Advertisement
ಲೋಕಸಭೆ ಚುನಾವಣೆ ಪ್ರಕ್ರಿಯೆಗೂ ಮುಂಚೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಕಾಂಗ್ರೆಸ್‌ನ ಹಲವು ಮಾಜಿ ಸಚಿವರು ಹಾಗೂ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಟಿಕೆಟ್‌ಗೆ ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಿಟ್ಟು ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಸಿದ್ದರಾಮಯ್ಯ ತಮ್ಮ ಆಪ್ತರಿಗೆ ಹೇಳಿದ್ದರು ಎನ್ನಲಾಗಿದೆ.
Related Articles
Advertisement
ರಾಜ್ಯದಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವುದರಿಂದ ಸುಮಾರು 60ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ.
ಅದು ಮುಂದಿನ ವಿಧಾನಸಭೆ ಚುನಾವಣೆಗಳಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಕಷ್ಟವಾಗುತ್ತದೆ. ಹೀಗಾಗಿ ಈಗಿರುವ ಮೈತ್ರಿ ಹೊರತಾಗಿ ಇತರ ಚುನಾವಣೆಗಳಲ್ಲಿ ಮೈತ್ರಿ ಬೇಡ ಎಂಬ ಅಭಿಪ್ರಾಯವನ್ನು ಸಿದ್ದರಾಮಯ್ಯ ವ್ಯಕ್ತಪಡಿಸಿದ್ದರು ಎಂಬ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಫಲಿತಾಂಶ ಬಳಿಕ ಉತ್ತರ: ಈಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮೈತ್ರಿ ಪಕ್ಷಗಳಲ್ಲಿ ಗೊಂದಲ ಅಥವಾ ಬಿಜೆಪಿ ಆಪರೇಷನ್ ಕಮಲದ ಮೂಲಕ ಸರ್ಕಾರ ಕೆಡವಲು ಮುಂದಾದರೆ, ಸರ್ಕಾರ ಉಳಿಸಿಕೊಳ್ಳಲು ಬೇಕಾದ ಕಾರ್ಯತಂತ್ರ ರೂಪಿಸುವುದು.
ಒಂದು ವೇಳೆ, ರಮೇಶ್ ಜಾರಕಿಹೊಳಿ ಹಾಗೂ ಅವರೊಂದಿಗೆ ಗುರುತಿಸಿಕೊಂಡ ಶಾಸಕರು ರಾಜೀನಾಮೆ ನೀಡಿದರೆ, ಸರ್ಕಾರದ ಬಹುಮತಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡದೇ, ಮೈತ್ರಿ ಸರ್ಕಾರವನ್ನು ವಿಸರ್ಜಿಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲು ಮುಖ್ಯಮಂತ್ರಿಗೆ ಒತ್ತಡ ತರುವ ಬಗ್ಗೆಯೂ ಒಂದು ವರ್ಗ ಚಿಂತಿಸಿದೆ.
ಆದರೆ, ಸರ್ಕಾರ ವಿಸರ್ಜನೆಯನ್ನು ಮುಖ್ಯಮಂತ್ರಿ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕು ಮತ್ತು ಕುಮಾರಸ್ವಾಮಿ ತಮ್ಮ ಸರ್ಕಾರವನ್ನು ವಿಸರ್ಜಿಸುತ್ತಾರೆಯೇ ಅಥವಾ ಸರ್ಕಾರ ಉಳಿಸಲು ಯತ್ನ ಮುಂದುವರಿಸುವರೇ ಎಂಬುದಕ್ಕೆ ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ಉತ್ತರ ಸಿಗಲಿದೆ.
* ಶಂಕರ ಪಾಗೋಜಿ