಿದ್ದಾರೆ. ಆದರೆ ನೀರಾವರಿ ಸಲಹಾ ಸಮಿತಿ ತೀರ್ಮಾನ ತಿರಸ್ಕರಿಸಿ ಸರ್ಕಾರ ಜಲಾಶಯಗಳಲ್ಲಿ ಇರುವ ನೀರನ್ನು ಜನ-ಜಾನುವಾರಗಳಿಗೆ ಬಳಸಿಕೊಳ್ಳಬೇಕೆಂದು ಜಲಸಂಪನ್ಮೂಲ ಇಲಾಖೆ ಅಧೀನ ಕಾರ್ಯದರ್ಶಿ ಆದೇಶಿಸಿರುವುದು ಸರಿಯಲ್ಲ. ಈ ಸಂಬಂಧ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದು, ಒಂದು ದಿನ ಅವಕಾಶ ನೀಡುವಂತೆ ಹೇಳಿರುವುದಾಗಿ ಹೇಳಿದರು.
ಕೆರೆಗಳಿಗೆ ನೀರು ತುಂಬಿಸಿ: ಮಲೆನಾಡು ಪ್ರದೇಶದಲ್ಲಿ ದಾಖಲೆ ಮಳೆಯಾಗುತ್ತಿದೆ. ಗೋರೂರು ಡ್ಯಾಂಗೆ ಒಂದು ಲಕ್ಷಕ್ಕೂ ಅಧಿಕ ನೀರು ಹರಿದು ಬರುತ್ತಿದೆ. ಹಾಗಾಗಿ ಹೇಮಾವತಿ ನಾಲೆ ಮೂಲಕ ನೀರು ಹರಿಸಿ ತಾಲೂಕಿನ ಕೆರೆಕಟ್ಟೆಗಳನ್ನು ತುಂಬಿಸಿ ಜನ-ಜಾನುವಾರಗಳಿಗೆ ಕುಡಿಯುವ ನೀರು ಮತ್ತು ಬೆಳೆಗೆ ನೀರು ಕೊಡಬೇಕೆಂದು ಆಗ್ರಹಿಸಿದರು.
ಶುಭಸಮಾರಂಭಕ್ಕೆ ಅನುಕೂಲ: ಹಿಂದಿದ್ದ ಸಮ್ಮಿಶ್ರ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ಮಂಜೂರು ಮಾಡಿತು. ಈ ಅನುದಾನದಲ್ಲಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ. ನಿಗದಿತ ಅವಧಿ ಒಳಗೆ ಕಟ್ಟಡ ಪೂರ್ಣಗೊಳಿಸಿ ಜನರಿಗೆ ಅನುಕೂಲಕ್ಕೆ ಅನುಮಾಡಿಕೊಡಬೇಕು. ಭವನ ನಿರ್ಮಾಣದಿಂದ ಮಧುವೆ, ಶುಭಕಾರ್ಯ ಹಾಗೂ ಸಭೆ ಸಮಾರಂಭಗಳು ನಡೆಸಲು ಅನುಕೂಲವಾಗಲಿದೆ ಎಂದು ಹೇಳಿದರು.
ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಯಣ್ಣ, ನಿರ್ಮಿಥಿ ಕೇಂದ್ರ ಎಂಜಿನಿಯರ್ ಬೊಮ್ಮೇಗೌಡ, ತಾಪಂ ಸದಸ್ಯೆ ನಾಗಮ್ಮ, ಗ್ರಾಪಂ ಸದಸ್ಯ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಧೀಕ್ಷಕ ಉಮೇಶ್, ವಾರ್ಡನ್ ಕೃಷ್ಣಶೆಟ್ಟಿ ಮತ್ತಿತರರಿದ್ದರು.