ಕುಷ್ಟಗಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ವಿದ್ಯುದ್ದೀಪ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕಾರ್ಯಕರ್ತರು ಪುರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಮಲ್ಲಯ್ಯ ವೃತ್ತದಿಂದ ಜಿಲ್ಲಾಧ್ಯಕ್ಷ ಹುಲಗಪ್ಪ ಚೂರಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪುರಸಭೆ ಆಡಲಿತ ಅವ್ಯವಸ್ಥೆ ಕುರಿತು ಧಿಕ್ಕಾರ ಕೂಗಿದರು. ನಂತರ ಪುರಸಭೆ ಕಾರ್ಯಾಲಯದಲ್ಲಿ ಮುಖ್ಯಾಧಿಕಾರಿ ಅಶೋಕ ಪಾಟೀಲ ಅನುಪಸ್ಥಿತಿಯಲ್ಲಿ ಅಕೌಟೆಂಟ್ ದೇವೇಂದ್ರಪ್ಪ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಯತ್ನಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಹುಲಗಪ್ಪ ಚೂರಿ, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ವಾರದಲ್ಲಿ ಎರಡು ಬಾರಿ ನೀರು ಪೂರೈಸಲು ಪುರಸಭೆ ಕ್ರಮ ಕೈಗೊಳ್ಳಬೇಕು. ಪಟ್ಟಣದ ಮುಖ್ಯ ರಸ್ತೆಯ ವಿಭಜಕಗಳ ಹೈಮಾಸ್ಟ್ ವಿದ್ಯುದ್ದೀಪಗಳಿಗೆ ಬೆಳಕಿನ ಭಾಗ್ಯ ಕಲ್ಪಿಸಿ ಕತ್ತಲೆಯಿಂದ ಮುಕ್ತಗೊಳಿಸಬೇಕು. ಕಳೆದ ಮೂರು ವರ್ಷಗಳಿಂದ ನನೆಗುದಿಯಲ್ಲಿರುವ 24 ತಾಸು ನೀರು ಪೂರೈಕೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಪಟ್ಟಣದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಸೊಳ್ಳೆ ನಿರೋಧಕ ಸಿಂಪರಣೆಗೆ ಫಾಗಿಂಗ್ ವ್ಯವಸ್ಥೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕಳೆದ ಮಾರ್ಚ್ 12ರಿಂದ ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯ ವಿಭಜಕ ವಿದ್ಯುತ್ ಕಂಬಗಳಲ್ಲಿ ವಿದ್ಯುದ್ದೀಪ ಬೆಳಗುತ್ತಿಲ್ಲ. ವಾಹನಗಳ ಬೆಳಕಲ್ಲಿ ಸಾರ್ವಜನಿಕರು ಸಂಚರಿಸುವ ದುಸ್ಥಿತಿ ಎದುರಾಗಿದೆ. ಪುರಸಭೆ ದುರಸ್ತಿಗೀಡಾದ ವಿದ್ಯುದ್ದೀಪಗಳ ಮರು ದುರಸ್ತಿಗೂ ಪ್ರಯತ್ನಿಸಿಲ್ಲ. ಇನ್ನೂ ಮೂರು ದಿನಗಳಲ್ಲಿ ಬೇಡಿಕೆ ಈಡೇರಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಗೌರವಾಧ್ಯಕ್ಷ ಮಹಾಂತೇಶ ಆರೇರ್, ತಾಲೂಕಾ ಅಧ್ಯಕ್ಷ ದೇವರಾಜ್ ಹಜಾಳ್, ರಫೀ ಬಂಗಾಳಿ, ತೊಂಡೆಪ್ಪ ಚೂರಿ, ನಾಗರಾಜ್ ಭೋವಿ, ಹನಮಂತಪ್ಪ ಬೂತಬಿಲ್ಲಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.