Advertisement

ಅತಿಯಾದರೆ ಅಮೃತವೂ ವಿಷ: ನಿಯಂತ್ರಣದಲ್ಲಿರಲಿ ಪಬ್ ಜಿ ಗೀಳಿನ ಮಾಯಾಲೋಕ

09:02 AM Sep 11, 2019 | keerthan |

ವಿಶ್ವದಾದ್ಯಂತ ಕ್ರೇಜ್ ಹುಟ್ಟು ಹಾಕಿರುವ ಮೊಬೈಲ್ ಗೇಮ್ ಗಳಲ್ಲಿ ಪಬ್ ಜಿ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಯುವಜನಾಂಗವನ್ನುಇದು ಆಕರ್ಷಿಸುತ್ತಿದೆ. ಇದರ ವ್ಯಸನಕ್ಕೆ ಸಿಲುಕಿದವರು ಅದೆಷ್ಟೋ ಮಂದಿ. ಈ ಹಿಂದೆ ಬ್ಲೂ ವೇಲ್ ಗೇಮ್ ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿ ಅನೇಕರನ್ನು ಬಲಿ ಪಡೆದಿತ್ತು. ಅದರಷ್ಟೇ ಮಾರಕ ಈ ಅಪಾಯಕಾರಿ ಗೇಮ್ ಕೂಡ.

Advertisement

ಸಮೀಕ್ಷೆಯೊಂದರ ಪ್ರಕಾರ ಭಾರತದ ಮೋಸ್ಟ್ ಪಾಪ್ಯುಲರ್ ಗೇಮ್ ಗಳಲ್ಲಿ ಇದು ಕೂಡ ಒಂದು. ಹೊಸ ಹೊಸ ಅಪ್ಡೇಟ್ ಗಳೊಂದಿಗೆ ಪ್ರತಿನಿತ್ಯ ಸುದ್ದಿಯಲ್ಲಿರುತ್ತದೆ. ಇದೊಂದು ಬ್ಯಾಟಲ್ ಫೀಲ್ಡ್ ಗೇಮ್. ಇದನ್ನು ಸ್ನೇಹಿತರೊಂದಿಗೂ ಕೂಡಿ ಆಡಬಹುದು. ಈ ಗೇಮ್ ನಲ್ಲಿ ಸಾವಿರಾರು ಜನರು ಮುಳುಗಿ ಹೋಗಿದ್ದು, ಅದರಲ್ಲೂ ಯುವಪೀಳಿಗೆ ಈ ಲೋಕವನ್ನೇ ಮರೆಯುತ್ತಿದ್ದಾರೆ. ಈ ಗೇಮ್ ಆಟಗಾರರು ಭ್ರಮಾಲೋಕದಲ್ಲೇ ಹೆಚ್ಚಾಗಿ ಇರುವುದರಿಂದ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ .

ಪಬ್ ಜಿ ಶಸ್ತ್ರಾಸ್ತ್ರಗಳನ್ನು ಬಳಸಿ ಲೈವ್ ನಲ್ಲಿ ಎದುರಾಳಿಗಳನ್ನು ಹೊಡೆದುರುಳಿಸುವ ರೋಮಾಂಚಕಾರಿ ಗೇಮ್. ಅದ್ಭುತ ಗ್ರಾಫಿಕ್ಸ್ , ಫೀಚರ್ಸ್ ಮತ್ತು ಸೌಂಡ್ ಎಫೆಕ್ಟ್ ನಿಂದ ಅತಿ ಕಡಿಮೆ ಸಮಯದಲ್ಲಿ ವಿಶ್ವದ ಗೇಮ್ ಪ್ರಿಯರನ್ನು ಸೆಳೆದುಕೊಳ್ಳಲು ಯಶಸ್ವಿಯಾಗಿತ್ತು. ಯುದ್ಧಭೂಮಿಯಂತೆ ಅನುಭವ ಕೊಡುವ ಈ ಪಬ್ ಜಿ ಗೇಮ್ ಅನ್ನು ಆಡದಂತೆ ಭಾರತೀಯ ಸೇನೆ ಸೈನಿಕರಿಗೆ ಈ ಹಿಂದೆ ಆದೇಶ ನೀಡಿತ್ತು. ಸೈನಿಕರು ಬಿಡುವು ಸಿಕ್ಕಾಗಲೆಲ್ಲಾ ಪಬ್ ಜಿ ಗೇಮ್ ಮೊರೆ ಹೋಗುತ್ತಿದ್ದುದು ಈ ಆದೇಶ ನೀಡಲು ಪ್ರಮುಖ ಕಾರಣ.

