ಗುಳೇದಗುಡ್ಡ: ನೆರೆ ಸಂತ್ರಸ್ತರಿಗೆ ಸಮರ್ಪಕವಾಗಿ ಪರಿಹಾರ ನೀಡಿಲ್ಲ. ಪ್ರವಾಹದಿಂದ ಹಾನಿಯಾದವರಿಗೆ ಬಿಟ್ಟು ಬೇರೆಯವರಿಗೆ ಪರಿಹಾರ ನೀಡಲಾಗಿದೆ ಎಂದು ಆರೋಪಿಸಿ ಲಾಯದಗುಂದಿ ಸಂತ್ರಸ್ತರು ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನೆರೆ ಸಂತ್ರಸ್ತರ ಸರ್ವೇ ಅವೈಜ್ಞಾನಿಕವಾಗಿ ಮಾಡಲಾಗಿದ್ದು, ಇದರಿಂದ ಅರ್ಹ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಪ್ರವಾಹದ ನೀರು ಹೋಗದ ಮನೆಗಳಿಗೆ ಪರಿಹಾರ ನೀಡಲಾಗಿದೆ. ಅಧಿ ಕಾರಿಗಳು ತಮಗೆ ಬೇಕಾದವರಿಗೆ ಮಾತ್ರ ಪರಿಹಾರ ಮಂಜೂರು ಮಾಡಿದ್ದಾರೆ. ಬಡವರಿಗೆ ಪರಿಹಾರ ನೀಡಿಲ್ಲ, ಕೂಡಲೇ ಮತ್ತೂಮ್ಮೆ ಸರ್ವೇ ಮಾಡಿ ನಿಜವಾದ ಸಂತ್ರಸ್ತರನ್ನು ಗುರುತಿಸಿ, ಸೂಕ್ತ ಪರಿಹಾರ ಒದಗಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪಿಡಿಒಗೆ ತರಾಟೆ: ಸಂತ್ರಸ್ತರಲ್ಲದವರಿಗೂ ಪರಿಹಾರ ನೀಡಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮನೆ-ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡದೇ ಶ್ರೀಮಂತರಿಗೆ ನೆರೆ ಪರಿಹಾರ ನೀಡಿದ್ದೀರಿ. ಫಲಾನುಭವಿಗಳ ಹೆಸರಿನ ಪಟ್ಟಿಯನ್ನು ಗ್ರಾಮ ಪಂಚಾಯತ್ ನೋಟಿಸ್ ಬೋಡ್ ಗೆ ಲಗತ್ತಿಸಿಲ್ಲ ಎಂದು ಗ್ರಾಪಂ ಪಿಡಿಒ ಪದ್ಮಾವತಿ ಜಿ.ಪಿ. ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ತಹಶೀಲ್ದಾರ್‌ಗೆ ಮನವಿ: ಲಾಯದಗುಂದಿ ಪಂಚಾಯತ್‌ಗೆ ಆಗಮಿಸಿದ್ದ ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಎಂ. ಕುಲಕರ್ಣಿ, 62 ಫಲಾನುಭವಿಗಳ ಬಗ್ಗೆ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಪುನರ್ ಪರಿಶೀಲನೆ ಮಾಡುತ್ತಾರೆ. ಹಾನಿಗೊಳಗಾಗದ ಮನೆಗಳಿಗೆ ಪರಿಹಾರ ಹೋಗಿದ್ದರೆ ಅಂತಹ ಮನೆಗಳ ಮೇಲೆ ಭೋಜಾ ದಾಖಲಿಸಿ, ಪರಿಹಾರ ನೀಡಿದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ ಕೂಡಲೇ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ನೋಟಿಸ್ ಬೋರ್ಡ್‌ಗೆ ಲಗತ್ತಿಸುವಂತೆ ಪಿಡಿಒ ಅವರಿಗೆ ಸೂಚನೆ ನೀಡಿದರು.
ಪಿಡಿಒ ಜಿ. ಪದ್ಮಾವತಿ, ಗ್ರಾಪಂ ಅಧ್ಯಕ್ಷ ಶರಣು ಸಜ್ಜನ, ಗ್ರಾಮದ ಮಹೇಶ ಜಡಿ, ಮುತ್ತಪ್ಪ ಗೋಡಿ, ಭೀಮಪ್ಪ ಕರಕನ್ನವರ, ಮಂಜುನಾಥ ಜಡಿ, ಭೀಮಪ್ಪ ಮಾದರ, ರವಿ ವಾಲೀಕಾರ, ಸಿದ್ದಪ್ಪ ಬಂಡಿವಡ್ಡರ, ಪರಶುರಾಮ ಪಾತ್ರೋಟಿ, ಬಸವರಾಜ ಮಾದರ, ಮಹೇಶ ವಾಲೀಕಾರ, ಹನಮಂತ ಪಾತ್ರೋಟಿ, ಮಲ್ಲಪ್ಪ ಕುಚಲ, ಸಂಗಪ್ಪ ವಾಲೀಕಾರ, ಬೈಲಪ್ಪ ಗೋಡಿ, ಶರಣಪ್ಪ ಚಿಲ್ಲಾಪುರ, ಆಸಂಗೆಪ್ಪ ಹಾದಿಮನಿ. ಮಲ್ಲಪ್ಪ ಪಾತ್ರೋಟಿ, ಶರಣಪ್ಪ ಜಡಿ ಇದ್ದರು.