ಬೆಂಗಳೂರು: ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿ ಹಾಕಲಿ ಎಂಬ ಸಿದ್ದರಾಮಯ್ಯ ಸವಾಲು ಸ್ವೀಕರಿಸಲು ಸಿದ್ಧ ಎಂದು ಹೇಳಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, 14 ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸಿ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಎರಡು ಪಟ್ಟು ಹೆಚ್ಚು ಶ್ರಮ ಹಾಕುತ್ತೇನೆ ಎಂದು ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪು ಬರಲಿ ಎಂದು ನಾವು ಕಾಯುತ್ತಿದ್ದೆವು. ದೇವೇಗೌಡರ ಮಾರ್ಗದರ್ಶನದಲ್ಲಿ ಉಪ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದೇವೆ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರಿಗೆ ಬೆಂಬಲ ನೀಡಲು ತೀರ್ಮಾನಿಸಲಾಗಿದೆ. 14 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತೇವೆ. ನಾಳೆ ಮಧ್ಯಾಹ್ನದೊಳಗೆ ಅಭ್ಯರ್ಥಿಗಳು ಫೈನಲ್ ಆಗಲಿದ್ದಾರೆ ಎಂದರು.
ಈ ಉಪ ಚುನಾವಣೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಿಗೂ ಅಗ್ನಿ ಪರೀಕ್ಷೆ ಯಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಯಾವ ಒಳ ಅಥವಾ ಹೊರ ಒಪ್ಪಂದ ಇಲ್ಲ. ನಾನು ಮಾಡಿಕೊಳ್ಳುವುದಿದ್ದರೆ ಓಪನ್ ಒಪ್ಪಂದ ಮಾಡಿ ಕೊಳ್ಳುತ್ತೇನೆ. ಹೋರಾಟ ಮಾಡುವುದಾದರೆ ನೇರವಾಗಿಯೇ ಮಾಡುತ್ತೇನೆ ಎಂದರು.
ಸಿದ್ದು ವಿರುದ್ಧ ವಾಗ್ಧಾಳಿ: ಆರ್ಥಿಕ ತಜ್ಞರಾಗಿರುವ ಸಿದ್ದರಾಮಯ್ಯ ಅವರು ತಾನೇನೋ ಸಾಧನೆ ಮಾಡಿದ್ದೇನೆ ಎಂದು ಹೇಳಿದ್ದಾರೆ. ಅವರ ಕಾಲದಲ್ಲಿ ರೂಪಿಸಿದ ವಸತಿ ಯೋಜನೆಗಳಿಗೆ ಮುಂದಿನ ಹತ್ತು ವರ್ಷ ಆಡಳಿತ ನಡೆಸೋರು 28 ಸಾವಿರ ಕೋಟಿ ರೂ. ಹಣ ಕೊಡಬೇಕಾಗಿದೆ. ನೀರಾವರಿ ಯೋಜನೆಗಳಿಗೆ 1.3 ಲಕ್ಷ ಕೋಟಿ ಎಂದು ಘೋಷಿಸಿದ್ದಾರೆ.
ಎಷ್ಟು ಹಣ ಇಟ್ಟಿದ್ದರು ಎಂಬುದನ್ನು ಹೇಳಬೇಕು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿ ಇದ್ದಿದ್ದರೆ ರಾಜು ಕಾಗೆ ಅವರನ್ನು ಯಾಕೆ ಸೇರಿಸಿಕೊಳ್ಳುತ್ತಿದ್ದರು. ಜೆಡಿಎಸ್‌ಗೆ ಶಕ್ತಿ ಇಲ್ಲ ಎಂದಾದರೆ ನಮ್ಮ ಪಕ್ಷದ ನಾಯಕರ ಮನೆ ಬಾಗಿಲು ಯಾಕೆ ಬಡಿಯುತ್ತಿದ್ದಾರೆ. ನನಗೆ ಎಲ್ಲ ಪಕ್ಷಗಳ ಹಣೆಬರಹ ಗೊತ್ತಿದೆ ಎಂದರು.
ನಮ್ಮ ಪಕ್ಷದಿಂದ ಮತ್ತೊಂದು ವಿಕೆಟ್ ಹೋಗುತ್ತೆ. ಜಿ.ಟಿ.ದೇವೇಗೌಡರು ಹೋಗೇ ಬಿಟ್ಟರು ಎನ್ನುತ್ತಿದ್ದಾರೆ. ಇನ್ನು ಆ ಪುಟ್ಟಣ್ಣ ಎರಡೂವರೆ ವರ್ಷದ ಹಿಂದೆಯೇ ಟೋಪಿ ಹಾಕಿ ಹೋಗಿರುವ ಗಿರಾಕಿ. ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಇನ್ನೂ ಇದ್ದಾರೆ ಎಂದು ಹೇಳಿದರು.