ಈ ಗೇಮ್ ಚಟಕ್ಕೆ ದಾಸರಾದವರೆಷ್ಟೋ ಮಂದಿ ! ಮಹತ್ವದ ವಿಚಾರದಿಂದ ದೂರ ಇಟ್ಟು ಕೃತಕ ಪರಿಸರದಲ್ಲಿ ಜನರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್ ಗಳು ಮಾಡುತ್ತಿವೆ . ಈ ಗೇಮ್ ಕೇವಲ ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೇ ಜನರ ಮನಸ್ಸನ್ನು ಕದಡುತ್ತಿವೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಕೋಟ್ಯಾಂತರ ಜನ ನಿರರ್ಥಕವಾಗಿ ಕಳೆಯಲು ಈ ಗೇಮ್ ಗಳು ಕಾರಣವಾಗುತ್ತಿದೆ.

ಘಟನೆ ಒಂದು: 16 ವರ್ಷದ ಬಾಲಕನೊಬ್ಬ ಪಬ್ ಜಿ ವ್ಯಾಮೋಹಕ್ಕೆ ಗುರಿಯಾಗಿ ಯಾವಾಗಲೂ ತನ್ನ ಕೊಠಡಿಯಲ್ಲಿ ಕಾಲ ಕಳೆಯುತ್ತಿದ್ದ. ಕಾಲೇಜಿಗೂ ಹೋಗದೆ ಬೆಳಗ್ಗೆ ಸಂಜೆ ರಾತ್ರಿ ಅದರಲ್ಲೆ ಮುಳುಗಿರುತ್ತಿದ್ದ. ಇದನ್ನು ಕಂಡು ಆತಂಕಿತರಾದ ಪೋಷಕರು ಆ ಕುರಿತು ಪ್ರಶ್ನಿಸಿದ್ಧರು. ಇದರಿಂದ ಆಕ್ರೋಶಗೊಂಡ ಬಾಲಕ ತಂದೆ, ತಾಯಿ, ತಂಗಿಯನ್ನು ಇರಿದು ಕೊಂದಿದ್ದ.

Advertisement

ಘಟನೆ ಎರಡು : ಪಬ್ ಜಿ ಚಟಕ್ಕೆ ಬಿದ್ದಿದ್ದ ಬಾಲಕನೋರ್ವ ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಕೊಡಿಸಬೇಕೆಂದು ಪೋಷಕರಲ್ಲಿ ಪ್ರತಿನಿತ್ಯ ಬೇಡಿಕೆ ಇಡುತ್ತಿದ್ದ. ಆದರೇ ಪಾಲಕರು ನಯವಾಗಿ ತಿರಸ್ಕರಿಸಿದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾದ.

ಘಟನೆ ಮೂರು: ಜಿಮ್ ಟ್ರೈನರ್ ಒಬ್ಬ ನಿರಂತರ ಪಬ್ ಜಿ ಆಡಿದ ಪರಿಣಾಮ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಆಸ್ಪತ್ರಗೆ ದಾಖಲಾಗಿದ್ದ. ಪಿಯು ವಿದ್ಯಾರ್ಥಿಯೊಬ್ಬ ಸತತ ಆರು ಗಂಟೆಗಳ ಕಾಲ ಪಬ್ ಜಿ ಆಡಿ ಸೋಲನ್ನು ಅನುಭವಿಸಿ ಹತಾಶೆಯಿಂದ ಭಾವೋದ್ವೇಗವಾಗಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾನೆ.

