Advertisement

ಸಿದ್ದು-ಎಚ್ಡಿಕೆ ಸಮರ: 2 ರಾಜಕೀಯ ಶಕ್ತಿಗಳ “ಸಂಘರ್ಷ’

11:02 PM Sep 24, 2019 | Lakshmi GovindaRaju |

ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಯವರ ನಡುವಿನ “ಟಾಕ್‌ವಾರ್‌’ ರಾಜ್ಯ ರಾಜಕಾರಣ ದಲ್ಲಿ ಮತ್ತೆ ಎರಡು ರಾಜಕೀಯ ಶಕ್ತಿಗಳ ನಡುವಿನ “ಸಂಘರ್ಷ’ದಂತಾಗಿದೆ. ಮೇಲ್ನೋಟಕ್ಕೆ ಇದು ಸಿದ್ದರಾಮಯ್ಯ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನಡುವಿನ ವ್ಯಕ್ತಿಗತ ಮಾತಿನ ಸಮರದಂತೆ ಕಾಣಿಸಿದರೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಸಮುದಾಯಗಳ ಮತಬ್ಯಾಂಕ್‌ ಕೈ ತಪ್ಪುವ ಆತಂಕ ಕಾಡುತ್ತಿದೆ.

Advertisement

ಲೋಕಸಭೆ ಚುನಾವಣೆ ನಂತರದ ವಿದ್ಯಮಾನಗಳಲ್ಲಿ ಈ ಇಬ್ಬರು ನಾಯಕರು ಪರಸ್ಪರ ಟೀಕಾ ಪ್ರಹಾರದಲ್ಲಿ ತೊಡಗಿ ಇದೀಗ ಉಪ ಚುನಾವಣೆ ಘೋಷಣೆ ಬೆನ್ನಲ್ಲೇ ತಾರಕಕ್ಕೇರಿದೆ. ಅದರಲ್ಲೂ ಪ್ರಮು ಖವಾಗಿ ಸಿದ್ದರಾಮಯ್ಯ ಹಾಗೂ ಎಚ್‌.ಡಿ. ಕುಮಾರ ಸ್ವಾಮಿ ಯವರ ನಡುವಿನ ವ್ಯಕ್ತಿಗತ ವೈಷಮ್ಯ ಬೇರೆ ರೀತಿಯ ಬೆಳವಣಿಗೆಗಳಿಗೆ ಕಾರಣವಾ ಗಬಹುದು. ಈ ಮಧ್ಯೆ, ಜೆಡಿಎಸ್‌ನ ಮಾಜಿ ಸಚಿವ ಸಾ.ರಾ.ಮಹೇಶ್‌ ಹಾಗೂ ಅನರ್ಹತೆಗೊಂಡಿರುವ ಶಾಸಕ ಎಚ್‌.ವಿಶ್ವನಾಥ್‌ ನಡುವಿನ ಎಲ್ಲೆ ಮೀರಿದ ಟೀಕಾ ಪ್ರಹಾರ, ಜಿ.ಟಿ.ದೇವೇಗೌಡರು ಕುಮಾರಸ್ವಾಮಿ ವಿರುದ್ಧ ಮಾಡಿರುವ ಟೀಕೆಗಳು ಪಕ್ಷದ ಸಂಘಟನೆ ಮೇಲೆ ಮೈಸೂರು ಭಾಗದಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಜೆಡಿಎಸ್‌ ನಾಯಕರು ಹೇಳುತ್ತಿದ್ದಾರೆ.

ಆರಂಭ-ಅಂತ್ಯ: ಸಿದ್ದರಾಮಯ್ಯ ಅವರು ಜೆಡಿಎಸ್‌ನಿಂದ ಹೊರಬಂದು ಎಬಿಪಿಜೆಡಿಯಲ್ಲಿ ಗುರುತಿಸಿಕೊಂಡಿದ್ದಾಗ ಎಚ್‌.ಡಿ.ದೇವೇಗೌಡ ಹಾಗೂ ಸಿದ್ದರಾಮಯ್ಯ ಬೆಂಬಲಿಗರ ನಡುವೆ ರಾಜ್ಯಾದ್ಯಂತ ಪರ-ವಿರೋಧ ಟೀಕೆಗಳು ಎಲ್ಲೆ ಮೀರಿದ್ದವು. ಪ್ರತಿಕೃತಿ ದಹನದಂತಹ ಅತಿರೇಕದ ಪ್ರತಿಭಟನೆಗಳಿಗೂ ಕಾರಣವಾಗಿತ್ತು. ಆ ನಂತರ ಸಿದ್ದರಾಮಯ್ಯ ಕಾಂಗ್ರೆಸ್‌ ಸೇರಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಾಮುಂಡೇಶ್ವರಿ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿಕುಮಾರಸ್ವಾಮಿ ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿ ಸಿದ್ದರಾಮಯ್ಯ ಅವರಿಗೆ ಮೊದಲ ಬಾರಿಗೆ ಚುನಾವಣೆಯ ಬಿಸಿ ತಾಕುವಂತೆ ಮಾಡಿದ್ದರು.

