ಕೊಪ್ಪಳ: ರಾಜ್ಯದಲ್ಲಿ ಲವ್ ಜಿಹಾದ್ ಕಾಯ್ದೆ ಜಾರಿ ಮೂರ್ಖತನದ್ದು ಎಂದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅವರು ಸಿದ್ದು ಹೇಳಿಕೆಗೆ ತಿರುಗೇಟು ನೀಡಿದರು.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಲ್ಪ ಸಂಖ್ಯಾತರನ್ನು ತುಷ್ಟೀಕರಿಸಲು ಇಂತಹ ಹೇಳಿಕೆ ನೀಡಿದ್ದಾರೆ. ಆದರೆ ಹಿಂದೂ ಧರ್ಮದಲ್ಲಿ ನಮಗೆ ಅನ್ಯಾಯ ಆಗುತ್ತಿದೆ. ಅದನ್ನು ನಿಲ್ಲಿಸುವುದು ನಮ್ಮ ಕಲ್ಪನೆಯಾಗಿದೆ ಎಂದರು.
ಹೆಚ್ ವಿಶ್ವನಾಥ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ನಾವು ಗೌರವಿಸಬೇಕಿದೆ. ಹೈಕೋರ್ಟ್ ನಲ್ಲಿ ಅವರ ವಿರುದ್ಧವಾಗಿ ತೀರ್ಪು ಬಂದಿದೆ. ಮುಂದೆ ಸುಪ್ರೀಂ ಕೋರ್ಟ್ ನಲ್ಲಿ ಅವರ ಪರವಾಗಿ ನಾವು ಅಪೀಲು ಮಾಡುವ ಮೂಲಕ ಅವರಿಗೆ ನ್ಯಾಯ ಸಿಗುವ ಪ್ರಯತ್ನ ಮಾಡುವೆವು. ಸಿ.ಪಿ.ಯೋಗೇಶ್ವರ ಅವರೇ ನನ್ನ ಸೋಲಿಗೆ ಕಾರಣ ಎಂದಿರುವ ವಿಶ್ವನಾಥ ಅವರು, ತಮ್ಮ ವಯಕ್ತಿಕ ಹೇಳಿಕೆ ನೀಡಿದ್ದಾರೆ. ಆದರೆ ಅವರಿಗೆ ಬಿಜೆಪಿ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ. ಅಂಬಿಗನ ವಿಚಾರ ಮಾತನಾಡಿದ ಹೆಚ್ ವಿಶ್ವನಾಥ ಅವರು ಸಾಹಿತಿಗಳು, ಅನುಭವಿಗಳು ಹಲವು ಬಾರಿ ಹಾಸ್ಯ ಚಟಾಕಿ ಹಾರಿಸುತ್ತಾರೆ. ಅವರ ಹಾಸ್ಯ ಚಟಾಕಿಗಳು ನಮಗೆ ಶ್ರೀರಕ್ಷೆಯಾಗಲಿದೆ ಎಂದರು.
ಇದನ್ನೂ ಓದಿ:ಮಹಾರಾಷ್ಟ್ರ: ಚಿರತೆಗಳ ಸಾವಿನ ಪ್ರಮಾಣ ಶೇ.57ಕ್ಕೆ ಏರಿಕೆ! ಪ್ರಸಕ್ತ ವರ್ಷ 172 ಚಿರತೆಗಳ ಸಾವು
ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನಕ್ಕೆ ರಮೇಶ ಜಾರಕಿಹೊಳೆ ಅವರು ಬೇಡಿಕೆ ಇಟ್ಟಿರಬಹುದು. ಎಲ್ಲರಿಗೂ ಸಚಿವ ಆಗಬೇಕು ಎನ್ನುವ ಆಸೆ ಇರುತ್ತೆ. ಹಾಗಾಗಿ ಅವರ ಪರ ಬೇಡಿಕೆ ಇಟ್ಟಿರಬಹುದು. ಆದರೆ ಸಚಿವ ಸ್ಥಾನ ನೀಡುವುದು ಸಿಎಂ ಹಾಗೂ ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.
ಮೊಣಕಾಲ್ಮೂರು ಕ್ಷೇತ್ರವನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಸೇರ್ಪಡೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಯಾವುದೇ ಪ್ರಕ್ರಿಯೆ ನಡೆಯಬೇಕೆಂದರೂ ಕಾನೂನಿನ ಪ್ರಕ್ರಿಯೆಯಡಿ ನಡೆಯಬೇಕು. ಮತ್ತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಕಷ್ಟದ ಕೆಲಸ. ಅಲ್ಲದೆ ಈ ಮೀಸಲಿನಡಿ ಮೊಣಕಾಲ್ಮೂರು ಸೇರ್ಪಡೆ ಮಾಡುವ ಯಾವುದೇ ವಿಚಾರ ಸರ್ಕಾರದ ಮುಂದಿಲ್ಲ ಎಂದರು.