ಘಟನೆ ನಾಲ್ಕು: ರಾತ್ರಿ- ಹಗಲು ಪಬ್ ಜಿ ಆಡುತ್ತಿದ್ದ ಮಗನಿಂದ ಮೊಬೈಲ್ ತೆಗೆದುಕೊಂಡು, ಬುದ್ದಿವಾದ ಹೇಳಿದ ತಂದೆಯನ್ನೆ ಭೀಕರವಾಗಿ ಹತ್ಯೆ ಮಾಡಿದ ಮಗ. ಈ ಎಲ್ಲಾ ಅವಾಂತರಗಳನ್ನು ಗಮನಿಸಿದಾಗ ಪಬ್ ಜಿ ಎನ್ನುವುದು ಮಾನಸಿಕ ಸ್ಥಿಮಿತ ತಪ್ಪಲು ಪ್ರಮುಖ ಕಾರಣವಾಗುತ್ತಿದೆ. ಇತರರೊಡನೆ ಹೆಚ್ಚು ಬೆರೆಯುವುದಿಲ್ಲಾ. ರಾತ್ರಿ ನಿದ್ದೆಗೆಟ್ಟು ಪಬ್ ಜಿ ಆಡುತ್ತಿರುವ ಕಾರಣ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಹೆಚ್ಚು ಹೆಚ್ಚು ಆಕ್ರಮಣ ಶೀಲರಾಗಿ ಸಂಯಮ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳಿಂದ ಹಿಡಿದು ದೊಡ್ಡವರು ಕೂಡ ಮೊಬೈಲ್ ಹಿಡಿದು ಪಬ್ ಜಿ ಗೇಮ್ ಆಡುತ್ತಾ ಕುಳಿತು ಬಿಡುತ್ತಿದ್ದಾರೆ.

ಸಮಿಕ್ಷೆಯೊಂದರ ಪ್ರಕಾರ 16ರಿಂದ25 ವಯಸ್ಸಿನ ಯುವಜನಾಂಗ ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತಿದೆ. ಈ ಆನ್ ಲೈನ್ ಗೇಮಿಂಗ್ ನಲ್ಲಿ ಜಗತ್ತಿನಾದ್ಯಂತ 1.2 ಬಿಲಿಯನ್ ಜನ ಮುಳುಗಿ ಹೋಗಿದ್ದಾರೆ.

ಯಾವುದೇ ಆಗಲಿ ಅತಿಯಾದರೆ ವಿಷವಾಗುವುದು ಖಂಡಿತಾ. ಅದೇ ರೀತಿ ಗೇಮ್ ಅನ್ನು ಕೂಡ ಅತಿಯಾಗಿಸಿಕೊಳ್ಳಬಾರದು. ಯಾವುದೇ ಗೇಮ್ ಎಷ್ಟು ಮನರಂಜನೆ ಕೊಡುತ್ತದೋ ಅಷ್ಟೇ ನಮ್ಮ ಮನಸ್ಥಿತಿಯನ್ನು ಕೆಡಿಸುತ್ತದೆ. ಮಾನಸಿಕ ಖಿನ್ನತೆಯಿಂದ ಬಳಲಲು ಇದು ಒಂದು ಕಾರಣ. ಕೃತಕ ಮನರಂಜನೆ ನೀಡುವ ಗೇಮ್ ಗಳಿಗಿಂತ , ದೇಹ , ಮನಸ್ಸಿಗೆ ಉಲ್ಲಾಸ ಮತ್ತು ಆಹ್ಲಾದಕರ ನೀಡುವಂತಹ ಹೊರಾಂಗಣ ಕ್ರೀಡೆಗಳೇ ಹೆಚ್ಚು ಆರೋಗ್ಯದಾಯಕ .

ತಾತ್ಕಾಲಿಕ  ಸಂತೋಷಕ್ಕಾಗಿ ಅರೋಗ್ಯದ ಮೇಲೆ ಪರಿಣಾಮ ಬೀರಿಸಿಕೊಳ್ಳುವದಕ್ಕಿಂತ ಸಾಮಾಜಿಕವಾಗಿ ಬೆರೆಯುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕಾಗಿ ಯುವ ಜನಾಂಗ ಹೆಚ್ಚಾಗಿ ದುಡಿಯಬೇಕಾಗಿದೆ.

ಮಿಥುನ್ ಮೊಗೇರ

Advertisement

Udayavani is now on Telegram. Click here to join our channel and stay updated with the latest news.

Next