ಆದಾದ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ನಿರಂತರವಾಗಿ ಎಚ್‌.ಡಿ.ಕುಮಾರಸ್ವಾಮಿ ಆರೋಪಗಳ ಸುರಿಮಳೆಗೈದಿದ್ದರು. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನೂ ಮಾಡಿದ್ದರು. ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟೊಂಕ ಕಟ್ಟಿ ನಿಂತು ಜಿ.ಟಿ.ದೇವೇಗೌಡರನ್ನು ಕಣಕ್ಕಿಳಿಸಿ ಸೋಲಿಸಿದ್ದರು. 2018ರ ವಿಧಾನಸಭೆ ಚುನಾವಣೆ ನಂತರ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಅನಿವಾರ್ಯವಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಬೇಕಾಗಿ ಬಂದು ಕುಮಾರಸ್ವಾಮಿಯವರು ಮುಖ್ಯಮಂತ್ರಿ ಯಾಗಬೇಕಾಯಿತು.

ಮೇಲ್ನೋಟಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿದ್ದರೂ ಸರ್ಕಾರದಲ್ಲಿ ಸಮನ್ವಯತೆ ಇರಲಿಲ್ಲ. ಮೊದಲ ದಿನದಿಂದಲೇ ಅಸಮಾಧಾನ, ಅತೃಪ್ತಿಯಲ್ಲೇ ಮುಂದುವರಿದಿತ್ತು. ಲೋಕಸಭೆ ಚುನಾವಣೆಯಲ್ಲೂ ಬಲವಂತದ ಮೈತ್ರಿ ಎರಡೂ ಪಕ್ಷಗಳ ನಡುವೆ ಪ್ರಾರಂಭವಾಗಿ ಪರಸ್ಪರ ಕಾಳೆಲೆಯುವಿಕೆಯಿಂದಾಗಿ ಎರಡೂ ಪಕ್ಷಗಳು ನೆಲಕಚ್ಚುವಂತಾಗಿ ಅದರ ಪ್ರತಿಫ‌ಲ ಅಂತಿಮವಾಗಿ ಸಮ್ಮಿಶ್ರ ಸರ್ಕಾರ ಪತನಗೊಂಡಿತು. ಇದೀಗ ಮತ್ತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಎನ್ನುವುದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ನಡುವೆ ಮಾತಿನ ಸಮರ ಪ್ರಾರಂಭವಾಗಿದ್ದು, ಇದು ಎಲ್ಲಿಗೆ ಹೋಗಿ ನಿಲ್ಲಬಹುದು, ರಾಜ್ಯ ರಾಜಕಾರಣದ ಮೇಲೆ ಇದರ ಪರಿಣಾಮ ಏನಾಗಬಹುದು ಎಂಬ ಚರ್ಚೆಗಳು ನಡೆದಿವೆ.

Advertisement

ಕಾರ್ಯಕರ್ತರಿಗೆ ಇರುಸು ಮುರುಸು: ಸಮ್ಮಿಶ್ರ ಸರ್ಕಾರ ಇದ್ದಾಗ ಅಕ್ಕ-ಪಕ್ಕದಲ್ಲಿ ಕುಳಿತು ಬಿಜೆಪಿ ದೂರ ಇಡಲು ಒಂದಾಗಿದ್ದೇವೆ. ಉತ್ತಮ ಆಡಳಿತ ನೀಡಲು ಒಂದಾಗಿದ್ದೇವೆಂದು ಹೇಳುತ್ತಿದ್ದವರು ಇದೀಗ ಒಬ್ಬರ ಮೇಲೊಬ್ಬರು ಟೀಕೆ ಮಾಡುತ್ತಿರುವುದು ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರಿಗೆ ಒಂದು ರೀತಿಯಲ್ಲಿ ಇರುಸು ಮುರುಸು ತಂದಿದೆ. ಉಪ ಚುನಾವಣೆಯಲ್ಲಿ ಇವರ ಹೇಳಿಕೆಗಳು ಎರಡೂ ಪಕ್ಷಗಳಿಗೆ ಡ್ಯಾಮೇಜ್‌ ಮಾಡಬಹುದು ಎಂಬ ಆತಂಕವೂ ಇದೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next