Advertisement

1ರಂದು ಶಿರಹಟ್ಟಿ ಹೆಸ್ಕಾಂ ಕಚೇರಿಗೆ ಮುತ್ತಿಗೆ

01:09 PM Jun 29, 2019 | Team Udayavani |

ಶಿರಹಟ್ಟಿ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯನ್ನು 2017ರಲ್ಲಿಯೇ ಅನುಷ್ಠಾನ ಗೊಳಿಸಲಾಗಿತ್ತು. ಆದರೆ ಈವರೆಗೆ ಯೋಜನೆಯಲ್ಲಿನ ಫಲಾನುಭವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸದೇ ಹೆಸ್ಕಾಂ ಸತಾಯಿಸುತ್ತಿದೆ. ಈ ಕುರಿತು ಹೆಸ್ಕಾಂಗೆ ನೀಡಿದ ಗಡವು ಮುಗಿದಿದ್ದು, ಜು. 1ರಂದು ಎಲ್ಲ ಫಲಾನುಭವಿಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಭಾರತೀಯ ಕಿಸಾನ್‌ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯ ಈರಣ್ಣ ಮಜ್ಜಗಿ ಎಚ್ಚರಿಕೆ ನೀಡಿದ್ದಾರೆ.

Advertisement

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನೆಗಾಗಿ ಕೇಂದ್ರ ಸರಕಾರ 1600 ಕೋಟಿ ಅನುದಾನ ಮೀಸಲು ಇಡಲಾಗಿತ್ತು. 31-3-2019ರ ಒಳಗಾಗಿ ದೇಶದ ಎಲ್ಲ ಬಡ ಕುಟುಂಬಗಳ ಮನೆಗೆ ವಿದ್ಯುತ್‌ ಸಂಪರ್ಕ ಒದಗಿಸಬೇಕಿತ್ತು. ಆದರೆ ಈವರೆಗೆ ಒಂದೂ ಮನೆಗೆ ವಿದ್ಯುತ್‌ ಸಂಪರ್ಕ ನೀಡದೇ ಇರುವುದು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ. ತಾಲೂಕಿನಲ್ಲಿ 672 ಫಲಾನುಭವಿಗಳು ಮತ್ತು ಪಟ್ಟಣದಲ್ಲಿ 581 ಫಲಾನುಭವಿಗಳಿಗೆ ಸೌಭಾಗ್ಯ ಯೋಜನೆ ಒದಗಿಸಬೇಕಾಗಿತ್ತು. 2017ರಿಂದ ಈವರೆಗೆ ಕಾಮಗಾರಿ ನಡೆಸದೇ ಬಡವರಿಗೆ ವಂಚನೆ ಮಾಡುವುದಲ್ಲದೇ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸೌಭಾಗ್ಯ ಯೋಜನೆ ಫಲಾನುಭವಿಗಳ ಮಾಹಿತಿ ಕೇಳಿದರೆ ಧಿಧೀನದಯಾಳ ಉಪಾಧ್ಯಾಯ ಗ್ರಾಮ ಜ್ಯೋತಿಯ ಫಲಾನುಭವಿಗಳ ಯಾದಿ ತೋರಿಸುತ್ತಿದ್ದಾರೆ. 581 ಫಲಾನುಭವಿಗಳಲ್ಲಿ 105 ಫಲಾನುಭವಿಗಳಿಗೆ ವಿದ್ಯುತ್‌ ಸಂಪರ್ಕಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈವರೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಹೆಸ್ಕಾಂ ಕಚೇರಿಗೆ ಒದಗಿಸಲಾಗಿದ್ದ 581 ಫಲಾನುಭವಿಗಳಿಗೆ ಏಕೆ ವಿದ್ಯುತ್‌ ಸಂಪರ್ಕ ಒದಗಿಸಿಲ್ಲ ಎಂದು ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಹೆಸ್ಕಾಂ ಕಚೇರಿಯ ಎಸ್‌ಒ ಮತ್ತು ಎಇಇ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಪಟ್ಟಣದ ಜನತೆಗೆ ಒದಗಬೇಕಾಗಿದ್ದ ಸೌಭಾಗ್ಯ ಯೋಜನೆ ಒದಗಿಸುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಆದ್ದರಿಂದ ಜು. 1ರಂದು ಫಲಾನುಭಿಗಳೊಂದಿಗೆ ಶಿರಹಟ್ಟಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಬೇಡಿಕೆ ಈಡೇರುವವರೆಗೂ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಪಂ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ, ಪರಶುರಾಮ ಡೊಂಕಬಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next