Advertisement

ಪಂಜಾಬ್‌ನಲ್ಲಿ ನಿಲ್ಲದ ಸಿಧು ತೊಳಲಾಟ ಈಗ ಎ.ಜಿ. ವಿಚಾರದಲ್ಲಿ ಮುನಿಸು

07:35 PM Nov 06, 2021 | Team Udayavani |

ಚಂಡೀಗಡ: ಪಂಜಾಬ್‌ ಸಿಎಂ ಆಗಿದ್ದ ಕ್ಯಾ.ಅಮರಿಂದರ್‌ ಸಿಂಗ್‌ ವಿರುದ್ಧ ತಕರಾರು ತೆಗೆದಿದ್ದ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಈಗ ಹಾಲಿ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ಆಡಳಿತದ ವಿರುದ್ಧವೂ ತಗಾದೆ ತೆಗೆಯುವುದನ್ನು ಮುಂದುವರಿಸಿದ್ದಾರೆ.

Advertisement

ಹೊಸ ಬೆಳವಣಿಗೆಯಲ್ಲಿ ಅಡ್ವೊಕೇಟ್‌ ಜನರಲ್‌ ಎ.ಪಿ.ಎಸ್‌.ದೇವಲ್‌ ಅವರನ್ನು ಹುದ್ದೆಯಿಂದ ತೆಗೆದು ಹಾಕಬೇಕು ಎಂದು  ಒತ್ತಾಯಿಸಿದ್ದು, ಅದರ ಬೆನ್ನಲ್ಲೇ ದೇವಲ್‌ ಅವರೂ ಸಿಧು ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸೆ.28ರಂದು ನೀಡಿದ್ದ ರಾಜೀನಾಮೆಯನ್ನು ವಾಪಸ್‌ ಪಡೆದಿದ್ದ ಸಿಧು ಅವರು,  2015ರಲ್ಲಿ ನಡೆದಿದ್ದ ಧಾರ್ಮಿಕ ಅವಹೇಳನ ಪ್ರಕರಣದಲ್ಲಿ  ದೇವಲ್‌ ಕಾರ್ಯವೈಖರಿ ಪ್ರಶ್ನಿಸಿದ್ದರು ಮತ್ತು ಅವರನ್ನು ಬದಲಾಯಿಸಬೇಕು ಎಂದು ಪ್ರತಿಪಾದಿಸಿದ್ದರು. ಎಜಿ ದೇವಲ್‌ರನ್ನು ಹುದ್ದೆಯಿಂದ ತೆಗೆದುಹಾಕುವವರೆಗೂ ತಾವು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದಲ್ಲಿ ಕೂರುವುದಿಲ್ಲ ಎಂದೂ ಶುಕ್ರವಾರ ಘೋಷಿಸಿದ್ದರು.

ಈ ಹಿನ್ನೆಲೆಯಲ್ಲಿ ಸಿಧು ವಿರುದ್ಧ ಶನಿವಾರ ತಿರುಗಿ ಬಿದ್ದಿರುವ ಅಡ್ವೊಕೇಟ್‌ ಜನರಲ್‌ ದೇವಲ್‌, ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಕರ್ತವ್ಯ ನಿರ್ವಹಣೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ. ರಾಜಕೀಯ ಲಾಭ ಪಡೆಯುವ ನಿಟ್ಟಿನಲ್ಲಿ ಸಿಧು ಅವರ ಕಚೇರಿ ತಪ್ಪು ಮಾಹಿತಿ ಹಬ್ಬಿಸುತ್ತಿದೆ ಎಂದು ಆರೋಪಿಸಿದ್ದಾರೆ. ಶೀಘ್ರದಲ್ಲಿಯೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಲಾಭ ಪಡೆಯುವ ನಿಟ್ಟಿನಲ್ಲಿ ಇಂಥ ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ಅಡ್ವೊಕೇಟ್‌ ಜನರಲ್‌ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಅಪ್ಪು ಸಾವಿಗೆ ಜಿಮ್ ಕಾರಣವಲ್ಲ: ನೆನಪಿರಲಿ ಪ್ರೇಮ್

Advertisement

ಸಿಎಂ ಸಮರ್ಥನೆ:
ಸಿಧು ಆರೋಪಗಳಿಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಛನ್ನಿ “ರಾಜ್ಯ ಸರ್ಕಾರದ ಕಾನೂನು ತಂಡ ಧಾರ್ಮಿಕ ಅವಹೇಳನ ಪ್ರಕರಣದಲ್ಲಿ ಗುರ್ಮೀತ್‌ ರಾಮ್‌ ರಹೀಮ್‌ನನನ್ನು ವಿಚಾರಣೆ ನಡೆಸಲು ಅನುಮತಿ ಪಡೆದುಕೊಂಡಿದೆ. ಇದಲ್ಲದೆ, ಮಾದಕ ವಸ್ತುಗಳ ಜಾಲದ ಪ್ರಕರಣದ ವಿರುದ್ಧವೂ ಹೋರಾಟ ನಡೆಸುತ್ತಿದೆ. ನ.18ರಂದು ಅದಕ್ಕೆ ಸಂಬಂಧಿಸಿದ ವರದಿಗಳು ಬಹಿರಂಗಗೊಳ್ಳಲಿವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next