Advertisement

ಮಹಾಲಿಂಗಪುರ ಶಾಸಕ ಸಿದ್ದು ಸವದಿ ವರ್ತನೆಗೆ ಜಿಲ್ಲಾ ಕಾಂಗ್ರೆಸ್‌ ಕೆಂಡಾಮಂಡಲ

01:22 PM Nov 13, 2020 | sudhir |

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ವೇಳೆ ಮಹಿಳಾ ಜನಪ್ರತಿನಿಧಿಗಳ
ಮೇಲೆ ನಡೆದ ದೌರ್ಜನ್ಯ ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್‌ನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ರಕ್ಷಿತಾ ಭರತಕುಮಾರ ಈಟಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಗೌರವಯುತ ಸ್ಥಾನವಿದೆ. ಪುರುಷ ಪ್ರಧಾನವಾಗಿದ್ದ ಸಮಾಜದಲ್ಲಿ ಈಗ ಮಹಿಳೆಗೆ ಸರಿಸಮಾನ ಹಕ್ಕು ನೀಡಲಾಗಿದೆ. ಅದಕ್ಕಾಗಿಯೇ ದೇಶ, ರಾಜ್ಯದ ಪ್ರತಿಯೊಂದು ನಗರ-ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಮಹಿಳಾ ಮೀಸಲಾತಿಯನ್ನು ಸಂವಿಧಾನಬದ್ಧವಾಗಿ ನೀಡಿದ್ದು, ಅನೇಕ ಮಹಿಳೆಯರು ಅಧಿಕಾರಕ್ಕೆ ಬಂದಿದ್ದಾರೆ. ಜಿಲ್ಲೆಯ ಮಹಾಲಿಂಗಪುರ ಪುರಸಭೆಯಲ್ಲೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಹಲವು ಮಹಿಳೆಯರು ಸದಸ್ಯೆಯರಾಗಿ ಆಯ್ಕೆಗೊಂಡು, ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ನ. 9ರಂದು ನಡೆದ ಅಲ್ಲಿನ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಆಡಳಿತಾರೂಢ ಹಾಗೂ ಸಂಸ್ಕೃತಿ, ಶಿಸ್ತು ಎಂದು ಹೇಳಿಕೊಳ್ಳುವ ಬಿಜೆಪಿ ಪಕ್ಷದ ಶಾಸಕರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ಸಿದ್ದು ಸವದಿ ಹಾಗೂ ಅವರ ಪಕ್ಷದ ಕೆಲ ಪ್ರಮುಖರು, ಮಹಿಳಾ ಜನ ಪ್ರತಿನಿಧಿಗಳ ಮೇಲೆಹೀನಾಯವಾಗಿ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಗೆಲವು ಖಚಿತ: ಎನ್. ರವಿಕುಮಾರ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿಗಳಾಗಲಿ, ಸಾಮಾನ್ಯ ಮಹಿಳೆಯರಾಗಲಿ ಯಾವುದೇ ನಿರ್ಧಾರಗಳಿಗೆ ಸ್ವತಂತ್ರರಾಗಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಮೂವರು ಮಹಿಳಾ ಸದಸ್ಯರಲ್ಲಿ ಓರ್ವ ಮಹಿಳಾ ಸದಸ್ಯೆಯನ್ನು ಪುರಸಭೆ ಕಚೇರಿಯ ಮುಖ್ಯ ಗೇಟ್‌ನಿಂದಲೇ ಬಿಜೆಪಿಯವರು ಅಪಹರಿಸಿ, ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮಾಡಿದ್ದಾರೆ.

ಆ ಮೂಲಕ ಆ ಮಹಿಳಾ ಸದಸ್ಯೆಯ ಸಂವಿಧಾನಬದ್ಧ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಇನ್ನಿಬ್ಬರು ಮಹಿಳೆಯರು ಪುರಸಭೆ ಕಚೇರಿಯೊಳಗೆ ಪ್ರವೇಶ ಮಾಡುವಾಗ ಸ್ವತಃ ಉನ್ನತ ಹುದ್ದೆಯಲ್ಲಿರುವ ಶಾಸಕ ಸಿದ್ದು ಸವದಿ ಹಾಗೂ ಬಿಜೆಪಿ ಮುಖಂಡರು, ಅನುಚಿತವಾಗಿ ನಡೆದುಕೊಂಡಿದ್ದಾರೆ. ಮಹಿಳಾ ಜನಪ್ರತಿನಿಧಿಗಳಾ ಸವಿತಾ ಹುರಕಡ್ಲಿ ಮತ್ತು ಚಾಂದಿನಿ ನಾಯಕ ಅವರನ್ನು
ಎಳೆದಾಡಿ, ಒಳಗೆ ಪ್ರವೇಶ ಮಾಡದಂತೆ ತಡೆಯೊಡ್ಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯ ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಚಾಂದಿನಿ ನಾಯಕ ಮೂರು ತಿಂಗಳ ಗರ್ಭಿಣಿ ಇದ್ದು, ಅಂತಹ ಮಹಿಳೆಯನ್ನು ತಳ್ಳಾಡಿ, ನೂಕಿರುವುದು ಅಪರಾಧ ಎಂದರು.

Advertisement

ಈ ಘಟನೆ ನಡೆದಾಗ ಸಿಪಿಐ, ಪಿಎಸ್‌ಐ ಸಹಿತ ಹಲವಾರು ಪೊಲೀಸರು ಎದುರಿಗಿದ್ದಾರೆ. ಇಂತಹ ಕೃತ್ಯವನ್ನು ತಕ್ಷಣ ತಡೆದು, ಮಹಿಳೆಯರಿಗೆ ಸೂಕ್ತ ರಕ್ಷಣೆ ಕೊಡಬೇಕಿತ್ತು. ಘಟನೆ ನಡೆದ ದಿನವೇ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ಘಟನೆ ಕುರಿತು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ ಈ ಘಟನೆಯಲ್ಲಿ ಮಹಾಲಿಂಗಪುರ ಠಾಣೆಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತದೆ ಎಂದು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಯಾರೇ ತಪ್ಪು ಮಾಡಿದರೂ ತಕ್ಷಣ ಕಠಿಣ ಕ್ರಮ ಕೈಗೊಂಡು, ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ಮಹಿಳಾ ಘಟಕದ ಪ್ರಮುಖರಾದ ರೇಣುಕಾ ನ್ಯಾಮಗೌಡ, ಜಯಶ್ರೀ ಗುಳಬಾಳ, ರೇಣುಕಾ ನಾರಾಯಣಕರ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ಪಕ್ಷದ ಜಿಲ್ಲಾ ವಕ್ತಾರ ನಾಗರಾಜ
ಹದ್ಲಿ, ಎಸ್‌.ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next