ಹನುಮಸಾಗರ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕೂಲಿ ಹಣ ನೀಡಲು ಆಗ್ರಹಿಸಿ ಸಮೀಪದ ಹನುಮನಾಳ ರೈತ ಸಂಪರ್ಕ ಕೇಂದ್ರಕ್ಕೆ ಮಂಗಳವಾರ ಹನುಮನಾಳ ಹೋಬಳಿ ವ್ಯಾಪ್ತಿಯ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹನುಮನಾಳ ವ್ಯಾಪ್ತಿಯ 200ಕ್ಕೂ ಹೆಚ್ಚಿನ ರೈತರು ಉದ್ಯೋಗ ಖಾತ್ರಿ ಯೋಜನೆಯಡಿ ಹೊಲಗಳಲ್ಲಿ ಒಡ್ಡು ಹಾಕುವುದು, ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಮಾಡಿದ್ದರು. ಆದರೆ ಕಾಮಗಾರಿ ಮುಗಿದು 3 ತಿಂಗಳು ಕಳೆದರೂ ಇಲ್ಲಿಯವರೆಗೆ ಯಾವುದೇ ಕೂಲಿ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಕೃಷಿ ಅಧಿಕಾರಿಗಳನ್ನು ಕೇಳಿದರೇ ನೀವು ಸರಿಯಾದ ದಾಖಲೆಗಳನ್ನು ನೀಡಿಲ್ಲ. ಆದ್ದರಿಂದ ಹಣ ಬಿಡುಗಡೆಯಾಗಿಲ್ಲ ಎಂದು ಬೇಜವಾದ್ದಾರಿತನದಿಂದ ಉತ್ತರಿಸುತ್ತಾರೆ. ನಾವು ದಾಖಲೆ ಕೊಡದೇ, ಎನ್‌ಎಂಆರ್ ಮಾಡದೇ, ನಮಗೆ ಕೆಲಸ ನೀಡದ್ದಿರಾ? ಎಂದು ಕೃಷಿ ಅಧಿಕಾರಿಯನ್ನು ರೈತರು ತರಾಟೆ ತೆಗೆದುಕೊಂಡರು.
ನಾವು ಮಾಡಿದ ಕೂಲಿ ಕೆಲಸದ ಹಣವನ್ನು ಕೇಳುವುದಕ್ಕೆ ಪ್ರತಿದಿನ ಎಲ್ಲಾ ಕೆಲಸಗಳನ್ನು ಬಿಟ್ಟು ರೈತ ಸಂಪರ್ಕ ಕೇಂದ್ರಕ್ಕೆ ಅಲೇದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಕೂಲಿ ಹಣ ನೀಡಬೇಕು. ಇಲ್ಲವಾದಲ್ಲಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಮಾತನಾಡಿದ ಕೃಷಿ ಅಧಿಕಾರಿ ಖಾದರಬೀ, ನಾನು ಹೊಸದಾಗಿ ಬಂದಿದ್ದೇನೆ. ಕೆಲ ತಾಂತ್ರಿಕ ಕಾರಣಗಳಿಂದ ರೈತರ ಕೂಲಿ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಶೀಘ್ರ ಹಣವನ್ನು ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತರಾದ ದ್ಯಾಮಣ್ಣ ಚಿಗರಿ, ಹನುಮಂತಪ್ಪ ಕುಂಬಾರ, ಸಣ್ಣಹನುಮಪ್ಪ ಸಾಂತಗೇರಿ, ಯಮನೂರಪ್ಪ, ಶರಣಪ್ಪ ಮೇಟಿ, ಬಸವರಾಜ ಬೆನಕನಾಳ, ಶರಣಪ್ಪ ಕುಂಬಾರ, ಮಂಜಪ್ಪ ಕುಂಬಾರ ಇದ್ದರು.